ನ್ಯೂಸ್

Jammu & Kashmir: ನ್ಯಾಷನಲ್ ಕಾನ್ಫರೆನ್ಸ್‌ಗೆ ಇನ್ನೂ 4 ಶಾಸಕರು!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ(Jammu & Kashmir)ದಲ್ಲಿ ಸರ್ಕಾರ ರಚನೆಯ ಪ್ರಯತ್ನಗಳು ತೀವ್ರಗೊಂಡಿದ್ದು, ನ್ಯಾಷನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಈ ನಡುವೆ ಏಳು ಪಕ್ಷೇತರ ಶಾಸಕರ ಪೈಕಿ ನಾಲ್ವರು ಎನ್‌ಸಿ ಸೇರುವ ಸಾಧ್ಯತೆ ಇದೆ. ಇದರೊಂದಿಗೆ ಆ ಪಕ್ಷದ ಬಲ 46ಕ್ಕೆ ಏರಿಕೆಯಾಗಲಿದೆ.

ನ್ಯಾಷನಲ್ ಕಾನ್ಫರೆನ್ಸ್‌ ಸರ್ಕಾರ ರಚಿಸಿದರೆ, ಒಮರ್ ಅಬ್ದುಲ್ಲಾ ಸಂಪುಟದಲ್ಲಿ ಕಾಂಗ್ರೆಸ್ ನ ಬಂಡಾಯ ಸ್ವತಂತ್ರ ಅಭ್ಯರ್ಥಿಯನ್ನು ಸಚಿವರನ್ನಾಗಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಚುನಾವಣಾ ಫಲಿತಾಂಶದಲ್ಲಿ ಏಳು ಸ್ವತಂತ್ರ ಅಭ್ಯರ್ಥಿಗಳು ಜಯಶಾಲಿಯಾಗಿದ್ದಾರೆ. ಈ ಪೈಕಿ ಮೂವರು ನ್ಯಾಷನಲ್‌ ಕಾನ್ಫರೆನ್ಸ್‌ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ಪಕ್ಷದೊಂದಿಗೆ ಸಂಬಂಧ ಮುರಿದುಕೊಂಡು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಗೆದ್ದಿದ್ದಾರೆ.

ರಾಜೌರಿಯ ತನ್ನಮಂಡಿ ಕ್ಷೇತ್ರದಲ್ಲಿ ಬಿಜೆಪಿಯ ಮೊಹಮ್ಮದ್ ಇಕ್ಬಾಲ್ ಮಲಿಕ್ ಅವರನ್ನು 6179 ಮತಗಳ ಅಂತರದಿಂದ ಸೋಲಿಸಿದ ಮಾಜಿ ನ್ಯಾಯಾಧೀಶ ಮುಜಾಫರ್ ಇಕ್ಬಾಲ್ ಖಾನ್ ಅವರು ಎನ್‌ಸಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.