ಭುವನೇಶ್ವರ: ಪುರಿ ಜಗನ್ನಾಥ ಸ್ವಾಮಿ ದೇವಸ್ಥಾನದಲ್ಲಿ 46 ವರ್ಷದ ನಂತರ ರತ್ನ ಭಂಡಾರದ 3ನೇ ಕೋಣೆಯನ್ನು ತೆರೆಯಲಾಗಿದೆ. ದೇವಸ್ಥಾನದ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಧಿಕಾರಿಗಳು ಮತ್ತು ಕೋಣೆ ತೆರೆಯಲು ನಿಯೋಜನೆಯಾಗಿದ್ದ ತಂಡ ಕೋಣೆಯನ್ನು ಅತ್ಯಂತ ಜಾಗರೂಕತೆಯಿಂದ ಮಧ್ಯಾಹ್ನ 1.28ಕ್ಕೆ ಕೋಟಿ ಕೋಟಿ ಬೆಲೆಬಾಳುವ ಆಭರಣಗಳ ಸಂಗ್ರಹದ ಈ ಕೋಣೆ ತೆರೆಯಲಾಯಿತು.
ಪುರಿ ರತ್ನಭಂಡಾರದಲ್ಲಿ ಒಟ್ಟು ಮೂರು ಕೋಣೆಗಳಿವೆ. ಸ್ವಾಮಿಗೆ ಪೂಜೆಯ ಅಂಗವಾಗಿ ಪ್ರತಿದಿನ ಮೊದಲ ಕೋಣೆಯನ್ನು ತೆರೆಯಲಾಗುತ್ತದೆ. ಎರಡನೇ ಕೊಠಡಿಯನ್ನು ಪ್ರಮುಖ ಸಂದರ್ಭಗಳಲ್ಲಿ ಮಾತ್ರ ತೆರೆಯಲಾಗುತ್ತದೆ. ಆ ದಿನಗಳಲ್ಲಿ ದೇವರಿಗೆ ಆ ಕೋಣೆಯಲ್ಲಿರುವ ಬೆಲೆಬಾಳುವ ಆಭರಣಗಳಿಂದ ಅಲಂಕರಿಸುತ್ತಾರೆ. ಆದರೆ ಮೂರನೇ ಕೊಠಡಿಯನ್ನು 46 ವರ್ಷಗಳ ಹಿಂದೆ ಅಂದರೆ 1978ರಲ್ಲಿ ತೆರೆಯಲಾಗಿತ್ತು. ಆ ನಂತರ ಮತ್ತೆ ತೆರೆಯಲಿಲ್ಲ. ಆ ಕೋಣೆಯಲ್ಲಿ ಅಂತ್ಯವಿಲ್ಲದ ಸಂಪತ್ತು ಇದೆ ಎಂದು ಹೇಳಲಾಗುತ್ತಿತ್ತು.
ಈ ಕೊಠಡಿಗೆ ನಾಗಬಂಧ ಇರುವುದರಿಂದ ಎಲ್ಲ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಿಧಿ ಮತ್ತು ಠೇವಣಿಗಳನ್ನು ರಕ್ಷಿಸಲು ಆ ಕೋಣೆಯಲ್ಲಿ ಹಾವುಗಳಿರಬಹುದು ಎಂದು ಶಂಕಿಸಲಾಗಿತ್ತು.
ಕೋಣೆ ತೆರೆದ ತಂಡದಲ್ಲಿ ಹಾವು ಹಿಡಿಯುವವರಿದ್ದರು. ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ವೈದ್ಯರನ್ನೂ ಒದಗಿಸಲಾಗಿತ್ತು. ರತ್ನ ಭಂಡಾರ ತೆರೆಯುವ ಪ್ರಕ್ರಿಯೆ ಆರಂಭವಾಗಿದ್ದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಭದ್ರತೆಯೊಂದಿಗೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಇನ್ನು 11 ಜನರ ತಂಡ ರತ್ನಭಂಡಾರದ ಮೂರನೇ ಕೋಣೆ ಪ್ರವೇಶಿಸಿ ಆ ಕೋಣೆಯಲ್ಲಿದ್ದ ನಿಧಿಯನ್ನು ಹೊರತರಲು ಆರು ಭಾರದ ಪೆಟ್ಟಿಗೆಗಳನ್ನು ಸ್ಟ್ರಾಂಗ್ ರೂಂಗೆ ತೆಗೆದುಕೊಂಡು ಹೋಗಲಾಯಿತು.
ರತ್ನ ಭಂಡಾರದಲ್ಲಿರುವ ನಿಧಿಯನ್ನು ಸಮಿತಿಯ ಸದಸ್ಯರ ಸಮ್ಮುಖ ಆ ಪೆಟ್ಟಿಗೆಗಳಲ್ಲಿ ಇಡುತ್ತಾರೆ. ಅದಕ್ಕಾಗಿ ಪೆಟ್ಟಿಗೆಗಳನ್ನು ಗೋದಾಮಿಗೆ ತೆಗೆದುಕೊಂಡು ಹೋಗಲಾಯಿತು. ಅಲ್ಲದೆ, ಆ ಆಭರಣಗಳ ಡಿಜಿಟಲ್ ದಾಖಲಾತಿಯನ್ನು ಮಾಡಲಾಯಿತು. ನಂತರ, ಅವುಗಳನ್ನು ಅಲ್ಲಿಂದ ಸ್ಥಳಾಂತರಿಸುವ ವ್ಯವಸ್ಥೆ ಮಾಡಲಾಯಿತು. 1978 ರಲ್ಲಿ, ಈ ಖಜಾನೆಯಲ್ಲಿನ ಸಂಪತ್ತನ್ನು ಎಣಿಸಲು 72 ದಿನಗಳನ್ನು ತೆಗೆದುಕೊಂಡಿತ್ತು ಎಂದು ವರದಿಯಾಗಿದೆ.