ನ್ಯೂಸ್

ಮಸೂದ್ ಅಜರ್​ ನಾಪತ್ತೆಯಾಗಿಲ್ಲವೆಂದ ಭಾರತೀಯ ಗುಪ್ತಚರ ಸಂಸ್ಥೆ; ಪಾಕಿಸ್ತಾನದಲ್ಲೇ ಇದ್ದಾನಂತೆ ಜಾಗತಿಕ ಉಗ್ರ

ನವದೆಹಲಿ: ಜಾಗತಿಕ ಉಗ್ರನೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜೈಷ್​ ಎ ಮೊಹಮ್ಮದ್​ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್​ ಅಜರ್​ ನಾಪತ್ತೆಯಾಗಿದ್ದಾನೆ ಎಂದು ಪಾಕಿಸ್ತಾನ ಹೇಳಿತ್ತು.

ಉಗ್ರರಿಗೆ ಆರ್ಥಿಕ ನೆರವು ತಡೆಯಲು ರಚನೆಯಾದ ಜಾಗತಿಕ ವೇದಿಕೆ ಹಣಕಾಸು ಕ್ರಿಯಾ ಪಡೆ (ಎಫ್​ಎಟಿಎಫ್​)ಯ ಸಭೆಯಲ್ಲಿ ಈ ಮಾಹಿತಿ ನೀಡಿದ್ದ ಪಾಕಿಸ್ತಾನ, ಆತ ನಾಪತ್ತೆಯಾಗಿದ್ದರಿಂದ ಎಫ್​ಐಆರ್​ ದಾಖಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿತ್ತು.

ಆದರೆ ಇದೊಂದು ಪಕ್ಕಾ ಸುಳ್ಳು ಮಾಹಿತಿ ಎಂದು ಭಾರತೀಯ ಗುಪ್ತಚರ ಇಲಾಖೆಗಳು ಹೇಳಿವೆ. ಜೈಷ್ ಎ ಮೊಹಮ್ಮದ್​ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಪಾಕಿಸ್ತಾನದಲ್ಲಿಯೇ ಇದ್ದಾನೆ ಎಂದು ಖಚಿತ ಮಾಹಿತಿ ನೀಡಿವೆ.

ಪಾಕಿಸ್ತಾನದ ರೈಲ್ವೆ ಲಿಂಕ್​ ರಸ್ತೆಯಲ್ಲಿನ ಮಾರ್ಕಾಜ್-ಎ-ಉಸ್ಮಾನ್-ಒ-ಅಲಿ ಬಳಿ ಬಹವಾಲ್ಪುರ್ ನಲ್ಲಿರುವ ಜೈಷ್​ ಸಂಘಟನೆಯ ಪ್ರಧಾನ ಕಚೇರಿಯ ಹಿಂಭಾಗದಲ್ಲಿ ಇರುವ ಬಾಂಬ್​ ಪ್ರೂಫ್​ (ಬಾಂಬ್​ ನಿರೋಧಕ) ಮನೆಯೊಂದರಲ್ಲಿ ಅಜರ್​ ಸುರಕ್ಷಿತವಾಗಿದ್ದಾನೆ. ಅವನಿಗೆ ಬಿಗಿ ಭದ್ರತೆಯನ್ನೂ ನೀಡಲಾಗಿದೆ ಎಂದು ಗುಪ್ತಚರ ದಳಗಳ ಅಧಿಕಾರಿಗಳು ನಿಖರ ಮಾಹಿತಿ ನೀಡಿವೆ.

2019ರ ಫೆ.14ರಂದು ನಡೆದ ಪುಲ್ವಾಮಾ ದಾಳಿಯ ಮಾಸ್ಟರ್​ ಮೈಂಡ್​ ಆಗಿರುವ ಮಸೂದ್​ ಅಜರ್​ ಭಾರತದ ಮೋಸ್ಟ್​ ವಾಂಟೆಡ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದಾನೆ.

ಗುಪ್ತಚರ ಇಲಾಖೆಗಳ ಪ್ರಕಾರ ಈ ಮಸೂದ್​ ಅಜರ್​ಗೆ ಮೂರು ವಿಳಾಸಗಳಿವೆ. ಒಂದು ಬಹವಾಲ್ಪುರದಲ್ಲಿರುವ ಕೌಸರ್​ ಕಾಲನಿ, ಇನ್ನೊಂದು ಖೈಬರ್​ ಪಕ್ತುಂಖ್ವಾದ ಬನ್ನುವಿನಲ್ಲಿರುವ ಬಿಲಾಲ್​ ಹಬ್ಶಿ ಮದರಸಾ ಹಾಗೂ ಮತ್ತೊಂದು ಬಹಾವಾಲ್ಪುರದ ಲಕ್ಕಿ ಮಾರ್ವಾತ್​ನ ಮಸೀದಿ-ಎ-ಲುಕ್ಮಾನ್.

ಆದರೆ ಸದ್ಯ ಆತ ಜೈಷ್​ ಸಂಘಟನೆಯ ಪ್ರಧಾನ ಕಚೇರಿಯ ಹಿಂಭಾಗದಲ್ಲಿ ಇರುವ ಬಾಂಬ್​ ಪ್ರೂಫ್​ ಮನೆಯಲ್ಲಿಯೇ ಇದ್ದಾನೆ ಎಂದು ಹೇಳಿವೆ.

ಉಗ್ರರಿಗೆ ಆರ್ಥಿಕ ಸಹಾಯ ನೀಡುವುದನ್ನು ನಿಯಂತ್ರಿಸಲು ವಿಫಲವಾದ ಪಾಕಿಸ್ತಾನವನ್ನು ಈಗಾಗಲೇ ಎಫ್​ಎಟಿಎಫ್​ ಬೂದು ಪಟ್ಟಿಗೆ ಸೇರಿಸಿದೆ. ಈಗ ಮಸೂದ್ ಅಜರ್ ನಾಪತ್ತೆಯಾಗಿದ್ದಾನೆಂದು ಪಾಕಿಸ್ತಾನ ಸುಳ್ಳು ಹೇಳಿತಾ ಎಂಬ ಅನುಮಾನವೂ ಕಾಡುತ್ತಿದೆ.(ಏಜೆನ್ಸೀಸ್​)