ನ್ಯೂಸ್

ಲೋಕ ಸಮರ 2024, ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ: ಬಿಎಸ್​ವೈ

ಬೆಂಗಳೂರು: ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಹಿರಿಯ ರಾಜಕಾರಣಿ ಜಗದೀಶ್ ಶೆಟ್ಟರ್​ಗೆ ಲೋಕಸಭಾ ಚುನಾವಣೆಯ ಹಿನ್ನೆಲೆ ಬಿಜೆಪಿ ಘೋಷಿಸಿದ ಎರಡನೇ ಪಟ್ಟಿಯಲ್ಲಿ ಟಿಕೆಟ್​ ಸಿಗಲಿಲ್ಲ. ಈ ಕುರಿತು ಸಾಕಷ್ಟು ಅಸಮಾಧಾನ ಕೂಡ ಭುಗಿಲೆದ್ದೆವು. ಶೆಟ್ಟರ್​ಗೆ ಟಿಕೆಟ್​ ಸಿಗುವುದು ಬಹುತೇಕ ಡೌಟ್​ ಎಂಬ ವದಂತಿಗಳು ಹರಿದಾಡಿದ ಬೆನ್ನಲ್ಲೇ ಇದೀಗ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿಯಿಂದ ಜಗದೀಶ್​ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನನ್ನ ಮನವರಿಕೆಯ ಬಳಿಕ ಜಗದೀಶ್​ ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ. ಶೆಟ್ಟರ್​ ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಬಿಎಸ್​ವೈ ಹೇಳಿದರು. ಮೇ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರಿದ್ದರು. ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿಯನ್ನು ಕಣಕ್ಕಿಳಿಸಿತು, ಆದರೆ ಅಲ್ಲಿ ಶೆಟ್ಟರ್ ಸೋಲು ಅನುಭವಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಶೆಟ್ಟರ್ ಅವರನ್ನು ಕಾಂಗ್ರೆಸ್ ಎಂಎಲ್‌ಸಿಯನ್ನಾಗಿ ನೇಮಿಸಿತ್ತು. ಜನವರಿಯಲ್ಲಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿಗೆ ಸೇರ್ಪಡೆಯಾದರು.

ಶೆಟ್ಟರ್ ಅವರು ಕರ್ನಾಟಕದಲ್ಲಿ ಹಲವಾರು ಖಾತೆಗಳನ್ನು ಹೊಂದಿರುವ ಹಿರಿಯ ಲಿಂಗಾಯತ ನಾಯಕರಾಗಿದ್ದು, ರಾಜ್ಯದಿಂದ 20 ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಬಿಜೆಪಿ ಶೆಟ್ಟರ್​ ಸೇರಿದಂತೆ ಮಾಜಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಹಾಗೂ ಒಂಬತ್ತು ಹಾಲಿ ಸಂಸದರನ್ನು ಆಶ್ಚರ್ಯಕರ ರೀತಿಯಲ್ಲಿ ಕೈಬಿಟ್ಟಿದೆ. ಸದ್ಯ ಉಳಿದ ಎಂಟು ಸ್ಥಾನಗಳಿಗೆ ಅಭ್ಯರ್ಥಿಗಳು ಇನ್ನಷ್ಟೇ ಘೋಷಣೆಯಾಗಬೇಕಿದೆ.