ನವದೆಹಲಿ: ಆರ್ಟಿಕಲ್ 370 ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದು, ಕೇಂದ್ರ ಚುನಾವಣಾ ಆಯೋಗ ಇಂದು (ಆಗಸ್ಟ್ 16) ದಿನಾಂಕವನ್ನು ಘೋಷಣೆ ಮಾಡಿದೆ. ಒಟ್ಟು 3 ಹಂತಗಳಲ್ಲಿ ಕಣಿವೆ ರಾಜ್ಯ ಮತದಾನ ಎದುರಿಸಲಿದೆ.
ಸೆಪ್ಟೆಂಬರ್ 18ಕ್ಕೆ ಮೊದಲ ಹಂತದ ಮತದಾನ ನಡೆಯಲಿದೆ. ಸೆಪ್ಟೆಂಬರ್ 25ಕ್ಕೆ ಎರಡನೇ ಹಾಗೂ ಅಕ್ಟೋಬರ್ 1ಕ್ಕೆ ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ. ಚುನಾವಣೆಯ ಫಲಿತಾಂಶ ಅಕ್ಟೋಬರ್ 4ಕ್ಕೆ ಹೊರಬೀಳಲಿದೆ. ಶುಕ್ರವಾರ (ಆ.16) ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿತು.
90 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಜಮ್ಮು-ಕಾಶ್ಮೀರಕ್ಕೆ 2014ರಿಂದಲು ಚುನಾವಣೆ ನಡೆದಿರಲಿಲ್ಲ. 2018ರಿಂದಲೂ ಕಣಿವೆ ರಾಜ್ಯ ರಾಜ್ಯಪಾಲರ ಆಡಳಿತದಲ್ಲಿತ್ತು. ಕೇಂದ್ರ ಸರ್ಕಾರದಿಂದ ಆರ್ಟಿಕಲ್ 370 ರದ್ದಾದ ಬಳಿಕ ಕಾಶ್ಮೀರದಲ್ಲಿ ಚುನಾವಣೆ ನಡೆದಿರಲಿಲ್ಲ. ಇದೀಗ ಕೊನೆಗೂ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕಣಿವೆ ರಾಜ್ಯದಲ್ಲಿ ಪ್ರಜಾಪ್ರಭುತ್ವ ಮರಳಿದೆ.
ಅಮರನಾಥ ಯಾತ್ರೆ ಮುಗಿದ ಮರುದಿನ ಅಂದರೆ ಆಗಸ್ಟ್ 20 ರೊಳಗೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಸುಮಾರು 87 ಲಕ್ಷ ಮತದಾರರು ಈ ಬಾರಿ ಮತ ಚಲಾಯಿಸುವ ನಿರೀಕ್ಷೆಯಿದೆ. ಜಮ್ಮು ಕಾಶ್ಮೀರದ ಜನರು ಬದಲಾವಣೆಯನ್ನು ಎದುರು ನೋಡುತ್ತಿದ್ದಾರೆ ಮತ್ತು ಹೊಸ ಭವಿಷ್ಯವನ್ನು ರಚಿಸಲು ಬಯಸಿದ್ದಾರೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಈ ವರ್ಷದ ಸೆಪ್ಟೆಂಬರ್ 30 ರೊಳಗೆ ವಿಧಾನಸಭೆ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. 370ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಮಾಡಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆ ನಡೆಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕ್ರಮವನ್ನು ನ್ಯಾಯಾಲಯ ಎತ್ತಿ ಹಿಡಿಯಿತು. ಅಲ್ಲದೆ, ಆದಷ್ಟು ಬೇಗ ಕಣಿವೆ ರಾಜ್ಯದಲ್ಲಿ ಪ್ರಜಾಪ್ರಭುತ್ವ ಸರ್ಕಾರ ನೆಲೆಸುವಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. ಇದೀಗ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಪ್ರಜಾಪ್ರಭುತ್ವದ ಹಬ್ಬಕ್ಕೆ ಕಣಿವೆ ರಾಜ್ಯ ಎದುರು ನೋಡುತ್ತಿದೆ. (ಏಜೆನ್ಸೀಸ್)