ತಿ.ನರಸೀಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವತಿಯಿಂದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 
ನ್ಯೂಸ್

ಆಹಾರ ಸ್ವಾವಲಂಬನೆಗೆ ಮುನ್ನಡಿ ಬರೆದ ಜಗಜೀವನರಾಂ

ತಿ.ನರಸೀಪುರ: ರಾಜಕೀಯ ಜೀವನದ ಉದ್ದಕ್ಕೂ ಜನ ಮನ್ನಣೆ ಗಳಿಸಿ, ಸುದೀರ್ಘ ಅವಧಿಯ ಅಧಿಕಾರದ ಮೂಲಕ ಆಡಳಿತದಲ್ಲಿ ಸುಧಾರಣೆಗಳನ್ನು ತಂದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರು ಹಸಿರು ಕ್ರಾಂತಿ ಮೂಲಕ ದೇಶದಲ್ಲಿ ಆಹಾರದ ಸ್ವಾವಲಂಬನೆಗೆ ಮುನ್ನುಡಿ ಹಾಕಿಕೊಟ್ಟರು ಎಂದು ಉಪನ್ಯಾಸಕ ಮೂಗೂರು ಕುಮಾರಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಂ ಅವರ 38ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶೋಷಿತ ಸಮುದಾಯದ ಹಿನ್ನೆಲೆಯಿಂದಲೇ ರಾಜಕೀಯಕ್ಕೆ ಬಂದ ಬಾಬೂಜಿ ಅವರು ತಮಗೆ ಸಿಕ್ಕ ಅಧಿಕಾರವನ್ನು ಶೋಷಿತರು ಮತ್ತು ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಬಳಸುವ ಮೂಲಕ ಮಾದರಿಯಾಗಿದಾರೆ ಎಂದರು.

ಅಧಿಕಾರಿಗಳ ಗೈರು: ಡಾ.ಬಾಬು ಜಗಜೀವನ ರಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಸೇರಿದಂತೆ ಹಲವು ಇಲಾಖೆಗಳ ಪ್ರಮುಖ ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಮಾದಿಗ ಸಮುದಾಯದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಕಾರ್ಯಕ್ರಮ ಬಹಿಸ್ಕರಿಸಿ ತಾಲೂಕು ಆಡಳಿತದ ನ ನಿರ್ಲಕ್ಷ್ಯವನ್ನ ಖಂಡಿಸಿ ಪ್ರತಿಭಟಿಸಲು ಹೊರ ನಡೆದರು. ಇದರಿಂದಾಗಿ 2 ತಾಸುಗಳ ಕಾಲ ವಿಳಂಬವಾಗಿ ಕಾರ್ಯಕ್ರಮ ಆರಂಭವಾಯಿತು. ತುರ್ತು ಕಾರ್ಯ ನಿಮಿತ್ತ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ್ದ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅವರು ನಂತರ ಕಾರ್ಯಕ್ರಮಕ್ಕೆ ಆಗಮಿಸಿದರು.

ಜಿಪಂ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ಡಿಜೆಎಸ್ ಜಿಲ್ಲಾಧ್ಯಕ್ಷ ತುಂಬಲ ಮಂಜುನಾಥ್, ತಾಪಂ ಮಾಜಿ ಸದಸ್ಯರಾದ ಕೆ.ಎಸ್.ಗಣೇಶ್, ರಾಮಲಿಂಗಯ್ಯ, ದಸಂಸ ಸಂಚಾಲಕರಾದ ಕುಕ್ಕೂರು ರಾಜು, ಆಲಗೂಡು ಶಿವಣ್ಣ, ಬೆನಕನಹಳ್ಳಿ, ಗಂಗಾಧರ, ತಾಪಂ ಇಒ ಸಿ.ಕೃಷ್ಣ, ಬಿಇಒ ಶೋಭಾ, ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ ಧೂಳಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ, ರಾಜು, ಮುಖಂಡ ಕನ್ನನಾಯಕನಹಳ್ಳಿ ಮರಿಸ್ವಾಮಿ ಮತ್ತಿತರರಿದ್ದರು.