ನ್ಯೂಸ್

ನಾರ್ಕೊ-ಟೆರರ್​​​ ಲಿಂಕ್​​; ಪಾಕಿಸ್ತಾನದ ಐಎಸ್​ಐ ಜತೆ ನಂಟು ಹೊಂದಿದ್ದ ಆರು ಅಧಿಕಾರಿಗಳು ವಜಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಡ್ರಗ್ಸ್​​​ ಮಾರಾಟದ ಮೂಲಕ ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿದ್ದ ಆರೋಪದ ಮೇಲೆ ಐವರು ಪೊಲೀಸರು ಸೇರಿದಂತೆ ಆರು ಸರ್ಕಾರಿ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ.

ಈ ಅಧಿಕಾರಿಗಳು ಪಾಕಿಸ್ತಾನದ ಇಂಟರ್​​ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಮತ್ತು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ವಿವಿಧ ಭಯೋತ್ಪಾದಕ ಗುಂಪುಗಳಿಂದ ಆಯೋಜಿಸಲಾದ ಅತ್ಯಾಧುನಿಕ ನಾರ್ಕೊ-ಟೆರರ್ ನೆಟ್‌ವರ್ಕ್‌ನ ಭಾಗವಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಐವರು ಪೊಲೀಸರು ಮತ್ತು ಓರ್ವ ಶಿಕ್ಷಕ ಮಾದಕವಸ್ತು ಮಾರಾಟದ ಮೂಲಕ ಭಯೋತ್ಪಾದನೆಗೆ ಹಣಕಾಸು ಒದಗಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಹೆಡ್​​​ಕಾನ್‌ಸ್ಟೆಬಲ್ ಫಾರೂಕ್ ಅಹ್ಮದ್ ಶೇಖ್, ಕಾನ್‌ಸ್ಟೆಬಲ್ ಖಾಲಿದ್ ಹುಸಿಯಾನ್ ಶಾ, ಕಾನ್‌ಸ್ಟೆಬಲ್ ರೆಹಮತ್ ಶಾ, ಕಾನ್‌ಸ್ಟೆಬಲ್ ಇರ್ಷಾದ್ ಅಹ್ಮದ್ ಚಲ್ಕೂ, ಕಾನ್‌ಸ್ಟೆಬಲ್ ಸೈಫ್ ದಿನ್ ಮತ್ತು ಸರ್ಕಾರಿ ಶಿಕ್ಷಕ ನಜಮ್ ದಿನ್ ಎಂದು ಗುರುತಿಸಲಾಗಿದೆ ಎಂದು ಇಂಡಿಯಾಟುಡೇ ವರದಿ ಮಾಡಿದೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಂವಿಧಾನದ 311 (2) (ಸಿ) ಅಡಿಯಲ್ಲಿ ತಕ್ಷಣವೇ ಅವರ ಉದ್ಯೋಗವನ್ನು ಕೊನೆಗೊಳಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಸಂವಿಧಾನದ 311 (2) (ಸಿ) ಪ್ರಕಾರ, ರಾಷ್ಟ್ರಪತಿ ಅಥವಾ ರಾಜ್ಯಪಾಲರು, ಸಾರ್ವಜನಿಕ ಸೇವೆಯಲ್ಲಿ ಇಂತಹ ವ್ಯಕ್ತಿಯನ್ನು ಉಳಿಸಿಕೊಳ್ಳುವುದು ರಾಜ್ಯದ ಭದ್ರತೆಗೆ ಹಾನಿಕರವೆಂದು ಮನವರಿಕೆಯಾದಲ್ಲಿ ಸಾಮಾನ್ಯ ವಿಧಾನವನ್ನು ಅನುಸರಿಸದೆ ಉದ್ಯೋಗಿಯನ್ನು ವಜಾಗೊಳಿಸುವ ಅಧಿಕಾರವನ್ನು ಹೊಂದಿರುತ್ತಾರೆ.

2019ರಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ಆಡಳಿತವು ಇದೇ ಆಧಾರದ ಮೇಲೆ 70 ಸರ್ಕಾರಿ ನೌಕರರನ್ನು ವಜಾಗೊಳಿಸಿದೆ. ಕಳೆದ ತಿಂಗಳು ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ನಾರ್ಕೋ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ವಜಾಗೊಳಿಸಲಾಗಿತ್ತು. ಅವರನ್ನು ಪೊಲೀಸ್ ಪೇದೆಗಳಾದ ಮುಷ್ತಾಕ್ ಅಹ್ಮದ್ ಪಿರ್ ಮತ್ತು ಇಮ್ತಿಯಾಜ್ ಅಹ್ಮದ್ ಲೋನ್, ಶಾಲಾ ಶಿಕ್ಷಣ ಇಲಾಖೆಯ ಕಿರಿಯ ಸಹಾಯಕ ಬಾಜಿಲ್ ಅಹ್ಮದ್ ಮಿರ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಝೈದ್ ಶಾ ಎಂದು ಗುರುತಿಸಲಾಗಿದೆ.(ಏಜೆನ್ಸೀಸ್​​)