ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡಲು ವಿಳಂಬ ಮಾಡದೆ ಸೂಕ್ತ ಸಿಬ್ಬಂದಿ ನೇಮಕ ಮಾಡಿ ಕ್ರಮ ವಹಿಸಬೇಕು’ ಎಂದು ಐವನ್ ಡಿಸೋಜಾ ಮನವಿ ಮಾಡಿದಾಗ ಆಯುಕ್ತರು ಒಪ್ಪಿಗೆ ಸೂಚಿಸಿದರು.
ಮಂಗಳೂರು: ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿ ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಕಾರಣ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರು ಜನನ- ಮರಣ ಪ್ರಮಾಣ ಪತ್ರ ಪಡೆಯಲು ಸರತಿ ಸಾಲಿನಲ್ಲಿ ಕಾಯುವಂತಾಗಿದೆ.
ಈ ಬಗ್ಗೆ ಪಾಲಿಕೆಯು ಸೂಚನಾ ಪತ್ರವೊಂದನ್ನು ಜನನ ಪ್ರಮಾಣ ಪತ್ರ ನೀಡುವ ಕಚೇರಿ ಎದುರು ಅಳವಡಿಸಿದ್ದು, ಅದರಲ್ಲಿ ‘ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಿಬ್ಬಂದಿ ನಿರತರಾಗಿರುವ ಕಾರಣ ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಲಾಗಿತ್ತು. ಈ ಬಗ್ಗೆ ಪತ್ರಕರ್ತರು ಐವನ್ ಡಿಸೋಜಾ ಅವರ ಗಮನ ಸೆಳೆದಾಗ ಕಚೇರಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರಲ್ಲದೆ, ಸೂಚನಾ ಫಲಕವನ್ನು ತೆರವುಗೊಳಿಸಲು ಸೂಚಿಸಿದರು.
ಬಳಿಕ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಪ್ರಶ್ನಿಸಿದಾಗ ಸದ್ಯ ಸಿಬ್ಬಂದಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಕಾರಣ ತುರ್ತು ಪ್ರಕರಣಗಳಿಗೆ ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ಸಂಪೂರ್ಣ ಬಂದ್ ಮಾಡಲಾಗಿಲ್ಲ ಎಂದರು. ‘ಎಸ್‌ಐಆರ್ ಸಂದರ್ಭ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಥವಾ ಡಿಲೀಟ್ ಮಾಡಲು ಜನನ ಮತ್ತು ಮರಣ ಪ್ರಮಾಣ ಪತ್ರಗಳ ಅಗತ್ಯವಿರುತ್ತದೆ. ಹಾಗಾಗಿ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡಲು ವಿಳಂಬ ಮಾಡದೆ ಸೂಕ್ತ ಸಿಬ್ಬಂದಿ ನೇಮಕ ಮಾಡಿ ಕ್ರಮ ವಹಿಸಬೇಕು’ ಎಂದು ಐವನ್ ಡಿಸೋಜಾ ಮನವಿ ಮಾಡಿದಾಗ ಆಯುಕ್ತರು ಒಪ್ಪಿಗೆ ಸೂಚಿಸಿದರು.