ನ್ಯೂಸ್

ಕಾಂಗ್ರೆಸ್ ಹೈಕಮಾಂಡ್ ತನ್ನ ದೌರ್ಬಲ್ಯವನ್ನು ಮೊದಲು ಸರಿಪಡಿಸಿಕೊಳ್ಳಲಿ ಎಂದ ಜಗದೀಶ್​ ಶೆಟ್ಟರ್​; ಬಿಜೆಪಿಗೆ ಬರುವಂತೆ ಹೊರಟ್ಟಿಯವರಿಗೆ ಆಹ್ವಾನ...!

ಹುಬ್ಬಳ್ಳಿ: ಕಾಂಗ್ರೆಸ್​ ನಾಯಕತ್ವ ದುರ್ಬಲವಾಗಿದೆ, ಸಿದ್ದರಾಮಯ್ಯ ದುರ್ಬಲ ನಾಯಕ ಎಂದು ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್​ ಹೇಳಿದರು.

ಬಿ.ಎಸ್​.ಯಡಿಯೂರಪ್ಪನವರು ದುರ್ಬಲ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯನವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್​ ಗುಂಡೂರಾವ್​ ರಾಜೀನಾಮೆ ನೀಡಿ ಹಲವು ದಿನಗಳೇ ಕಳೆದರೂ ಆ ಸ್ಥಾನಕ್ಕೆ ಸೂಕ್ತರನ್ನು ನೇಮಕ ಮಾಡುವ ಶಕ್ತಿ ಕಾಂಗ್ರೆಸ್​ಗಿಲ್ಲ. ಕಾಂಗ್ರೆಸ್​ ಹೈಕಮಾಂಡ್ ಮೊದಲು ತನ್ನ ದೌರ್ಬಲ್ಯ ಸರಿಪಡಿಸಿಕೊಳ್ಳಲಿ ಎಂದು ಹೇಳಿದರು.

ಸಚಿವ ಸಂಪುಟದ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಸಂಪುಟ ವಿಸ್ತರಣೆಯಾಗಿದೆ. ಖಾತೆ ಹಂಚಿಕೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಿಟ್ಟ ವಿಚಾರ ಎಂದರು.

ಹೊರಟ್ಟಿಗೆ ಬಹಿರಂಗ ಆಹ್ವಾನ

ಮಾಜಿ ಸಚಿವ, ವಿಧಾನಪರಿಷತ್​ ಸದಸ್ಯ ಬಸವರಾಜ್​ ಹೊರಟ್ಟಿಯವರಿಗೆ ಬಿಜೆಪಿಗೆ ಬರುವಂತೆ ಜಗದೀಶ್​ ಶೆಟ್ಟರ್​ ಬಹಿರಂಗವಾಗಿ ಆಹ್ವಾನ ನೀಡಿದರು.

ಇಬ್ಬರೂ ನಾಯಕರು ಹುಬ್ಬಳ್ಳಿಯ ಖಾಸಗಿ ಹೋಟೆಲ್​ಗೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ನನಗೆ ಇದುವರೆಗೂ ಬಿಜೆಪಿಯಿಂದ ಯಾರೂ ಆಹ್ವಾನ ನೀಡಿಲ್ಲ ಎಂದರು.

ಪಕ್ಕದಲ್ಲಿಯೇ ನಿಂತಿದ್ದ ಜಗದೀಶ್​ ಶೆಟ್ಟರ್​ ಅವರು ಅದಕ್ಕೆ ಪ್ರತಿಕ್ರಿಯೆ ನೀಡುತ್ತ, ಹೊರಟ್ಟಿಯವರು ಹಿರಿಯ ರಾಜಕಾರಣಿ. ಅವರೇ ಒಪ್ಪಿ ಬಿಜೆಪಿಗೆ ಬರುವುದಾದರೆ ಖಂಡಿತ ಸ್ವಾಗತಿಸುತ್ತೇವೆ ಎಂದು ಹೇಳಿದರು.

ಆದರೆ ಸದ್ಯಕ್ಕೆ ಯಾವುದೇ ನಿರ್ಧಾರ ಇಲ್ಲ, ಮುಂದೆ ನೋಡೋಣ ಎಂದು ಹೊರಟ್ಟಿ ಹೇಳಿದರು. (ದಿಗ್ವಿಜಯ ನ್ಯೂಸ್​)