ಬಾಳೆಹೊನ್ನೂರಿನ ಬೈರೇಗುಡ್ಡ ಬಳಿ ಮುಖ್ಯರಸ್ತೆಯ ಬದಿಯಲ್ಲಿಯೇ ಜಲಜೀವನ್ ಕಾಮಗಾರಿಗಾಗಿ ಪೈಪ್‌ಲೈನ್ ಮಾಡಿರುವುದು. 
ನ್ಯೂಸ್

ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಜಲಜೀವನ್ ಕಿರಿಕಿರಿ

ಬಾಳೆಹೊನ್ನೂರು: ಕೇಂದ್ರ ಸರ್ಕಾರ ಮನೆ ಮನೆಗೂ ನೀರು ತಲುಪಿಸಲು ಆರಂಭಿಸಿರುವ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲಜೀವನ್ ಮಿಷನ್ ಕಾಮಗಾರಿಯು ಬಿ.ಕಣಬೂರು ಗ್ರಾಪಂ ವ್ಯಾಪ್ತಿಯಲ್ಲಿ ಅಸಮರ್ಪಕವಾಗಿ ನಡೆಯುತ್ತಿದ್ದು, ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಕಳೆದ ಕೆಲ ದಿನಗಳಿಂದ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಜಲಜೀವನ್ ಕಾಮಗಾರಿಗಾಗಿ ಕೆಲಸದ ಗುತ್ತಿಗೆ ಪಡೆದ ಗುತ್ತಿಗೆದಾರರು ಪೈಪ್‌ಲೈನ್ ನಿರ್ಮಾಣದ ಕಾರ್ಯವನ್ನು ಮಾಡುತ್ತಿದ್ದು, ಇದು ಹಲವು ಕಡೆಗಳಲ್ಲಿ ಅವ್ಯವಸ್ಥೆಯಿಂದ ಕೂಡಿದೆ.
ಪಟ್ಟಣದ ಶಾಂತಿನಗರ, ಮಾರಿಗುಡಿ ರಸ್ತೆ, ಪೇಟೆಕೆರೆ, ಸಂತೆ ಮಾರ್ಕೆಟ್ ರಸ್ತೆ, ಕೊಪ್ಪ ರಸ್ತೆ, ಹೊಳೆಬಾಗಿಲು, ಬೈರೇಗುಡ್ಡ ಮುಂತಾದ ಕಡೆಗಳಲ್ಲಿ ಪೈಪ್‌ಲೈನ್‌ಗಾಗಿ ಗುಂಡಿಯನ್ನು ತೆಗೆಯಲಾಗಿದೆ. ಆದರೆ ಸಮರ್ಪಕವಾಗಿ ಗುಂಡಿ ತೆಗೆದು ಪೈಪ್‌ಲೈನ್ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಹಲವು ಕಡೆಗಳಲ್ಲಿ ಗುಂಡಿ ತೆಗೆದು ಪೈಪ್ ಹಾಕಿದ ನಂತರ ಸರಿಯಾಗಿ ಮಣ್ಣು ಹಾಕದೇ ಮುಚ್ಚಲಾಗುತ್ತಿದೆ. ಇದೀಗ ಮಳೆಯೂ ಆರಂಭಗೊಂಡಿರುವುದರಿಂದ ಕೆಲವು ಕಡೆಗಳಲ್ಲಿ ಮಣ್ಣು ಕೊಚ್ಚಿಕೊಂಡು ಹೋಗಿ ಪೈಪ್‌ಲೈನ್ ಕಾಣುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಮಣ್ಣು ಸರಿಯಾಗಿ ಮುಚ್ಚದೆ ಇರುವುದರಿಂದ ರಸ್ತೆ ಬದಿಗೆ ಇಳಿದ ವಾಹನಗಳು ಪೈಪ್‌ಲೈನ್‌ಗಾಗಿ ತೆಗೆದ ಗುಂಡಿಗಳಲ್ಲಿ ಸಿಲುಕಿಕೊಳ್ಳುತ್ತಿವೆ.
ಪಟ್ಟಣದ ಬೈರೇಗುಡ್ಡ, ಹೊಳೆಬಾಗಿಲು, ಕೊಪ್ಪ ರಸ್ತೆಯಲ್ಲಿ ಮುಖ್ಯರಸ್ತೆಯ ಬದಿಯಲ್ಲಿಯೇ ಪೈಪ್‌ಲೈನ್‌ಗಾಗಿ ಎರಡೂ ಬದಿಯಲ್ಲಿ ಗುಂಡಿ ತೆಗೆದಿದ್ದು ಇದರಿಂದಾಗಿ ವಾಹನಗಳು ರಸ್ತೆ ಬಿಟ್ಟು ಕೆಳಗೆ ಇಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಮಳೆ ಬರುತ್ತಿರುವುದರಿಂದ ಪೈಪ್‌ಲೈನ್‌ನ ಗುಂಡಿಯ ಮಣ್ಣು ಕೆಸರುಮಯವಾಗಿದ್ದು ಬೈಕ್, ಕಾರು ಸೇರಿದಂತೆ ಕೆಲವು ವಾಹನಗಳು ಸಿಲುಕಿಕೊಂಡ ಘಟನೆಯೂ ನಡೆದಿದೆ. ಪಾದಚಾರಿಗಳು ಕೆಸರುಮಯ ಮಾರ್ಗದಲ್ಲಿ ಒದ್ದಾಡುತ್ತ ನಡೆಯುವಂತಾಗಿದೆ.
ಶಾಂತಿನಗರ, ಪೇಟೆಕೆರೆ, ಮಾರಿಗುಡಿ ರಸ್ತೆಯಲ್ಲಿ ಕೆಲವು ಕಡೆಗಳಲ್ಲಿ ಉತ್ತಮ ಕಾಂಕ್ರಿಟ್ ರಸ್ತೆಯನ್ನು ಅಗೆದು ಹಾಳುಗೆಡವಿ ಪೈಪ್‌ಲೈನ್ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಪೇಟೆಕೆರೆ ಭಾಗದಲ್ಲಿ ಪೈಪ್‌ಲೈನ್‌ಗಾಗಿ ತೆಗೆದ ಗುಂಡಿಯ ಮಣ್ಣು ಮಳೆಗೆ ಕೊಚ್ಚಿಕೊಂಡು ಹೋಗಿ ಕೆಲವು ಕೃಷಿಕರ ತೋಟ, ಗದ್ದೆಯಲ್ಲಿ ನಿಂತಿದೆ. ಕೊಪ್ಪ ರಸ್ತೆಯ ಅರಣ್ಯ ಇಲಾಖೆಯ ಮುಂಭಾಗದಲ್ಲಿ ಪೈಪ್‌ಲೈನ್‌ಗಾಗಿ ಮುಖ್ಯರಸ್ತೆಯನ್ನು ಅಗೆದಿದ್ದು ಅದನ್ನು ಡಾಂಬರ್ ಅಥವಾ ಸಿಮೆಂಟ್ ಹಾಕಿ ಮುಚ್ಚದೆ ಹಾಗೆಯೆ ಬಿಟ್ಟಿದ್ದಾರೆ. ಮುಖ್ಯರಸ್ತೆಯಲ್ಲಿ ಇದೀಗ ಹೊಂಡ ಬಿದ್ದಿದ್ದು ನಿತ್ಯ ಸಾವಿರಾರು ವಾಹನಗಳು ಅಪಘಾತದ ಭಯದಲ್ಲಿಯೇ ಸಂಚರಿಸುವಂತಾಗಿದೆ. ಕೆಲವು ಬೈಕ್ ಸವಾರರು ಗುಂಡಿ ಇರುವುದು ಅರಿಯದೆ ಕೆಳಗೆ ಬಿದ್ದ ಘಟನೆಯೂ ನಡೆದಿದೆ.