ನ್ಯೂಸ್

Bigg Boss ಮನೆಗೆ ರೀ ಎಂಟ್ರಿ ಕೊಡಲಿದ್ದಾರೆ ಜಗದೀಶ್​; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್​

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ 11ನೇ ಆವೃತ್ತಿ (Bigg Boss 11th Season) ಆರಂಭವಾಗಿ ಏಳು ವಾರಗಳು ಕಳೆದಿದ್ದು, ವಿವಾದಾತ್ಮಕ ಅಂಶಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ರ್ಗ-ನರಕ ಥೀಮ್​ನಲ್ಲಿ (Hell-heaven) ಆರಂಭವಾದ ಕಾರ್ಯಕ್ರಮವು ಹೆಚ್ಚು ಸೌಂಡ್​ ಮಾಡಿದ್ದು ವಿವಾದಗಳಿಂದಲೇ (Controversy) ಎಂದರೆ ತಪ್ಪಾಗಲಾರದು. ಇದರಲ್ಲಿ ಹೆಚ್ಚು ಸುದ್ದಿಯಾಗಿದ್ದು, ಜಗದೀಶ್​ (Jagadish). ಸದ್ಯ ಸೋಶಿಯಲ್​ ಮೀಡಿಯಾ ಸ್ಟಾರ್​ ಆಗಿರುವ ಜಗದೀಶ್​ ಬಿಗ್​ಬಾಸ್​ಗೆ ರೀ ಎಂಟ್ರಿ ಕೊಡುತ್ತಿರುವುದಾಗಿ ಹೇಳಿಕೊಂಡಿದ್ದು, ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಬಿಗ್​ಬಾಸ್​ ಮನೆಯಿಂದ ಹೊರಬಂದ ಬಳಿಕ ಜಗದೀಶ್​ ಅವರ ಕ್ರೇಜ್​ ಹೆಚ್ಚಾಗಿದ್ದು, ರಿಯಾಲಿಟಿ ಶೋ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರು ಆಡಿರುವ ಮಾತಿನ ವಿಡಿಯೋವನ್ನು ಇಟ್ಟುಕೊಂಡು ಅನೇಕ ಕಂಟೆಂಟ್​ಗಳನ್ನು ಕ್ರಿಯೇಟ್​ ಮಾಡಲಾಗುತ್ತಿದ್ದು, ಸದ್ಯ ಜಗದೀಶ್​ ಟ್ರೆಂಡಿಂಗ್​ನಲ್ಲಿದ್ದಾರೆ. ಇದೀಗ ಜಗದೀಸ್​ ಬಿಗ್​ಬಾಸ್​ ಮನೆಗೆ ರೀ ಎಂಟ್ರಿ ಕೊಡುವುದು ಪಕ್ಕಾ ಆಗಿದ್ದು, ಇಲ್ಲೊಂದು ಟ್ವಿಸ್ಟ್​ ಇದೆ.

ಕೆಲ ದಿನಗಳ ಹಿಂದೆ ಫೇಸ್​ಬುಕ್​ ಲೈವ್​ ಬಂದಿದ್ದ ಜಗದೀಶ್​ಗೆ ನೀವು ಹಿಂದಿ ಬಿಗ್​ಬಾಸ್​ಗೆ ಹೋಗುತ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಜಗದೀಶ್​ ಹಿಂದಿ ಬಿಗ್‌ಬಾಸ್‌ನಿಂದ ಬಿಗ್‌ ಆಫರ್ ಬಂದಿದ್ದು, ನಾನು ಇಷ್ಟರಲ್ಲೇ ಹಿಂದಿ ಬಿಗ್‌ಬಾಸ್‌ಗೆ ಹೋಗ್ತಾ ಇದ್ದೀನಿ ಎಂದು ಹೇಳಿದ್ದರು. ಜಗದೀಶ್​ ಹೇಳಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನೇಕರು ಜಗದೀಶ್​ ಅವರನ್ನು ಕೊಂಡಾಡುತ್ತಿದ್ದಾರೆ.

ಕರ್ನಾಟಕದ ಹಲವು ಗಣ್ಯರು ಬಾಲಿವುಡ್‌ಗೆ ಎಂಟ್ರಿಕೊಟ್ಟು ಮಿಂಚಿದ್ದಾರೆ. ಆ ಅದೃಷ್ಟ ಈಗ ನನ್ನನ್ನೂ ಹುಡುಕಿಕೊಂಡು ಬಂದಿದೆ. ಕರ್ನಾಟಕದಿಂದ ಪ್ರಕಾಶ್‌ ರಾಜ್‌, ಐಶ್ವರ್ಯಾರೈ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಈಗಾಗಲೇ ಹಲವರು ಬಾಲಿವುಡ್‌ನಲ್ಲಿ ಮಿಂಚಿದ್ದಾರೆ. ಇದೀಗ ನನಗೂ ಆ ಅವಕಾಶ ಸಿಕ್ಕಿದೆ. ನಾನೂ ಸಹ ಬಾಲಿವುಡ್‌ನಲ್ಲಿ ಮಿಂಚಲಿದ್ದೇನೆ. ಸೋಮವಾರ ಹಿಂದಿ ಬಿಗ್​ಬಾಸ್​ಗೆ ಸಂಬಂಧಿಸಿದ ಮಾತುಕತೆ ಅಂತಿಮವಾಗಲಿದ್ದು, ಆ ಬಳಿಕ ಅಧಿಕೃತ ಮಾಹಿತಿ ಹಂಚಿಕೊಳ್ಳಲಿದ್ದೇನೆ.

ಒಂದು ಕಾಲದಲ್ಲಿ ನಾನು ಲಕ್ಷ ದುಡಿಯುವುದಕ್ಕೆ ಕಷ್ಟ ಪಡ್ತಿದ್ದೆ. ಆದರೆ, ಈಗ ಕೋಟಿ.. ಕೋಟಿ ಗಳಿಸುತ್ತಿದ್ದೇನೆ. ಇದೆಲ್ಲ ಕನ್ನಡಿಗರು ನನಗೆ ಕೊಟ್ಟಿರುವ ಆಶೀರ್ವಾದ. ಕರ್ನಾಟಕದಿಂದ ಈಗಾಗಲೇ ಸಾಕಷ್ಟು ಜನ ಹೋಗಿದ್ದಾರೆ. ನಾನೂ ಈಗ ಹೋಗ್ತಿದ್ದೇನೆ. ಈ ವಿಷಯ ನನಗೆ ತುಂಬಾನೇ ಸಂತೋಷವನ್ನುಂಟು ಮಾಡಿದೆ ಎಂದು ಜಗದೀಶ್​ ಸಂತಸ ವ್ಯಕ್ತಪಡಿಸಿದ್ದಾರೆ.