ಬಲ್ಲಿಯಾ: ಜೈಲು ಸೇರಿರುವ ಬಿಎಸ್ಪಿ ಶಾಸಕ ಮುಖ್ತರ್ ಅನ್ಸಾರಿಯ ಪತ್ನಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದು, ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.
ಈ ಮೊದಲು ಗ್ಯಾಂಗ್ಸ್ಟರ್ ಆಗಿದ್ದ ಮುಖ್ತಾರ್ ಅನ್ಸಾರಿ ನಂತರ ರಾಜಕಾರಣ ಪ್ರವೇಶಿಸಿ, ಬಿಎಸ್ಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕರಾಗಿದ್ದರು. ಅದಾದ ಬಳಿಕವೂ ಸುಲಿಗೆ ಪ್ರಕರಣವೊಂದರಲ್ಲಿ ಪಂಜಾಬ್ನಲ್ಲಿ ಜೈಲು ಸೇರಿದ್ದಾರೆ. ಇನ್ನೂ ಹಲವು ಪ್ರಕರಣಗಳಲ್ಲಿ ಅನ್ಸಾರಿ ಆರೋಪಿಯಾಗಿದ್ದು, ಅವರನ್ನು ಉತ್ತರ ಪ್ರದೇಶಕ್ಕೆ ಕರೆತರಲು ಇಲ್ಲಿನ ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ.
ಇದೀಗ ಅವರ ಪತ್ನಿ ಅಫ್ಶಾನ್ ಅನ್ಸಾರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಪತ್ರ ಬರೆದಿದ್ದು, ತನ್ನ, ಪತಿ, ಪುತ್ರರ ಸುರಕ್ಷತೆಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ಹಾಗೇ ತನ್ನ ಪತಿಯನ್ನು ವಿಚಾರಣೆಗೆಂದು ಕೋರ್ಟ್ಗೆ ಕರೆತರಬೇಡಿ. ವಿಡಿಯೋ ಕಾನ್ಫರೆನ್ಸ್ ಮೂಲಕವೇ ಪ್ರಕ್ರಿಯೆ ನಡೆಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಮುಖ್ತಾರ್ ಅನ್ಸಾರಿ ಸಹೋದರ, ಸಂಸದ ಅಫ್ಜಲ್ ಅನ್ಸಾರಿ ತಿಳಿಸಿದ್ದಾರೆ. (ಏಜೆನ್ಸೀಸ್)