ನ್ಯೂಸ್

ಜಲನೀತಿ ಯೋಜನೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಂಸದ ಡಿ.ಕೆ. ಸುರೇಶ್ ಮಾಹಿತಿ

Ramanagara

ಕೂಟಗಲ್ : ರಾಷ್ಟ್ರೀಯ ಜಲನೀತಿ ಯೋಜನೆಯಡಿ ಜಿಲ್ಲೆಯಲ್ಲಿ 1800 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಕೂಟಗಲ್ ಹೋಬಳಿ ಲಕ್ಷ್ಮೀಪುರ ಗ್ರಾಪಂ ವ್ಯಾಪ್ತಿಯ ಗುಂಗರಹಳ್ಳಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 28 ಲಕ್ಷ ರೂ. ವೆಚ್ಚದ ಓವರ್‌ಹೆಡ್ ಟ್ಯಾಂಕ್ ಹಾಗೂ ಪೈಪ್‌ಲೈನ್ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸತ್ತೇಗಾಲದಿಂದ ನೀರು ತಂದು ಕಣ್ವ, ವೈ.ಜಿ.ಗುಡ್ಡಾ, ಮಂಚನಬೆಲೆ ಜಲಾಶಯ ತುಂಬಿಸುವ ಕೆಲಸ ಪ್ರಗತಿಯಲ್ಲಿದೆ. ಇದಾದರೆ ಅಂತರ್ಜಲ ವೃದ್ಧಿಯಾಗಲಿದ್ದು, ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರಿನ ಕಾರ್ಯಕ್ರಮಗಳು ಫಲಪ್ರದವಾಗಲಿವೆ. ಈ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

ದೇಶದ ಎಲ್ಲ ಕುಟುಂಬಗಳಿಗೆ ಶಾಶ್ವತ ನೀರು ಪೂರೈಸುವುದು ಜಲಜೀವನ್ ಮಿಷನ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲೆಗೆ ಲಭ್ಯವಾಗಿರುವ 153 ಕೋಟಿ ರೂ. ಅನುದಾನದಲ್ಲಿ ಕೆಲಸ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ ತಾಲೂಕಿಗೆ 31 ಕೋಟಿ ರೂ.ಲಭ್ಯವಾಗಿದೆ. ಅದರಲ್ಲಿ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯಲ್ಲಿ 1.80 ಕೋಟಿ ರೂ. ವೆಚ್ಚದ ಓವರ್‌ಹೆಡ್ ಟ್ಯಾಂಕ್, ಪೈಪ್‌ಲೈನ್ ಮತ್ತು ಮೀಟರ್ ಅಳವಡಿಸುವ ಕೆಲಸ ಆರಂಭಿಸಲಾಗಿದೆ. ಮುಂದಿನ ಆರ್ಥಿಕ ವರ್ಷಕ್ಕೆ ಈ ಯೋಜನೆಯಲ್ಲಿ 200 ಕೋಟಿ ರೂ. ಅನುದಾನ ಸಿಗಲಿದೆ ಎಂದರು.

ಅಂತರ್ಜಲ ನಂಬಿ ಕಾರ್ಯಕ್ರಮ ರೂಪಿಸ ಲಾಗುತ್ತಿದೆ. ಪ್ರತಿ ವ್ಯಕ್ತಿಗೆ 55 ಲೀಟರ್ ನೀರು ಪೂರೈಸಲಾಗುವುದು. ಇದರ ನಿರ್ವಹಣೆ ಸಹ ಗ್ರಾಪಂ ಮಾಡಲಿದೆ. ವಿಶೇಷ ಎಂದರೆ ಶೇ.35ಕೇಂದ್ರ ಸರ್ಕಾರ, ಶೇ. 35 ರಾಜ್ಯ ಸರ್ಕಾರ ಶೇ.15 ಗ್ರಾಮ ಪಂಚಾಯಿತಿ ಅನುದಾನ ಶೇ.15 ಸಾರ್ವಜನಿಕರ ಹಣ ಸೇರಲಿದ್ದು ಈ ಯೋಜನೆಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾಗಡಿ ಶಾಸಕ ಎ.ಮಂಜುನಾಥ್, ಜಿಪಂ ಅಧ್ಯಕ್ಷ ಎಚ್.ಎನ್.ಅಶೋಕ್, ತಾಪಂ ಅಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ಮಹದೇವಯ್ಯ, ಸದಸ್ಯರಾದ ಪ್ರಕಾಶ್, ಪ್ರಭಾವತಿ, ಗ್ರಾಪಂ ಅಧ್ಯಕ್ಷೆ ಸರಿತಾ ಶ್ರೀಧರ್, ಸದಸ್ಯರಾದ ಬಸವರಾಜು, ರವಿಕಿರಣ್, ಮಹದೇವಯ್ಯ, ಮಾಜಿ ಅಧ್ಯಕ್ಷ ಎಂ.ಆರ್. ರಮೇಶ್, ಕುಡಿಯುವ ನೀರು ಸರಬರಾಜು ವಿಭಾಗದ ಇಇ ಚಂದ್ರಹಾಸ್, ಎಇಇ ಶ್ರೀನಿವಾಸ್, ಎಇ ರತನ್, ಪಿಡಿಒ ಶಿವಕುಮಾರ್ ಮುಂತಾದವರು ಇದ್ದರು.

ಕಳಪೆ ಕೆಲಸಕ್ಕೆ ಬಿಲ್ ಪಾವತಿ ಇಲ್ಲ

ನೀರಿನ ಬಳಕೆ ಶುಲ್ಕದ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಕಾರ್ಯಕ್ರಮ ಅನುಷ್ಠಾನವಾದ ಮೇಲೆ ದರ ನಿಗದಿ ಬಗ್ಗೆ ನಿರ್ಧರಿಸಲಾಗುವುದು. ವಸತಿ ಪ್ರದೇಶದಲ್ಲಿರುವ ಎಲ್ಲ ಮನೆಗಳಿಗೆ ಸರ್ಕಾರವೇ ಪೈಪ್‌ಲೈನ್ ಮತ್ತು ನಲ್ಲಿ ಸಂಪರ್ಕ ಕಲ್ಪಿಸಲಿದೆ. ಯಾರೂ ಹಣ ಪಾವತಿಸುವ ಅಗತ್ಯವಿಲ್ಲ. ಗುತ್ತಿಗೆದಾರರು ಗುಣಮಟ್ಟದ ಕೆಲಸ ನಿರ್ವಹಿಸಿದರಷ್ಟೇ ಬಿಲ್ ಪಡೆಯಬಹುದು ಎಂದು ಸಂಸದ ಸುರೇಶ್ ಎಚ್ಚರಿಕೆ ನೀಡಿದರು.

ಟಿಜಿ ಹಳ್ಳಿ ಜಲಾಶಯ ಸೇರುತ್ತಿರುವ ಕಲುಷಿತ ನೀರು

ಮಾಗಡಿ: ತಿಪ್ಪಗೊಂಡನಹಳ್ಳಿ ಜಲಾಶಯ ಸೇರುತ್ತಿರುವ ತಡೆದು ಕಲುಷಿತ ನೀರನ್ನು ಶುದ್ಧೀಕರಣ ಗೊಳಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯನ್ನು (ಬಿಡಬ್ಲುೃಎಸ್‌ಎಸ್‌ಬಿ) ಒತ್ತಾಯಿಸಲಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ತಾಲೂಕಿನ ವೀರೆಗೌಡನ ದೊಡ್ಡಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅಭಿವೃದ್ಧಗೆ ಕಾಮಗಾರಿಗೆ ಗುದ್ದಲಿಪೂಜೆ, ಬೆಳಗವಾಡಿ ಮತ್ತು ತಗ್ಗಿಕುಪ್ಪೆ ಗ್ರಾಮಗಳಲ್ಲಿ ಪಶು ಚಿಕಿತ್ಸಾ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿನ ಸುತ್ತಮುತ್ತಲಿನಿಂದ ಹರಿದುಬರುವ ಕೊಳಚೆ ನೀರು, ಕೈಗಾರಿಕೆ ನೀರು, ಒಳಚರಂಡಿ ನೀರು ತಿಪ್ಪಗೊಂಡನಹಳ್ಳಿ ಜಲಾಶಯ ನಂತರ ಮಂಚನಬೆಲೆ ಜಲಾಶಯಕ್ಕೆ ಸೇರುತ್ತಿದೆ. ಇಲ್ಲಿಂದ ಮಾಗಡಿ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಕುಡಿಯುವ ನೀರು ಕಲುಷಿತವಾಗುತ್ತಿದೆ ಎಂಬ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು ಇದನ್ನು ಶುದ್ಧೀಕರಿಸಲು ಜಲಮಂಡಳಿ ಅಧಿಕಾರಿಗಳ ಜತೆ ಸಭೆ ಮಾಡಿ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಕಲುಷಿತ ನೀರು ಸೇರದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಪಂ ಅಧ್ಯಕ್ಷೆ ಸುಧಾ ವಿಜಯ್ ಕುಮಾರ್, ಸ್ಥಾಯಿಸಮಿತಿ ಅಧ್ಯಕ್ಷ ಧನಂಜಯನಾಯ್ಕ, ಸದಸ್ಯರಾದ ಸುಮಾ, ರತ್ನಮ್ಮ ಮುಂತಾದವರು ಇದ್ದರು.

ಶೀಘ್ರವೇ ತಾಲೂಕಿನ ಕೆರೆಗಳಿಗೆ ನೀರು : ಹೇಮಾವತಿ ನೀರಾವರಿ ಯೋಜನೆಗೆ ಮೊದಲ ಹಂತದ ಪೈಪ್‌ಲೈನ್ ಅಳವಡಿಸಲು ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಎರಡನೇ ಹಂತದಲ್ಲಿ ರಸ್ತೆಗಳ ಮೂಲಕ ಪೈಪ್‌ಲೈನ್ ಅಳವಡಿಸಲು ಹಿಂದಿನ ಸರ್ಕಾರ ಸಲ್ಲಿಸಿದ್ದ ಹಣಕಾಸು ನೆರವಿಗೆ ಸರ್ಕಾರ ಅನುಮೋದನೆ ನೀಡಿದೆ. ಪ್ರಮುಖವಾಗಿ ತಾಲೂಕಿಗೆ ನೀರು ಬರಲು ಸಂಪರ್ಕ ಕಾಲುವೆ ನಿರ್ಮಾಣವಾಗಬೇಕಿದೆ. ಈ ಬಗ್ಗೆ ಹೋರಾಟ ಮಾಡಿ ಶೀಘ್ರವೇ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂಬ ಡಿ.ಕೆ. ಸುರೇಶ್ ಭರವಸೆ ನೀಡಿದರು.