- ಮೈಕಲ್ ಜಾಕ್ಸನ್ ನಿಧನರಾಗಿ 17 ವರ್ಷ ಕಳೆದರೂ ಮಾಸದ ಛಾಪು
- ಕಿಂಗ್ ಆಫ್ ಪಾಪ್ ನ ಬಯೋಪಿಕ್ ಬಾಕ್ಸಾಫೀಸ್ ನಲ್ಲಿ ಮಿಂಚಿನ ಓಟ
- ವಿಶ್ವಾದ್ಯಂತ 8612 ಕೋಟಿ ರೂ. ಗಳಿಕೆ ಮಾಡಿ, ವಿಶ್ವದಾಖಲೆ
‘ಕಿಂಗ್ ಆಫ್ ಪಾಪ್’ ಎಂದೇ ಜಗತ್ಪ್ರಸಿದ್ಧರಾಗಿದ್ದ ಗಾಯಕ, ಡಾನ್ಸರ್ ಮೈಕಲ್ ಜಾಕ್ಸನ್ ಜೀವನಾಧಾರಿತ ‘ಮೈಕಲ್’ ಕಳೆದ ಏ.24ರಂದು ವಿಶ್ವಾದ್ಯಂತ ರಿಲೀಸ್ ಆಗಿತ್ತು. ಆ್ಯಂಟೋಯಿನೆ ಫುಕ್ವಾ ನಿರ್ದೇಶನದ ಈ ಚಿತ್ರದಲ್ಲಿ ಮೈಕಲ್ ಜಾಕ್ಸನ್ ಆಗಿ, ಅವರ ಅಣ್ಣ ಜರ್ಮೈನ್ ಜಾಕ್ಸನ್ ಪುತ್ರ ಜಾರ್ ಜಾಕ್ಸನ್ ಅಭಿನಯಿಸಿದ್ದರು. ರಿಲೀಸ್ ಆದ ದಿನದಿಂದಲೂ ಈ ಬಯೋಪಿಕ್ ಭಾರತ ಸೇರಿ ಇಡೀ ವಿಶ್ವದ ಗಮನ ಸೆಳೆದಿದೆ. ಮೈಕಲ್ ಜಾಕ್ಸನ್ ನಿಧನರಾಗಿ 17 ವರ್ಷ ಕಳೆದರೂ, ಅವರ ಹಾಡು, ಡಾನ್ಸ್ ಬಗೆಗಿನ ಕ್ರೇಜ್ ಇಂದಿಗೂ ಮಾಸಿಲ್ಲ ಎಂಬುದನ್ನು ‘ಮೈಕಲ್’ ಸಿನಿಮಾ ಸಾಬೀತುಪಡಿಸಿದೆ. ವಿಶ್ವ ಬಾಕ್ಸಾಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಇದೀಗ ಈ ಮ್ಯೂಸಿಕಲ್ ಬಯೋಪಿಕ್ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ರಿಲೀಸ್ ಆಗಿ 50 ದಿನಗಳನ್ನು ಪೂರೈಸಿದ್ದು, ವಿಶ್ವಾದ್ಯಂತ ಒಟ್ಟು 8,612 ಕೋಟಿ ರೂ. ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ಗಳಿಕೆಯಲ್ಲಿ ಹೊಚ್ಚ ಹೊಸ ದಾಖಲೆ ನಿರ್ಮಿಸಿದೆ. ಆ ಮೂಲಕ ಅತಿಹೆಚ್ಚು ಗಳಿಕೆ ಮಾಡಿದ ವಿಶ್ವದ ಪ್ರಥಮ ಮ್ಯೂಸಿಕಲ್ ಬಯೋಪಿಕ್ ಎಂಬ ಖ್ಯಾತಿಗೆ ಈ ಸಿನಿಮಾ ಪಾತ್ರವಾಗಿದೆ. ಹಾಗೆಯೇ, ಮತ್ತೊಬ್ಬ ಪಾಪ್ ತಾರೆ ಫ್ರೆಡ್ಡಿ ಮರ್ಕ್ಯೂರಿ ಜೀವನಾಧಾರಿತ ‘ಬೊಹಿಮಯನ್ ರಾಪ್ಸೊಡಿ’ (8600 ಕೋಟಿ ರೂ.) ಚಿತ್ರದ ಎಂಟು ವರ್ಷಗಳ ದಾಖಲೆಯನ್ನು ಮುರಿದು, ಅಗ್ರ ಸ್ಥಾನ ಅಲಂಕರಿಸಿದೆ. ಹಾಗೇ ಅಮೆರಿಕ, ಕೆನಡಾ ಸೇರಿ 65 ದೇಶಗಳಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಹೆಗ್ಗಳಿಕೆಗೂ ‘ಮೈಕಲ್’ ಪಾತ್ರವಾಗಿದೆ. -ಏಜೆನ್ಸೀಸ್