ಹಲಸಿನ ಮೇಳದ ಬ್ರೋಷರ್ ಬಿಡುಗಡೆ ಮಾಡಲಾಯಿತು.
ಕಾರವಾರ: ಇಲ್ಲಿನ ರೋಟರಿ ಕ್ಲಬ್ ಹಾಗೂ ಬೆನಕ ಈವೆಂಟ್ಸ್ ನಿಂದ ಮೇ.29 ರಿಂದ 31 ರವರೆಗೆ ಪ್ರತಿ ದಿನ ಬೆಳಗ್ಗೆ 10 ರಿಂದ ರಾತ್ರಿ 9.30 ರವರೆಗೆ ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಬೃಹತ್ ಹಲಸು ಹಾಗೂ ಮಾವಿನ ಮೇಳವನ್ನು ಆಯೋಜಿಸಲಾಗಿದೆ ಎಂದು ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ಅರ್ಜುನ ಉಪಾಧ್ಯಾಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ ನೀಡುವ ಉದ್ದೇಶವನ್ನು ಹೊಂದಿದ್ದೇವೆ ಎಂದರು.
ಮೇಳದ ಸಂಯೋಜಕ ಗಣೇಶ ಶೆಟ್ಟಿ ಮಾತನಾಡಿ, ಸಣ್ಣ ವ್ಯಾಪಾರಸ್ಥರಿಗೆ ವೇದಿಕೆ ಕೊಡುವುದು, ಹಲಸಿನ ಉತ್ಪನ್ನಗಳ ಮೌಲ್ಯವರ್ಧನೆ ನಮ್ಮ ಉದ್ದೇಶವಾಗಿದೆ. ಕೇರಳದ ಅಲೆಪ್ಪಿಯಿಂದ, ಕಾರ್ಕಳದಿಂದ ಹಲಸಿನ ತಿನಿಸುಗಳನ್ನು ಮಾಡುವ ತಯಾರಕರು ಬರಲಿದ್ದಾರೆ. ದೇಶದ ವಿವಿಧ ಭಾಗಗಳ ಹಲಸಿನ ಸಸಿಗಳು ಲಭ್ಯವಾಗಲಿವೆ. ಇದರ ಜೊತೆಗೆ ಇಳಕಲ್ ಸಾರಿ ಸೇರಿ ವಿವಿಧ ವಸ್ತುಗಳು ಇರಲಿವೆ. ಕುಮಟಾ, ಭಟ್ಕಳ, ಬ್ರಹ್ಮಾವರ ಹೀಗೆ ವಿವಿಧೆಡೆ ಈಗಾಗಲೇ ಮೇಳ ಆಯೋಜಿಸಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ಥಳೀಯರು ಮಾತ್ರವಲ್ಲದೇ ಅಕ್ಕಪಕ್ಕದ ತಾಲೂಕಿನ ಜನರೂ ಆಗಮಿಸುವರು ಎಂದರು. ರೋಟರಿ ಕ್ಲಬ್‌ನ ವಿನೋದ ಕೊಠಾರಕರ್, ಪ್ರಸನ್ನ ತೆಂಡುಲ್ಕರ್, ಅಮರನಾಥ ಶೆಟ್ಟಿ, ಅನಮೋಲ ರೇವಣಕರ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.