ನ್ಯೂಸ್

'ರಾಜಾಸಾಬ್'​ ಸಹ ನಿರ್ಮಾಪಕರ ವಿರುದ್ಧ ಹೈಕೋರ್ಟ್​ ಮೆಟ್ಟಿಲೇರಿದ ಐವಿವೈ! ಪ್ರಭಾಸ್​ ಚಿತ್ರಕ್ಕೆ ಸಂಕಷ್ಟ? | Raja Saab

Raja Saab: ಟಾಲಿವುಡ್​ನ ರೆಬೆಲ್​ ಸ್ಟಾರ್​, ನಟ ಪ್ರಭಾಸ್ ಅಭಿನಯದ ಹಾಗೂ ಮಾರುತಿ ನಿರ್ದೇಶನದ ಬಹುನಿರೀಕ್ಷಿತ 'ರಾಜಾಸಾಬ್' ಚಿತ್ರವು ಸದ್ಯ ಚಿತ್ರೀಕರಣದ ಹಂತದಲ್ಲಿದೆ. ಹಾರರ್-ಕಾಮಿಡಿ ಜಾನರ್​ನ ಈ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದ್ದು, ಚಿತ್ರೀಕರಣ ಕೊನೆಯ ಹಂತವನ್ನು ತಲುಪಿದೆ. ಟಾಲಿವುಡ್‌ನಲ್ಲಿ ನಡೆಯುತ್ತಿರುವ ಮುಷ್ಕರದಿಂದಾಗಿ ಇದೀಗ ಚಿತ್ರೀಕರಣ ಸ್ಥಗಿತಗೊಂಡಿದೆ. ಈ ಮಧ್ಯೆ ಚಿತ್ರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ.

'ರಾಜಾಸಾಬ್' ರಿಲೀಸ್​ ಈಗಾಗಲೇ ಹಲವು ಬಾರಿ ಮುಂದೂಡಿಕೆಯಾಗಿದೆ. ಇತ್ತೀಚೆಗಷ್ಟೇ ಡಿಸೆಂಬರ್ 5ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೀಗ, ಮುಂದಿನ ವರ್ಷ ಸಂಕ್ರಾಂತಿ ಹಬ್ಬದಂದು ಚಿತ್ರದ ರಿಲೀಸ್​ ಅನ್ನು ಮುಂದೂಡಲಾಗಿದೆ. ಆದಾಗ್ಯೂ, ಇತ್ತೀಚೆಗೆ ದೆಹಲಿ ಮೂಲದ ಐವಿವೈ ಎಂಟರ್‌ಟೈನ್‌ಮೆಂಟ್ ಸಂಸ್ಥೆ, ಪ್ರಭಾಸ್ ರಾಜಾಸಾಬ್ ಚಿತ್ರದ ಸಹ-ನಿರ್ಮಾಪಕರ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಐವಿವೈ ಎಂಟರ್‌ಟೈನ್‌ಮೆಂಟ್ ಅರ್ಜಿಯ ಪ್ರಕಾರ, ಕಂಪನಿಯು ರಾಜಾಸಾಬ್ ಚಿತ್ರಕ್ಕೆ ಬರೋಬ್ಬರಿ 218 ಕೋಟಿ ರೂ. ಹೂಡಿಕೆ ಮಾಡಿದೆ ಮತ್ತು ಅದಕ್ಕಾಗಿ ವಿಶ್ವಾದ್ಯಂತ ಥಿಯೇಟ್ರಿಕಲ್​ ಮತ್ತು ನಾನ್​-ಥಿಯೇಟ್ರಿಕಲ್​ ಹಕ್ಕುಗಳನ್ನು ನೀಡಲು ಒಪ್ಪಂದ ಮಾಡಿಕೊಂಡಿದೆ ಮತ್ತು ಯಾವುದೇ ಪೈಪೋಟಿ ಇಲ್ಲದಿದ್ದಾಗ ಚಿತ್ರವನ್ನು ಒಂದೇ ರಿಲೀಸ್​ ಆಗಿ ಬಿಡುಗಡೆಗೊಳಿಸಲು ಯೋಜಿಸಿದೆ. ಆದರೆ, ಶೂಟಿಂಗ್ ಇನ್ನೂ ಪೂರ್ಣಗೊಂಡಿಲ್ಲ. ಸಿನಿಮಾಗೆ ಸಂಬಂಧಿಸಿದಂತೆ ಅಪ್ಡೇಟ್​ ಇಲ್ಲ. ತಮ್ಮೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಚಿತ್ರದ ನಿರ್ಮಾಪಕರು ಉಲ್ಲಂಘಿಸುತ್ತಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.

ಹೂಡಿಕೆ ಮಾಡಿದ ಸಂಪೂರ್ಣ ಹಣವನ್ನು ಶೇ.18ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಕಂಪನಿಯು ಚಿತ್ರದ ಮೇಲೆ ಯಾವುದೇ ಹಕ್ಕುಗಳನ್ನು ಹೊಂದಿರಬಾರದು ಮತ್ತು ಚಿತ್ರದ ಶೀರ್ಷಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಅನುಮತಿಸಬಾರದು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲಿರುವ ದೆಹಲಿ ಹೈಕೋರ್ಟ್ ಏನು ಹೇಳಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಾಗಿದೆ,(ಏಜೆನ್ಸೀಸ್).