Commonwealth Games: ಪಾಕಿಸ್ತಾನ ಬಾಕ್ಸರ್ ವಿರುದ್ಧದ ವಿಜಯವನ್ನು ಕಾರ್ಗಿಲ್ ಯೋಧರಿಗೆ ಅರ್ಪಿಸಿದ ಜಾದುಮಣಿ
ಗ್ಲಾಸ್ಗೋ: ಭಾರತದ ಬಾಕ್ಸರ್ ಜಾದುಮಣಿ ಸಿಂಗ್ (Jadumani Singh) ಕಾಮನ್ವೆಲ್ತ್ ಗೇಮ್ಸ್ನಲ್ಲಿ (Commonwealth Games) ಭಾನುವಾರ ತಡರಾತ್ರಿ ನಡೆದ ಪುರುಷರ 55 ಕೆಜಿ ವಿಭಾಗದ ಪ್ರಿ ಕ್ವಾರ್ಟರ್ಫೈನಲ್ನಲ್ಲಿ ಪಾಕಿಸ್ತಾನದ ಸುಮಮ ರೆಹಮಾನ್ ಎದುರು 5-0 ಅಂತರದಿಂದ ಏಕಪಕ್ಷೀಯ ಗೆಲುವು ದಾಖಲಿಸಿದರು. ಕಾರ್ಗಿಲ್ ವಿಜಯ ದಿವಸದಂದು (Kargil Vijay Diwas) ಬಂದ ಈ ಗೆಲುವನ್ನು ಅವರು ಕಾರ್ಗಿಲ್ ವೀರರಿಗೆ ಅರ್ಪಿಸುವುದಾಗಿ ಹೇಳಿದರು.
ಮಣಿಪುರದ 22 ವರ್ಷದ ಜಾದುಮಣಿ, "ಪಾಕ್ ಬಾಕ್ಸರ್ ವಿರುದ್ಧ ಬಂದಿರುವ ಈ ಗೆಲುವು ಶ್ರೇಷ್ಠವಾದುದು' ಎಂದರು. ಅವರು ಕ್ವಾರ್ಟರ್ಫೈನಲ್ ಪಂದ್ಯವನ್ನು ಗೆದ್ದರೆ ಪದಕ ಖಚಿತಪಡಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ. ಭಾನುವಾರ 65 ಕೆಜಿ ವಿಭಾಗದ 16ರ ಟ್ಟದಲ್ಲಿ ಸ್ಪರ್ಧಿಸಿದ ಭಾರತದ ಮತ್ತೋರ್ವ ಬಾಕ್ಸರ್ ಆದಿತ್ಯ ಪ್ರತಾಪ್ ಸಿಂಗ್ ಉಗಾಂಡದ ಬ್ಯಾಟ್ಟೆ ಎದುರು 2&3ರಿಂದ ಪರಾಭವಗೊಂಡು ಹೊರಬಿದ್ದರು.
ಬಾಕ್ಸಿಂಗ್ 8ರ ಘಟ್ಟಕ್ಕೆ ಸಚಿನ್, ಅಂಕುಶ್
ಮಾಜಿ ವಿಶ್ವ ಯೂತ್ ಚಾಂಪಿಯನ್ ಸಚಿನ್ ಸಿವಾಚ್ ಮತ್ತು ಯುವ ಬಾಕ್ಸರ್ ಅಂಕುಶ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ 60 ಮತ್ತು 80 ವಿಭಾಗದಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. 26 ವರ್ಷದ ಸಚಿನ್ ಸೋಮವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್ನ ವಿಲಿಯಮ್ ಹೆವಿಟ್ ವಿರುದ್ಧ 4-1ರಿಂದ ಗೆಲುವು ದಾಖಲಿಸಿದರು. ಐವರು ತೀರ್ಪುಗಾರರಲ್ಲಿ ನಾಲ್ವರು ಸಚಿನ್ ಪರವಾಗಿ ತೀರ್ಪು ನೀಡಿದರು. ಸಚಿನ್ 8ರ ಘಟ್ಟದಲ್ಲಿ ಬೋತ್ಸವಾನದ ಟ್ರೆಷರ್ ಮೊರೆಮಿ ವಿರುದ್ಧ ಸೆಣಸಲಿದ್ದಾರೆ. ಹರಿಯಾಣದ 20 ವರ್ಷದ ಅಂಕುಶ್ 16ರ ಘಟ್ಟದಲ್ಲಿ ಆಂಟಿಗಾದ ಜಾನ್ ಜಲಾನ್ ವಿರುದ್ಧ 5&0 ಅಂತರದಿಂದ ಏಕಪಕ್ಷೀಯ ಗೆಲುವು ಸಾಧಿಸಿದರು. ಇವರಿಬ್ಬರು ಈಗ ಪದಕ ಖಚಿತಪಡಿಸಿಕೊಳ್ಳುವುದರಿಂದ ಕೇವಲ ಒಂದು ಗೆಲುವು ದೂರದಲ್ಲಿದ್ದಾರೆ.