ನ್ಯೂಸ್

ಪರಂಪರೆ ರಕ್ಷಣೆಗೆ ಪಂಚಪೀಠಗಳು ಬದ್ಧ; ಕೇದಾರ ಜಗದ್ಗುರುಗಳ ಭರವಸೆ

ಊಖಿಮಠ (ಉತ್ತರಾಖಂಡ): ಯುಗಗಳ ಹಿಂದೆಯೇ ಅವತರಿಸಿರುವ ಜಗದ್ಗುರು ಪಂಚಾಚಾರ್ಯರಿಂದ ಸಂಸ್ಥಾಪಿತಗೊಂಡಿರುವ ಸನಾತನ ಪಂಚಪೀಠಗಳು ದೇಶದ ಮೂಲ ಧಾರ್ಮಿಕ ಪರಂಪರೆಯ ರಕ್ಷಣೆಗೆ ಕಟಿಬದ್ಧವಾಗಿವೆ ಎಂದು ಕೇದಾರ ವೈರಾಗ್ಯ ಪೀಠದ ಜಗದ್ಗುರು ರಾವಲ್ ಶ್ರೀಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಭರವಸೆ ನೀಡಿದ್ದಾರೆ. ಊಖಿಮಠಕ್ಕೆ ಆಗಮಿಸಿದ ಜಗದ್ಗುರು ಶಂಕರಾಚಾರ್ಯ ಪರಂಪರೆಯ ಪುರಿ ಜಗನ್ನಾಥ ಪೀಠದ ಶ್ರೀ ಅಧುಕ್ಷಾನಂದ ಭಾರತಿ ಸ್ವಾಮಿಗಳೊಂದಿಗೆ ಸಂವಾದ ನಡೆಸಿದ ಅವರು ಹೀಗೆ ಅಭಿಪ್ರಾಯಿಸಿದ್ದಾರೆ.

ದೇಶದ ಧಾರ್ಮಿಕ ಇತಿಹಾಸದಲ್ಲಿ ಜಗದ್ಗುರು ಪಂಚಾಚಾರ್ಯರು ಸ್ಥಾಪಿಸಿದ ಪಂಚಪೀಠಗಳು ಹಾಗೂ ಶಂಕರಾಚಾರ್ಯರು ಸ್ಥಾಪಿಸಿದ ಚತುರಾಮ್ನಾಯ ಪೀಠಗಳು ಸನಾತನವಾಗಿವೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಹಲವಾರು ಪೀಠಗಳು ಹುಟ್ಟಿಕೊಂಡಿದ್ದರೂ ಸನಾತನ ಪೀಠಗಳ ಮೇಲೆ ಪರಂಪರೆ ರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಇದೆ. ಇದನ್ನು ಜಗದ್ಗುರು ಶಂಕರಾಚಾರ್ಯರು ಕೂಡಾ ಎತ್ತಿ ಹಿಡಿದಿದ್ದರು. ಹಿಮಾಲಯದಲ್ಲಿರುವ ಕೇದಾರನಾಥನ ಪೂಜಾಧಿಕಾರ ಮತ್ತು ಸಂಪೂರ್ಣಆಡಳಿತ ವೈರಾಗ್ಯ ಪೀಠದ ಕೇದಾರ ಜಗದ್ಗುರುಗಳಿಗಿರುವುದು ಇದಕ್ಕೆ ಸಾಕ್ಷಿ ಎಂದರು.

ಪ್ರಾಚೀನ ಕಾಲದಿಂದಲೂ ದಕ್ಷಿಣ ಭಾರತದ ಶುದ್ಧ ವೀರಶೈವ ಮಾಹೇಶ್ವರ ಜಂಗಮ ವಂಶಸ್ಥರು ಕೇದಾರನಾಥನ ಪೂಜೆ ನೆರವೇರಿಸುತ್ತಿದ್ದಾರೆ. ಆ ಪರಂಪರೆಯನ್ನು ಶಂಕರಾಚಾರ್ಯರು ಕೂಡಾ ಒಪ್ಪಿ ಗೌರವಿಸಿದ್ದಾರೆ. ಅದೇ ಹಿನ್ನೆಲೆಯಲ್ಲಿ ಶಂಕರಾಚಾರ್ಯ ಪರಂಪರೆಯ ಪುರಿ ಜಗನ್ನಾಥ ಪೀಠದ ಶ್ರೀ ಸ್ವಾಮಿ ಅಧುಕ್ಷಾನಂದ ಮಹಾರಾಜರು ಕೇದಾರಕ್ಕೆ ಆಗಮಿಸಿರುವುದು ಪರಂಪರೆಯ ಪುನುರುತ್ಥಾನಕ್ಕೆ ಬಲ ಬಂದಿದೆ ಎಂದು ಕೇದಾರ ಜಗದ್ಗುರುಗಳು ಸಂತಸ ವ್ಯಕ್ತಪಡಿಸಿದರು.

ಪಂಚಪೀಠಗಳು ಆದಿ ಅನಾದಿ : ಪುರಿ ಶಂಕರಾಚಾರ್ಯರ ಅಭಿಮತ

ಕೇದಾರ ಜಗದ್ಗುರುಗಳೊಂದಿಗೆ ಧರ್ಮ ಪರಂಪರೆ ಸಂರಕ್ಷಣೆ ಕುರಿತು ನಡೆದ ಚರ್ಚೆಯಲ್ಲಿ ಇತಿಹಾಸದ ಅಂಶಗಳಿಂದ ಪಂಚಪೀಠಗಳು ಆದಿ ಮತ್ತು ಅನಾದಿ ಎಂಬುದು ಮನವರಿಕೆಯಾಗುತ್ತದೆ ಎಂದು ಪುರಿ ಜಗನ್ನಾಥ ಪೀಠದ ಶ್ರೀಸ್ವಾಮಿ ಅಧುಕ್ಷಾನಂದ ಸ್ವಾಮಿಗಳು ಅಭಿಪ್ರಾಯಿಸಿದರು.

ಜಗದ್ಗುರು ಶಂಕರಾಚಾರ್ಯರು ದೇಶದ ಎಲ್ಲ ಪ್ರಾಂತ್ಯಗಳಲ್ಲಿ ಸಂಚರಿಸಿ ಆಯಾ ಭಾಗದಲ್ಲಿರುವ ಧರ್ಮ ಪಂರಪರೆಯ ಅಭ್ಯುದಯಕ್ಕೆ ವಿಶೇಷ ಒತ್ತು ನೀಡಿದ್ದರು. ಅಂತೆಯೇ ಕೇದಾರನಾಥ ಕ್ಷೇತ್ರಕ್ಕೂ ಅವರು ಆಗಮಿಸಿ ವೈರಾಗ್ಯ ಪೀಠದ ಅಧೀನದಲ್ಲಿ ನಡೆಯುತ್ತಿದ್ದ ಪೂಜಾ ವ್ಯವಸ್ಥೆಯನ್ನು ಮನಗಂಡಿದ್ದರು ಎಂದು ಅವರು ವಿವರಿಸಿದರು.

ತಾವು ನಿತ್ಯ ಪೂಜೆ ಗೈಯುವ ವಿಶೇಷ ಶಿವಲಿಂಗದ ಸಮೇತವಾಗಿ ಭಾರತದ ದ್ವಾದಶ ಜ್ಯೋತಿರ್ಲಿಂಗಗಳ ಯಾತ್ರೆ ಕೈಗೊಂಡಿರುವ ಶ್ರೀಗಳು ಶಿವಲಿಂಗವನ್ನು ಊಖಿಮಠದ ಜಗದ್ಗುರು ಏಕೋರಾಮರಾಧ್ಯರ ಗದ್ದುಗೆಯ ಮೇಲಿರಿಸಿ ಪೂಜೆ ಸಲ್ಲಿಸಿದರು. ನಂತರ ಕೇದಾರ ಜಗದ್ಗುರುಗಳು ಶ್ರೀಗಳಿಗೆ ರೇಷ್ಮೆ ಶಾಲು ಹೊದಿಸಿ ಲತಾಂಬೂಲ ನೀಡಿ ಗೌರವಿಸಿದರು.