ಜಮ್ಮು ಕಾಶ್ಮೀರ: ಭದ್ರತಾ ಪಡೆಗಳು ಕಾಶ್ಮೀರದ ಅವಂತಿಪುರ(ಅವಂತಿಪೋರಾ) ಎಂಬಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದೆ.
ಸೇನೆಯ ರಾಷ್ಟ್ರೀಯ ರೈಫಲ್ಸ್, ಸಿಆರ್ಪಿಎಫ್ ಮತ್ತು ಸ್ಥಳಿಯ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅವಂತಿಪುರ ಬಳಿಯ ಸತ್ ಪೋಕ್ರಾನ್ ಎಂಬಲ್ಲಿ ಗುಂಡಿನ ಚಕಮಕಿ ನಡೆದಿದೆ.
ಸತ್ಪೋಕ್ರಾನ್ ಪ್ರದೇಶದಲ್ಲಿ ಕೆಲವು ಉಗ್ರರ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದವು. ಆಗ ಗುಂಡಿನ ದಾಳಿ ನಡೆಸಲಾಯಿತು. ನಂತರ ಹೆಚ್ಚುವರಿ ಪಡೆಗಳು ಆಗಮಿಸಿವೆ.
ಜಮ್ಮು ಕಾಶ್ಮೀರ ಪೊಲೀಸರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅವಂತಿಪುರ ಬಳಿಯಲ್ಲಿ ಗುಂಡಿನ ದಾಳಿ ನಡೆಯುತ್ತಿದೆ. ಪೊಲೀಸ್ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿ ನಿರತವಾಗಿವೆ ಎಂದು ತಿಳಿಸಿದೆ.
ಪುಲ್ವಾಮಾದಲ್ಲಿ ಪೆಟ್ರೋಲ್ ಬಾಂಬ್ ದಾಳಿ ನಡೆದ ಒಂದು ದಿನದ ಬಳಿಕ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ದಾಳಿಯಲ್ಲಿ ಯಾವ ಹಾನಿಯಾದ ಬಗ್ಗೆ ಈವರೆಗೆ ವರದಿಯಾಗಿಲ್ಲ.
ಪುಲ್ವಾಮಾ ಬಳಿಯ ನೇವಾ ಎಂಬಲ್ಲಿ ಸೋಮವಾರ ಸಂಜೆ ಸಿಆರ್ಪಿಎಫ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಂಬ್ ದಾಳಿಯಿಂದ ಯಾವ ನಷ್ಟವೂ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೊನ್ನೆಯಷ್ಟೇ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಭದ್ರತಾ ಪಡೆಗಳ ಮುಖಾಮುಖಿಯಲ್ಲಿ ಪೊಲೀಸ್ ಕೆಲಸ ಬಿಟ್ಟು ಹೋಗಿದ್ದವರು ಸೇರಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರು ಸಾವನ್ನಪ್ಪಿದ್ದರು. (ಏಜೆನ್ಸೀಸ್)