ನ್ಯೂಸ್

ನಾಳೆ ಅಹಮದಾಬಾದ್​ಗೆ ಆಗಮಿಸುತ್ತಿರುವ ಡೊನಾಲ್ಡ್ ಟ್ರಂಪ್​ಗೆ ಇಂದು ಟ್ವೀಟ್​ ಮೂಲಕ ಸ್ವಾಗತ ಕೋರಿ, ಭಾರತ ಕಾಯುತ್ತಿದೆ ಎಂದ ಪ್ರಧಾನಿ ಮೋದಿ

lakshmihegde

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಫೆ.24 (ನಾಳೆ)ರಂದು ಭಾರತಕ್ಕೆ ಬರಲಿದ್ದಾರೆ. ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವುದಲ್ಲದೆ ಹಲವು ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಿಕೊಳ್ಳುವುದು ಈ ಭೇಟಿಯಿಂದ ಸಾಧ್ಯವಾಗಲಿದೆ ಎನ್ನಲಾಗಿದೆ.

ಸೋಮವಾರ ಬೆಳಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ತಮ್ಮ ಪತ್ನಿ ಮೆಲಾನಿಯಾ ಟ್ರಂಪ್​ರೊಂದಿಗೆ ಅಹಮದಾಬಾದ್​ನ ಸರ್ದಾರ್ ವಲ್ಲಭಭಾಯಿ ಪಟೇಲ್​ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಇವರೊಂದಿಗೆ ಉನ್ನತಮಟ್ಟದ ನಿಯೋಗವೊಂದು ಇರಲಿದೆ.

ಗುಜರಾತ್​ನಲ್ಲಿ ನಡೆಯಲಿರುವ 'ನಮಸ್ತೆ ಟ್ರಂಪ್'​ ಬಗ್ಗೆ ಅಲ್ಲಿನ ಹಲವು ಜನರನ್ನು ಮಾತನಾಡಿಸಲಾಗಿದೆ. ಅವರೆಲ್ಲರೂ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಲವಾಗಲಿ ಎಂದೇ ಆಶಿಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್​ ಅಮೆರಿಕವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದಿದ್ದಾರೆ. ಹಾಗೇ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಇವರಿಬ್ಬರ ಭೇಟಿ ನೋಡಲು ಸಂತೋಷ. ಅದೂ ಟ್ರಂಪ್ ಅವರು ಭಾರತಕ್ಕೆ ಬರುತ್ತಿರುವುದು ತುಂಬ ಖುಷಿಯ ವಿಚಾರ ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಜನರ ಮಾತುಗಳು, ಈ ಹಿಂದೆ ಮೋದಿ ಮತ್ತು ಟ್ರಂಪ್​ ಭೇಟಿಯ ಕೆಲವು ಕ್ಷಣಗಳನ್ನು ಸೇರಿಸಿ ಎಡಿಟ್ ಮಾಡಲಾದ ವಿಡಿಯೋವೊಂದನ್ನು ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ ಅವರು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರಂಪ್​ ಭೇಟಿಯ ಬಗ್ಗೆ ಗುಜರಾತ್​ನ ಎಲ್ಲರ ಅಭಿಪ್ರಾಯವೂ, ಮಾತುಗಳೂ ಒಂದೇ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ಗುಜರಾತ್​ ಮುಖ್ಯಮಂತ್ರಿಯ ಟ್ವೀಟ್​ನ್ನು ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಅವರನ್ನು ಸ್ವಾಗತಿಸಲು ಭಾರತ ಕಾಯುತ್ತಿದೆ. ನಾಳೆ ಅಹ್ಮದಾಬಾದ್​ನಲ್ಲಿ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಟ್ರಂಪ್​ ಅವರು ನಮ್ಮೊಂದಿಗೆ ಇರುವುದು ನಮಗೆ ಗೌರವ ಎಂದು ಬರೆದಿದ್ದಾರೆ.

ಈ ಹಿಂದೆ ಕೂಡ ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಅವರು ಭಾರತಕ್ಕೆ ಆಗಮಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದರು. ಫೆ.12ರಂದು ಟ್ವೀಟ್ ಮಾಡಿ, ಗೌರವಾನ್ವಿತ ಅತಿಥಿಗಳಿಗೆ ಭಾರತ ಯಾವತ್ತೂ ಸ್ಮರಣೀಯವಾದ ಸ್ವಾಗತವನ್ನೇ ನೀಡುತ್ತದೆ. ಡೊನಾಲ್ಡ್​ ಟ್ರಂಪ್​ ಅವರು ಭಾರತಕ್ಕೆ ಆಗಮಿಸುತ್ತಿರುವುದು ವಿಶೇಷ. ಯುಎಸ್​ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ ಎಂದಿದ್ದರು. (ಏಜೆನ್ಸೀಸ್​)