ನ್ಯೂಸ್

Jammu and Kashmir | ಕುಲ್ಗಾಮ್​ನಲ್ಲಿ ಎನ್​ಕೌಂಟರ್​, ಇಬ್ಬರು ಉಗ್ರರ ಹತ್ಯೆ, ಐದು ಯೋಧರಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಇಂದು (ಶನಿವಾರ) ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಹತ್ಯೆಯಾದ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಕುಲ್ಗಾಮ್ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಜಿಲ್ಲೆಯ ದೇವ್‌ಸರ್ ಪ್ರದೇಶದ ಅಡಿಗಂ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ಇಂದು ಬೆಳಿಗ್ಗೆಯಿಂದಲೇ ಆರಂಭವಾಗಿತ್ತು.

ಈ ಗುಂಡಿನ ಚಕಮಕಿಯಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಸಂಚಾರ) ಮುಮ್ತಾಜ್ ಅವರಿಗೆ ಗಾಯವಾಗಿದ್ದು, ಉಳಿದಂತೆ ಐವರು ಯೋಧರು ಗಾಯಗೊಂಡಿದ್ದಾರೆ. ಅವಳಿ ದಾಳಿಯ ನಂತರ ಭದ್ರತಾ ಪಡೆಗಳು ತಮ್ಮ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದವು. ಆ ವೇಳೆ ಅಡಗಿಕೊಂಡಿದ್ದ ಭಯೋತ್ಪಾದಕರಿಂದ ಪೊಲೀಸರ ಮೇಲೆ ಭಾರೀ ಗುಂಡಿನ ದಾಳಿ ನಡೆಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ 3 ನೇ ಹಂತಕ್ಕೆ ಮುಂಚಿತವಾಗಿ ಎನ್‌ಕೌಂಟರ್ ನಡೆದಿದೆ. ಮೊದಲ ಹಂತದ ವಿಧಾನಸಭಾ ಚುನಾವಣೆ ಸೆಪ್ಟೆಂಬರ್ 18 ರಂದು ನಡೆದಿದ್ದರೆ, ಎರಡನೇ ಹಂತದ ಮತದಾನ ಸೆಪ್ಟೆಂಬರ್ 25 ರಂದು ಗಂದರ್ಬಾಲ್, ಬುದ್ಗಾಮ್, ಶ್ರೀನಗರ ಮತ್ತು ಜಮ್ಮು ಪ್ರದೇಶದ ರಜೌರಿ, ರೈಸಿ ಮತ್ತು ಪೂಂಚ್ ನಲ್ಲಿ ನಡೆಯಲಿದೆ.

ಅಕ್ಟೋಬರ್ 1 ರಂದು ಮೂರನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಹತ್ತು ವರ್ಷಗಳ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುತ್ತಿದ್ದು, 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆಯುತ್ತಿದೆ.