ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಆರಂಭವಾಗಿದ್ದು 2022ರ ಫೆಬ್ರವರಿಯಲ್ಲಿ. ಯುದ್ಧದ ಮೂರು ವರ್ಷಗಳ ನಂತರ ಅಂದರೆ 2025ರ ಫೆಬ್ರವರಿ-ಮಾರ್ಚ್ ನಲ್ಲಿ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ನಡೆದರೂ ಅದು ಫಲಪ್ರದವಾಗದ ಕಾರಣ ಸಮರ ಮುಂದುವರಿದಿದೆ. ಈ ದೀರ್ಘಾವಧಿಯ ಸಮರ ಯಾವಾಗ ಕೊನೆಗಾಣಲಿದೆ ಎಂಬ ಸ್ಪಷ್ಟತೆ ಇಲ್ಲ. ಈ ನಡುವೆ ರಷ್ಯಾ ಸೇನೆ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದು, ಭಾರತ ಸೇರಿದಂತೆ ಹಲವು ದೇಶಗಳ ಯುವಕರಿಗೆ ಆಮಿಷವೊಡ್ಡಿ ಇಲ್ಲವೆ ಬೆದರಿಕೆ ಹಾಕಿ ರಷ್ಯಾ ಸೇನೆಗೆ ಸೇರಿಸಲಾಗುತ್ತಿದೆ. ಹೀಗೆ ಭರ್ತಿ ಮಾಡುವ ಜಾಲಗಳು ವಿವಿಧ ದೇಶಗಳಲ್ಲಿ ಸಕ್ರಿಯವಾಗಿದ್ದು, ಯುವಕರ ಪಾಲಿಗೆ ಕಂಟಕವಾಗಿ ಪರಿಣಮಿಸಿವೆ.
ಅಲ್ಲಿ ಹೋದ ಬಳಿಕವೇ ರವಿಗೆ ಗೊತ್ತಾಗಿದ್ದು ತಾನು ಮೋಸದ ವಿಷವರ್ತಲದಲ್ಲಿ ಸಿಲುಕಿದ್ದೇನೆ ಎಂದು. ಯೂಕ್ರೇನ್ ವಿರುದ್ಧದ ಮುಂಚೂಣಿ ಹೋರಾಟದಲ್ಲಿ ಭಾಗವಹಿಸುವಂತೆ ರಷ್ಯಾ ಸೇನೆ ರವಿ ಗೌಣಗೆ ಸೂಚಿಸಿತ್ತು. ಇಲ್ಲವಾದರೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು. ಇದರಿಂದ ಹೆದರಿ, ರಷ್ಯಾದ ಪರವಾಗಿ ಹೋರಾಟ ಮಾಡಲು ಒಪ್ಪಿದ. ಆರಂಭದಲ್ಲಿ ಕಂದಕಗಳನ್ನು ತೆರೆಯುವ ತರಬೇತಿ ನೀಡಿ, ಬಳಿಕ ಯುದ್ಧಭೂಮಿಗೆ ಕಳುಹಿಸಿ ಕೊಡಲಾಗಿತ್ತು.
ಬಂದದ್ದು ಮರಣವಾರ್ತೆ: ರಷ್ಯಾ ಪರವಾಗಿ ಯೂಕ್ರೇನ್ ವಿರುದ್ಧ ಹೋರಾಡುತ್ತಿರುವಾಗಲೇ ರವಿ ಮೌಣ ಯುದ್ಧಭೂಮಿಯಲ್ಲಿ 2024ರ ಜುಲೈ 29ರಂದು ಪ್ರಾಣ ಕಳೆದುಕೊಂಡ. ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ರವಿ ಮೌಣ ಸಾವಿನ ಸುದ್ದಿಯನ್ನು ಖಚಿತಪಡಿಸಿದಾಗ, ಕುಟುಂಬವರ್ಗದವರಿಗೆ ಬರಸಿಡಿಲು ಎರಗಿದಂಥ ಆಘಾತಕಾರಿ ಅನುಭವ. ಜಮೀನು ಮಾರಿ ಮಗನನ್ನು ವಿದೇಶಕ್ಕೆ ಕಳುಹಿಸಿದ್ದ ಹೆತ್ತವರು, ಅವನ ಶವವನ್ನು ಬರಮಾಡಿಕೊಳ್ಳುವಂಥ ದಯನೀಯ ಸ್ಥಿತಿ.
ಇದು ಒಬ್ಬ ಯುವಕನ ಕತೆಯಲ್ಲ. ಪಂಜಾಬ್, ಹರಿಯಾಣ, ಬಿಹಾರ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ವಿದೇಶ ಉದ್ಯೋಗದ ನಿಮಿತ್ತ ಅಥವಾ ಉನ್ನತ ಶಿಕ್ಷಣದ ನಿಮಿತ್ತ ರಷ್ಯಾಗೆ ತೆರಳಿದವರ ದಯನೀಯ ಸ್ಥಿತಿ. ರಷ್ಯಾ ಸೇನೆಗೆ ಮಾನವ ಸಂಪನ್ಮೂಲದ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ಯೂಕ್ರೇನ್ ಜತೆಗಿನ ಯುದ್ಧ ವಿನಾಶಕಾರಿ ಸ್ಥಿತಿಗೆ ತಲುಪಿರುವ ಹಿನ್ನೆಲೆಯಲ್ಲಿ ರಷ್ಯನ್ ಯುವಕರು ಸೇನೆ ಸೇರಲು ಮುಂದಾಗುತ್ತಿಲ್ಲ. ಯುದ್ಧ ಮುಂದುವರಿಸಬೇಕಾದರೆ ಸೇನೆಗೆ ಹೆಚ್ಚೆಚ್ಚು ಸದೃಢ ಯುವಕರು ಬೇಕು. ಹೀಗಾಗಿ ಈ ನೇಮಕಾತಿಯನ್ನು ನೇರ, ನ್ಯಾಯಯುತ ಮಾರ್ಗದಲ್ಲಿ ಕೈಗೊಂಡರೆ ಪ್ರಯೋಜನವಿಲ್ಲ ಎಂದರಿತು ವಾಮಮಾರ್ಗದಲ್ಲಿ ಸೇನೆಗೆ ಯುವಕರನ್ನು ಸೇರಿಸಲು ವಿವಿಧ ಜಾಲಗಳನ್ನೇ ಸೃಷ್ಟಿಸಲಾಗಿದೆ. ಈ ಜಾಲಗಳು ಯುವಕರಿಗೆ ಐಷಾರಾಮಿ ಜೀವನ, ಉತ್ತಮ ಸಂಬಳ, ವಿವಿಧ ಸೌಲಭ್ಯಗಳ ಆಮಿಷವನ್ನು ತೋರಿಸಿ, ಕೊನೆಗೆ ಯುವಕರನ್ನು ಯುದ್ಧಭೂಮಿಯಲ್ಲಿ ಬಿಡುವ ಮೂಲಕ ಸಾವಿನ ದವಡೆಗೆ ನೂಕುತ್ತಿವೆ. ಕೆಲವರು ಆಮಿಷಕ್ಕೆ ಬಗ್ಗದಿದ್ದಾಗ ಅವರನ್ನು ಬೆದರಿಸಲಾಗುತ್ತದೆ, ಸುಳ್ಳು ಪ್ರಕರಣ ಹಾಕಿ, ಜೈಲಿಗೆ ಕಳುಹಿಸಲಾಗುವುದು, ಪಾಸ್ಪೋರ್ಟ್ ವಶಪಡಿಸಿಕೊಳ್ಳಲಾಗುವುದು ಎಂದೆಲ್ಲ ಹೆದರಿಸಿ, ಅಮಾಯಕ ಯುವಕರನ್ನು ಯೂಕ್ರೇನ್ ವಿರುದ್ಧ ಹೋರಾಡಲು ರಷ್ಯಾ ಸೇನೆಗೆ ಸೇರಿಸಲಾಗುತ್ತದೆ.
ಈ ಸಮಸ್ಯೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿಯೇ, 2024ರ ಜುಲೈನಲ್ಲಿ ರಷ್ಯಾ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಜತೆಗಿನ ದ್ವಿಪಕ್ಷೀಯ ಮಾತುಕತೆಯಲ್ಲಿ, ‘ಭಾರತದಿಂದ ಬೇರೆ ಬೇರೆ ಕೆಲಸಗಳಿಗಾಗಿ ನೇಮಕಾತಿಗೊಂಡು ಈಗ ರಷ್ಯಾ ಪರವಾಗಿ ಯೂಕ್ರೇನ್ ವಿರುದ್ಧದ ಯುದ್ಧದಲ್ಲಿ ಕೆಲಸ ಮಾಡಬೇಕಾಗಿ ಬಂದಿರುವ ಭಾರತೀಯರನ್ನು ಕೂಡಲೇ ಅಲ್ಲಿಂದ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದ್ದರು. ಇದಕ್ಕೆ ಪುತಿನ್ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಅದಾದ ಬಳಿಕ ರಷ್ಯಾ ರಾಯಭಾರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ‘ಭಾರತೀಯರನ್ನು ವಂಚಿಸಿ ಅವರನ್ನು ರಷ್ಯಾ ಸೇನೆಯಲ್ಲಿ ಸೇರಿಸುವ ಮತ್ತು ಯೂಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಇಳಿಸುವ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಲು ರಷ್ಯಾ ಬದ್ಧವಾಗಿದೆ’ ಎಂದಿದ್ದರು. ಆದರೆ, ಇಂದಿಗೂ ಈ ಭರವಸೆ ಈಡೇರಿಲ್ಲ. ಲಾಭದಾಯಕ ಉದ್ಯೋಗ ಮತ್ತು ಶಿಕ್ಷಣದ ಆಮಿಷಕ್ಕೆ ಒಳಗಾಗಿ 30ರಿಂದ 40 ಭಾರತೀಯರು ಈಗಲೂ ರಷ್ಯಾ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈವರೆಗೆ 10 ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲಾಗಿದ್ದು, ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ.
ಉನ್ನತ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಸಾಲ ಪಡೆದು ರಷ್ಯಾಗೆ ತೆರಳಿದ ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಖರ್ಚು ಭರಿಸಲು ಅಥವಾ ಶೈಕ್ಷಣಿಕ ಸಾಲದ ಇಎಂಐ ಪಾವತಿಗೆ ಅನುಕೂಲವಾಗಲಿ ಎಂದು ಅರೆಕಾಲಿಕ (ಪಾರ್ಟ್ಟೈಮ್ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ತರಗತಿಗಳು ವಾರದ ನಾಲ್ಕು ದಿನ ಮಾತ್ರ ನಡೆಯುವುದರಿಂದ ಉಳಿದ ದಿನಗಳಲ್ಲಿ ಮತ್ತು ತರಗತಿಯ ನಂತರದ ಸಮಯದಲ್ಲಿ ಕೆಲಸ ಮಾಡುತ್ತಾರೆ. ಸಾಮಾನ್ಯವಾಗಿ ರೆಸ್ಟೋರೆಂಟ್ಗಳಲ್ಲಿ ಸಹಾಯಕರಾಗಿ ಇಲ್ಲವೆ ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗೆ ಅರೆಕಾಲಿಕ ಕೆಲಸ ಮಾಡುವ ಯುವಕರನ್ನೇ ಗುರುತಿಸಿ ಈ ಜಾಲಗಳು ಟಾರ್ಗೆಟ್ ಮಾಡುತ್ತವೆ. ‘ನಾವು ಉತ್ತಮ ಸಂಬಳದ ಉದ್ಯೋಗ ಕೊಡಿಸುತ್ತೇವೆ. ಸೌಲಭ್ಯಗಳೂ ಇರುತ್ತವೆ’ಎಂದು ನಂಬಿಸಿ, ಅಗ್ರಿಮೆಂಟ್ಗೆ ಸಹಿ ಮಾಡಿಸಿಕೊಳ್ಳುತ್ತಾರೆ. ವಿಪರ್ಯಾಸ ಎಂದರೆ, ಅಗ್ರಿಮೆಂಟ್ಗೆ ಸಹಿ ಮಾಡುವವರೆಗೂ ಅಭ್ಯರ್ಥಿಗಳಿಗೆ ಅಥವಾ ಉದ್ಯೋಗಾಕಾಂಕ್ಷಿಗಳಿಗೆ ಅದು ಯಾವ ಬಗೆಯ ಉದ್ಯೋಗ, ಕೆಲಸದ ಸ್ವರೂಪ ಏನು, ಎಲ್ಲಿ ಕಾರ್ಯನಿರ್ವಹಿಸಬೇಕು ಎಂದು ಏಜೆಂಟ್ಗಳು ತಿಳಿಸುವುದೇ ಇಲ್ಲ. ಏಜೆಂಟ್ಗಳ ಬಣ್ಣದ ಮಾತಿಗೆ ಮರುಳಾಗುವ ಯುವಕರಿಗೆ ವಾಸ್ತವ ಗೊತ್ತಾಗುವ ಹೊತ್ತಿಗೆ ತುಂಬ ತಡವಾಗಿರುತ್ತದೆ. ಸೇನೆಯ ಸಮವಸ್ತ್ರ, ಕೈಗೆ ಬಂದೂಕು ಬಂದು ಇವರು ರಣರಂಗದಲ್ಲಿ ನಿಂತಿರುತ್ತಾರೆ. ಯಾವ ಕ್ಷಣದಲ್ಲಿ ಸಾವು ಬಂದು ಅಪ್ಪಳಿಸುತ್ತದೆ ಎಂದು ಗೊತ್ತಾಗದ ಸ್ಥಿತಿಯಲ್ಲಿ ದಿನದೂಡಬೇಕಾಗುತ್ತದೆ.
ಶಿಕ್ಷಣ ಪೂರ್ಣಗೊಳಿಸಿದ ಮೇಲೆ ಉದ್ಯೋಗ ಗಿಟ್ಟಿಸಿ, ಉತ್ತಮ ಬದುಕು ರೂಪಿಸಿಕೊಳ್ಳುವ ಕನಸು ಎಲ್ಲರಲ್ಲೂ ಇರುತ್ತದೆ. ಅದರಲ್ಲೂ, ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೆ ಶೈಕ್ಷಣಿಕ ಸಾಲ ತೀರಿಸಿ, ಒಂದಿಷ್ಟು ಹಣ ಉಳಿಸಬಹುದು ಎಂಬ ಆಲೋಚನೆ ಯುವಕರದ್ದು. ಆದರೆ, ವಿದೇಶಗಳಲ್ಲಿ ಕೆಲಸಕ್ಕೆ ಸೇರುವ ಮುನ್ನ ಕೂಲಂಕಷವಾಗಿ ಎಲ್ಲ ವಿವರಗಳನ್ನು ಪರಿಶೀಲಿಸುವುದು ಉದ್ಯೋಗಾಕಾಂಕ್ಷಿಗಳ ಕರ್ತವ್ಯ. ಯಾವ ಬಗೆಯ ಕೆಲಸಕ್ಕೆ ತಾವು ವಿದೇಶಕ್ಕೆ ಹೋಗುತ್ತಿದ್ದೇವೆ, ಕಂಪನಿ ಯಾವುದು, ಅದು ನಂಬಲರ್ಹವೇ ಹೀಗೆ ಎಲ್ಲ ಮಾಹಿತಿಯನ್ನೂ ಮತ್ತೊಮ್ಮೆ ಪರಾಮಶಿಸಿ ಅದು ಸರಿಯಾಗಿದ್ದಲ್ಲಿ ಮಾತ್ರ ಆಫರ್ ಲೆಟರ್ನ್ನು ಒಪ್ಪಿಕೊಳ್ಳಬೇಕು. ಉದ್ಯೋಗದಾತ ಕಂಪನಿಗಳ ನಡವಳಿಕೆಯಲ್ಲಿ ಅನುಮಾನಗಳು ಕಂಡುಬಂದರೆ, ಅಂಥ ಆಫರ್ಗಳನ್ನು ತಿರಸ್ಕರಿಸಬೇಕು. ಯುವಕರ ಕೆಲಸದ ಅನಿವಾರ್ಯತೆಯನ್ನು ದುರುಪಯೋಗ ಪಡಿಸಿಕೊಳ್ಳುವ ಮತ್ತು ವಿದೇಶಗಳಲ್ಲಿ ಅವರನ್ನು ಕಿರುಕುಳಕ್ಕೆ ಒಳಪಡಿಸುವ ಜಾಲಗಳು ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಬೆಳವಣಿಗೆ. ಈ ವಿಷಯದಲ್ಲಿ ಸರ್ಕಾರ ಕೂಡ ಎಚ್ಚೆತ್ತುಕೊಳ್ಳಬೇಕಿದೆ ಮತ್ತು ವಿದೇಶಕ್ಕೆ ಉದ್ಯೋಗಕ್ಕೆಂದು ತೆರಳಿದ ಭಾರತೀಯರ ರಕ್ಷಣೆಗೆ ಸಮಗ್ರ ವ್ಯವಸ್ಥೆಯನ್ನು ರೂಪಿಸಬೇಕಿದೆ. ಮುಖ್ಯವಾಗಿ, ವಂಚನೆಯಿಂದ ಬಚಾವಾಗಲು ಸರ್ಕಾರದಿಂದಲೇ ಅಧಿಕೃತ ತಪಾಸಣೆ ವ್ಯವಸ್ಥೆ ಜಾರಿಗೆ ತರುವುದು ಅಗತ್ಯ.