ನ್ಯೂಸ್

ಜಗ್ಗೇಶ್ @ ರಾಘವೇಂದ್ರ ಸ್ಟೋರ್ಸ್​

ಬೆಂಗಳೂರು: ಮುಂದಿನ ವರ್ಷ ಪುನೀತ್ ಅಭಿನಯದಲ್ಲಿ ಹೊಸ ಚಿತ್ರ ಪ್ರಾರಂಭ ಮಾಡುವುದಾಗಿ ಇತ್ತೀಚೆಗಷ್ಟೇ ಹೇಳಿದ್ದ ಸಂತೋಷ್ ಆನಂದ್​ರಾಮ್ ಬುಧವಾರ ಒಂದು ಸರ್​ಪ್ರೖೆಸ್ ಕೊಟ್ಟಿದ್ದಾರೆ. ಅದಕ್ಕೂ ಮುನ್ನವೇ ಅವರು ಜಗ್ಗೇಶ್ ಅಭಿನಯದಲ್ಲಿ ಇನ್ನೊಂದು ಹೊಸ ಚಿತ್ರವನ್ನು ಶುರು ಮಾಡಲಿದ್ದಾರೆ. ಅದೇ ‘ರಾಘವೇಂದ್ರ ಸ್ಟೋರ್ಸ್’.

ಸಂತೋಷ್ ನಿರ್ದೇಶನದ ಹಿಂದಿನ ಎರಡು ಚಿತ್ರಗಳನ್ನು ನಿರ್ವಿುಸಿದ್ದ ಹೊಂಬಾಳೆ ಫಿಲಂಸ್ ಈ ಚಿತ್ರವನ್ನೂ ನಿರ್ವಿುಸುತ್ತಿದೆ. ಬುಧವಾರ ಮಧ್ಯಾಹ್ನ 3:10ಕ್ಕೆ ಹೊಂಬಾಳೆ ಫಿಲಂಸ್​ನ 12ನೇ ಚಿತ್ರದ ಘೋಷಣೆಯಾಗಲಿದೆ ಎಂದು ಮೊದಲೇ ಸುದ್ದಿಯಾಗಿತ್ತು. ಅದಕ್ಕೆ ಸರಿಯಾಗಿ, ‘ರಾಘವೇಂದ್ರ ಸ್ಟೋರ್ಸ್’ ಘೋಷಣೆಯಾಗಿದೆ. ಜತೆಗೆ, ಜಗ್ಗೇಶ್ ಅವರ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.

ಬಾಣಸಿಗನ ಪಾತ್ರದಲ್ಲಿ ಜಗ್ಗೇಶ್ ಕಾಣಿಸಿಕೊಳ್ಳುತ್ತಿದ್ದು, ಈ ಹೊಸ ಪ್ರಯತ್ನವನ್ನು ಪ್ರೇಕ್ಷಕರು ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. ಸಾಮಾಜಿಕ ಸಂದೇಶವಿರುವ, ಹಾಸ್ಯ-ರಾಜಕೀಯಗಳನ್ನೊಳಗೊಂಡ ಹೊಸತನದ ಚಿತ್ರ ಇದಾಗಿರಲಿದೆಯಂತೆ. ಸಂತೋಷ್ ಆನಂದರಾಮ್ ಈ ಚಿತ್ರವನ್ನು ಭಾವನೆ, ಮನರಂಜನೆ ಹಾಗೂ ಸಂವೇದನೆಯ ಪಾಕಶಾಲೆ ಎಂದು ಬಣ್ಣಿಸುತ್ತಾರೆ. ಅಷ್ಟೇ ಅಲ್ಲ, ಜಗ್ಗೇಶ್ ಈ ಚಿತ್ರದಲ್ಲಿ ಇದುವರೆಗೂ ಮಾಡಿರದ ಒಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಾರೆ. ಈ ಚಿತ್ರದ ಇನ್ನಷ್ಟು ವಿವರಗಳು ಸದ್ಯದಲ್ಲೇ ಹೊರಬೀಳುವ ನಿರೀಕ್ಷೆ ಇದ್ದು, ನವೆಂಬರ್ 22ರಂದು ಚಿತ್ರೀಕರಣ ಪ್ರಾರಂಭವಾಗಲಿದೆ.