ನ್ಯೂಸ್

ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

ಚೆನ್ನೈ: ಸೂಪರ್​ ಸ್ಟಾರ್​ ಸೂರ್ಯ ಅವರ ತಮಿಳು ಚಲನಚಿತ್ರ 'ಜೈಭೀಮ್​' ಐಎಂಡಿಬಿ ರಾಂಕಿಂಗ್​ನಲ್ಲಿ ಪ್ರಪಥಮ ಸ್ಥಾನ ಗಳಿಸಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ವಿವಾದಕ್ಕೆ ಸಿಲುಕಿದೆ. ಚಿತ್ರದ ಕೆಲವು ಅಂಶಗಳು ಸ್ಥಳೀಯ ವನ್ನಿಯಾರ್​​ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಎನ್ನಲಾಗಿದ್ದು, ಕೆಲವು ಸಂಘಟನೆಗಳು ಮತ್ತು ರಾಜಕೀಯ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಿಎಂಕೆಯ ಮಯಿಲಾಡುತುರೈ ಜಿಲ್ಲಾ ಕಾರ್ಯದರ್ಶಿ ಸೀತಾಮಲ್ಲಿ ಪಳನಿಸ್ವಾಮಿ ಅವರು ಸೂರ್ಯ ಅವರ ಮೇಲೆ ಹಲ್ಲೆ ಮಾಡುವವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸೋಮವಾರದಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪಳನಿಸ್ವಾಮಿ ಅವರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್​ 153ಎ ಅಡಿ ಎಫ್​ಐಆರ್​ ದಾಖಲಿಸಿದ್ದಾರೆ ಎನ್ನಲಾಗಿದೆ.

ಚಿತ್ರದ ನಿರ್ಮಾಪಕರೂ ಆದ ಸೂರ್ಯ, ಶೋಷಿತ ಸಮುದಾಯದ ಪರವಾಗಿ ದನಿಯೆತ್ತುವ ವಕೀಲನ ಪಾತ್ರದಲ್ಲಿ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. ಆದರೆ, ಪಳನಿಸ್ವಾಮಿ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಸೂರ್ಯ ಅವರ ಚೆನ್ನೈನ ಟಿ.ನಗರದಲ್ಲಿರುವ ನಿವಾಸಕ್ಕೆ ಸಂಪೂರ್ಣ ಪೊಲೀಸ್​ ಭದ್ರತೆ ಒದಗಿಸಲಾಗಿದೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್)