ದೀಪಾವಳಿ ಮತ್ತು ತುಳಸಿ ಹಬ್ಬ ಮುಗಿಯುತ್ತಿದ್ದಂತೆ ದೇಶದಲ್ಲಿ ಮದುವೆ ಋತು ಆರಂಭವಾಗಿದೆ. ಭಾರತದಲ್ಲಿ ಮದುವೆ ತುಂಬ ಭಾವನಾತ್ಮಕ ಸಂಭ್ರಮದ ಸಂಗತಿ. ಈ ಸಮಾರಂಭವನ್ನು ಚೆಂದವಾಗಿಸಲು ಶತಪ್ರಯತ್ನ ಮಾಡಲಾಗುತ್ತದೆ. ಹೀಗಾಗಿ ಮದುವೆಗಳು ಭಾರತೀಯ ಆರ್ಥಿಕತೆಗೆ ಬೂಸ್ಟರ್ ಕೂಡ ಹೌದು. ಮದುವೆ ಸಮಾರಂಭಗಳಿಂದ ಹಲವು ವಲಯಗಳ ವಹಿವಾಟು ಚೇತರಿಸಿಕೊಳ್ಳುತ್ತವೆ. ಈ ಬಾರಿಯ ಮದುವೆ ಸೀಸನ್ನಲ್ಲಿ 46 ಲಕ್ಷ ಮದುವೆಗಳು ನಡೆಯಲಿದ್ದು, 6.50 ಲಕ್ಷ ಕೋಟಿ ರೂ. ವ್ಯಾಪಾರ ವಹಿವಾಟು ನಡೆಯಲಿದೆ. ಇದರಿಂದ 1 ಕೋಟಿ ತಾತ್ಕಾಲಿಕ ಉದ್ಯೋಗ ಸೃಷ್ಟಿಯಾಗಲಿವೆ.
ಮದುವೆಯ ಮಂಗಳವಾದ್ಯದ ಅನುರಣನ ಆರಂಭವಾಗಿದೆ. 2025ರಲ್ಲಿ ಡಿಸೆಂಬರ್ ಕೊನೆಯವರೆಗೆ ಮದುವೆ ಮುಹೂರ್ತಗಳಿದ್ದು ಛತ್ರಗಳು, ಆಹಾರೋದ್ಯಮ (ಕ್ಯಾಟರಿಂಗ್), ಆತಿಥ್ಯ, ಅಲಂಕಾರ ವಲಯಕ್ಕೆ ಬೇಡಿಕೆ ಹೆಚ್ಚಿದೆ. ಮದುವೆ ಎಂದರೆ ವೀಳ್ಯದೆಲೆಯಿಂದ ಹಿಡಿದು ಬಟ್ಟೆ, ಚಿನ್ನ, ಬೆಳ್ಳಿ, ವಜ್ರದವರೆಗಿನ ಖರೀದಿ ನಡೆಯುತ್ತದೆ. ಅಲ್ಲದೆ, ಮದುವೆಪೂರ್ವ ಸಮಾರಂಭಗಳು ಅದ್ದೂರಿಯಾಗಿ ನಡೆಯುತ್ತಿರುವುದರಿಂದ ‘ಮದುವೆ ಆರ್ಥಿಕತೆ’ಯ ವ್ಯಾಪ್ತಿ ಮತ್ತಷ್ಟು ಹಿಗ್ಗಿದೆ. ವರ್ಷದಿಂದ ವರ್ಷಕ್ಕೆ ಮದುವೆ ಸಮಾರಂಭ ಆಯೋಜನೆಯಲ್ಲಿ ಹೊಸ ಸಂಗತಿಗಳು ಮೇಳೈಸುತ್ತಿದ್ದು, ಕಣ್ಣು ಕೊರೈಸುವ ಅಲಂಕಾರ, ಭರ್ಜರಿ ಭೋಜನದ ಜತೆಗೆ ಡಿಜಿಟಲ್ ಕಂಟೆಂಟ್ಗೂ ಬೇಡಿಕೆ ಹೆಚ್ಚಿದೆ. ಮದುವೆಪೂರ್ವ (ಪ್ರೀ ವೆಡ್ಡಿಂಗ್) ಫೋಟೋಶೂಟ್ ಮತ್ತು ವಿಡಿಯೋಗ್ರಫಿಯನ್ನು ಒಳಗೊಂಡ ದೃಶ್ಯಗಳನ್ನು ಶಾರ್ಟ್ಫಿಲ್ಮ್ಗಳಂತೆ ರೂಪಿಸಲಾಗುತ್ತಿದ್ದು, ವಿಡಿಯೋ ಎಡಿಟರ್ಸ್ ಸೇರಿ ಸೃಜನಶೀಲ ಕಲಾವಿದರಿಗೆ ಬೇಡಿಕೆ ಹೆಚ್ಚಿದೆ.
ದಕ್ಷಿಣ ಭಾರತದಲ್ಲಿ ಅಲಂಕಾರಕ್ಕೆ ಸಾಂಪ್ರದಾಯಿಕ ಟಚ್ ನೀಡಲಾಗುತ್ತಿದ್ದು, ಈ ಕ್ಷೇತ್ರದ ಕಲಾವಿದರಿಗೂ ಬೇಡಿಕೆ ಹೆಚ್ಚಿದೆ. ರಿಸರ್ಚ್ ಆಂಡ್ ಟ್ರೇಡ್ ಡೆವಲಪ್ವೆುಂಟ್ ಸೊಸೈಟಿಯ (ಸಿಆರ್ಟಿಡಿಎಸ್) ಇತ್ತೀಚಿನ ವರದಿಯ ಪ್ರಕಾರ ನವೆಂಬರ್ 1ರಿಂದ ಡಿಸೆಂಬರ್ 14ರವರೆಗೆ ದೇಶಾದ್ಯಂತ 46 ಲಕ್ಷ ಮದುವೆಗಳು ನಡೆಯಲಿವೆ. ಈ ಮೂಲಕ 6.50 ಲಕ್ಷ ಕೋಟಿ ರೂ.ಗಳ ವ್ಯಾಪಾರ ವಹಿವಾಟು ನಡೆಯುವ ಸಾಧ್ಯತೆ ಇದೆ. ಮದುವೆ ಸಮಾರಂಭಗಳು ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ಸಂಗಮವಾಗಿದ್ದು, ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ. ಮದುವೆಗೆ ಸಂಬಂಧಿತ ಶೇಕಡ 70ಕ್ಕಿಂತಲೂ ಅಧಿಕ ಉತ್ಪನ್ನಗಳು ಭಾರತದಲ್ಲೇ ನಿರ್ವಿುತವಾಗಿವೆ. ಇದರಿಂದ ಸ್ಥಳೀಯ ಉದ್ಯಮಗಳು ಸಾಕಷ್ಟು ಆರ್ಡರ್ಗಳನ್ನು ಪಡೆಯಲಿವೆ ಎಂದು ಸಿಆರ್ಟಿಡಿಎಸ್ ವರದಿ ವಿವರಿಸಿದೆ.
1. ಮದುವೆಗೆ ಬಂದ ಅತಿಥಿಗಳ ಒಳಗೊಳ್ಳುವಿಕೆ ಹೆಚ್ಚಿಸಲು ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಧು ಮತ್ತು ವರರ ಕುಟುಂಬಗಳ ನಡುವೆ ಟಿ10 ಕ್ರಿಕೆಟ್ ಪಂದ್ಯ, ವಾಲಿಬಾಲ್, ಫುಟ್ಬಾಲ್ ಪಂದ್ಯಗಳು ನಡೆಯುತ್ತಿವೆ. ವಿಜೇತರಿಗೆ ಟ್ರೋಫಿ ವಿತರಣೆಯ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆಯುತ್ತಿದೆ.
2.ವಧು-ವರರ ವಿಶೇಷ ಫೋಟೋಶೂಟ್ ಅಂತೂ ನಡೆದೇ ನಡೆಯುತ್ತದೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಣ-ಕ್ಷಣಕ್ಕೂ ಮಾಹಿತಿ ಹಂಚಿಕೊಳ್ಳಲು, ಪಾಲ್ಗೊಂಡ ಅತಿಥಿಗಳ ಬಗ್ಗೆ ತಿಳಿಸಲು 7-8 ಜನರ ಸಾಮಾಜಿಕ ಮಾಧ್ಯಮ ನಿರ್ವಹಣೆಗಾರರ ತಂಡವನ್ನೇ ನಿಯೋಜಿಸಲಾಗುತ್ತಿದೆ. ಇದಕ್ಕಾಗಿ, 5-10 ಲಕ್ಷ ರೂ. ಖರ್ಚು ಮಾಡುವ ಮದುವೆಗಳು ಹೆಚ್ಚುತ್ತಿವೆ. ಮದುವೆಗೆ ಬಂದ ಅತಿಥಿಗಳ ಫೋಟೋ, ರೀಲ್ಗಳನ್ನು ವಿವಿಧ ಭಂಗಿಗಳಲ್ಲಿ ತೆಗೆದು ಅಪಲೋಡ್ ಮಾಡಲಾಗುತ್ತಿದೆ.
1.ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿರುವ ಭಾರತದಲ್ಲಿ ವಿವಾಹ ಸಮಾರಂಭಗಳನ್ನು ನಡೆಸಲು ಸಾಕಷ್ಟು ಪ್ರಶಸ್ತವಾದ ಸ್ಥಳಗಳಿವೆ. ಆದರೆ, ಶಿಸ್ತುಬದ್ಧ ಆಯೋಜನೆ, ಸಮರ್ಪಕ ನಿರ್ವಹಣೆಯ ಕಾರಣ ಸಿರಿವಂತ ಕುಟುಂಬಗಳು ವಿದೇಶಗಳತ್ತ ಮುಖ ಮಾಡುತ್ತಿವೆ.
2.ಭಾರತದ ಬಹುತೇಕ ರಾಜ್ಯಗಳಲ್ಲಿ ಪ್ರಸಿದ್ಧ ದೇವಾಲಯಗಳಿವೆ, ಅವುಗಳ ಸುತ್ತಮುತ್ತ ಪ್ರೇಕ್ಷಣಿಯ ಸ್ಥಳಗಳಿವೆ. ಇವುಗಳಿಗೆ ಹೊಂದಿಕೊಂಡಂತೆ, ವಿವಾಹಕ್ಕೆ ಬೇಕಾದ ಸಮರ್ಪಕ ವ್ಯವಸ್ಥೆಯನ್ನು ರೂಪಿಸಿದರೆ, ಬಹಳಷ್ಟು ಜನರು ಈ ತಾಣಗಳನ್ನೇ ಆಯ್ದುಕೊಳ್ಳಬಹುದು. ಈ ನಿಟ್ಟಿನಲ್ಲಿ ನಮ್ಮ ಪ್ರವಾಸೋದ್ಯಮ ನೀತಿಯಲ್ಲಿ ಒಂದಿಷ್ಟು ಬದಲಾವಣೆ ಮತ್ತು ಸುಧಾರಣೆ ತರುವುದು ಅಗತ್ಯವಾಗಿದೆ.
3.ಮದುವೆ ಸಮಾರಂಭ ನಡೆಸಲು ಅವಶ್ಯಕವಾದ ಪರಿಕರಗಳನ್ನು ಒಂದೇ ಸ್ಥಳದಲ್ಲಿ ಸಿಗುವಂತೆ ಮಾಡುವುದು, ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸುವುದು, ಅತಿಥಿಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವುದು- ಹೀಗೆ ಅಗತ್ಯ ಕ್ರಮಗಳನ್ನು ಕೈಗೊಂಡರೆ ‘ಮದುವೆ ಪ್ರವಾಸೋದ್ಯಮ’ಕ್ಕೆ ಸೂಕ್ತ ಉತ್ತೇಜನ ಸಿಕ್ಕಂತಾಗುತ್ತದೆ. ಮುಖ್ಯವಾಗಿ, ಸ್ಥಳೀಯರಿಗೆ ವ್ಯಾಪಾರ-ವಹಿವಾಟಿನ ಅವಕಾಶಗಳು ಹೆಚ್ಚಿ, ಆರ್ಥಿಕತೆಗೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತಗಳು ಕೂಡ ವಿಶೇಷ ಯೋಜನೆಗಳನ್ನು ರೂಪಿಸಬಹುದು.
ಪ್ರಕೃತಿಯ ರಮ್ಯತಾಣಗಳಲ್ಲಿ ವಿವಾಹ ಬಂಧನಕ್ಕೊಳಗಾಗಲು ಜನ ಬಯಸುತ್ತಿದ್ದಾರೆ. ನಿಸರ್ಗದ ಸಾನಿಧ್ಯದಲ್ಲಿ, ಹಸಿರಿನ ಮಡಿಲಿನಲ್ಲಿ ನಡೆಯುವ ಸಮಾರಂಭ ತುಂಬ ಖುಷಿ ಮತ್ತು ಸಂತೃಪ್ತಿ ಕೊಡುತ್ತದೆ ಎಂಬ ಕಾರಣಕ್ಕೆ ಗ್ರೀನ್ ವೆಡ್ಡಿಂಗ್ನ ಪ್ರಮಾಣ ಹೆಚ್ಚಳಗೊಂಡಿದೆ. ಇಂಥ ಸ್ಥಳಗಳಲ್ಲಿ ಅಲಂಕಾರಕ್ಕೂ ಪರಿಸರಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ.
ಮದುವೆ ಸಮಾರಂಭಗಳಿಂದ 1 ಕೋಟಿ ತಾತ್ಕಾಲಿಕ ಉದ್ಯೋಗಗಳು ಸೃಷ್ಟಿಯಾಗಲಿವೆ. ವೇದಿಕೆ ಮತ್ತು ಮಂಟಪ ಅಲಂಕಾರ ಮಾಡುವವರು, ಕ್ಯಾಟರಿಂಗ್ನಲ್ಲಿ ತೊಡಗಿರುವವರಿಗೆ ಅವಕಾಶಗಳು ಹೆಚ್ಚಲಿವೆ. ಪ್ರವಾಸ ಮತ್ತು ಆತಿಥ್ಯ ಸೇರಿ ಹಲವು ಕ್ಷೇತ್ರಗಳಲ್ಲಿ ಬೇಡಿಕೆ ಹೆಚ್ಚಲಿದೆ.
1.ಆಭರಣ 2.ಬಟ್ಟೆ 3.ಕ್ಯಾಟರಿಂಗ್ 4.ಅಲಂಕಾರ 5.ಮದುವೆ ನಡೆಯುವ ಸ್ಥಳ
ಹಸೆಮಣೆ ಏರುತ್ತಿರುವ ನವಜೋಡಿಗಳಿಗೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರೂ ಭರ್ಜರಿ ಉಡುಗೋರೆ ನೀಡಿದ್ದಾರೆ. ಹೌದು, ಜಿಎಸ್ಟಿ ಪರಿಷ್ಕರಣೆಯ ಆದೇಶ ಸೆಪ್ಟೆಂಬರ್ 22ರಿಂದ ಜಾರಿಗೆ ಬಂದಿರುವುದರಿಂದ ಹಲವು ಉತ್ಪನ್ನಗಳ ಬೆಲೆ ತಗ್ಗಿದೆ. ಇದು ಮದುವೆಯಲ್ಲಿ ತೊಡಗಿರುವವರ ಉತ್ಸಾಹವನ್ನು ಹೆಚ್ಚಿಸಿದ್ದು, ಖರೀದಿ ಪ್ರಮಾಣ ಕಳೆದ ವರ್ಷಕ್ಕಿಂತ ಅಧಿಕವಾಗಲಿದೆ ಎಂದಿವೆ ಮೂಲಗಳು.
ಕೆಲವು ದೊಡ್ಡ ಕುಟುಂಬಗಳು ವಿದೇಶದಲ್ಲಿ ಮದುವೆಗಳನ್ನು ನಡೆಸುವ ಪ್ರವೃತ್ತಿ ಬೆಳೆಸಿಕೊಂಡಿದ್ದು, ಇದರಿಂದ ಭಾರತಕ್ಕೆ ಪ್ರಯೋಜನವೇನೂ ಇಲ್ಲ. ದೇಶದ ಹಣ ಹೊರದೇಶಗಳಿಗೆ ಸೇರದಂತೆ ನಮ್ಮ ನೆಲದಲ್ಲಿಯೇ ಮದುವೆ ಮತ್ತಿತರ ಆಚರಣೆಗಳನ್ನು ನಡೆಸಬೇಕು. ಭಾರತದ ಮಣ್ಣಿನಲ್ಲಿ ಭಾರತೀಯರ ಮಧ್ಯೆ ಮದುವೆ ನಡೆದರೆ ದೇಶದ ಹಣ ದೇಶದಲ್ಲೇ ಉಳಿಯುತ್ತದೆ. ಅಲ್ಲದೆ ನಮ್ಮ ದೇಶದ ಜನರಿಗೂ ನಿಮ್ಮ ವಿವಾಹದಲ್ಲಿ ಏನಾದರೂ ಸೇವೆ ಮಾಡುವ ಅವಕಾಶ ಸಿಗುತ್ತದೆ. ಕಡುಬಡವರು ಕೂಡ ತಮ್ಮ ಮಕ್ಕಳಿಗೆ ನಿಮ್ಮ ಮದುವೆ ಬಗ್ಗೆ ಹೇಳುತ್ತಾರೆ. | ನರೇಂದ್ರ ಮೋದಿ ಪ್ರಧಾನಿ (2023ರ ನವೆಂಬರ್ನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದು)