ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯೋರ್ವ ತನಗೇ ತಾನೇ ಶೂಟ್ ಮಾಡಿಕೊಂಡು ತೀವ್ರವಾಗಿ ಗಾಯಗೊಂಡಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆ ರಾಂಪುರ್ ಬುಶಹರ್ ನಿಂದ 23 ಕಿ.ಮೀ.ದೂರದಲ್ಲಿರುವ ಜಿಯೋರಿಯಲ್ಲಿ ಘಟನೆ ನಡೆದಿದೆ. ಈ ಸೈನಿಕನ ಬಳಿಯಿದ್ದ ರೈಫಲ್ನಿಂದ ಎರಡು ಬಾರಿ ಅವರ ಮೈಯೊಳಗೆ ಗುಂಡು ಹೊಕ್ಕಿದೆ.
ಸಚಿನ್ ಜಾಧವ್ (23) ಗಾಯಗೊಂಡವರು. ಇವರು ಐಟಿಬಿಪಿ 43ನೇ ಬೆಟಾಲಿಯನ್ನಲ್ಲಿ ಕರ್ತವ್ಯದಲ್ಲಿದ್ದರು. ಇಂದು ಮುಂಜಾನೆ 5.15ರ ಹೊತ್ತಿಗೆ ಘಟನೆ ನಡೆದಿದೆ. ಆದರೆ ಇದು ಆತ್ಮಹತ್ಯೆಯಲ್ಲ. ಆಕಸ್ಮಿಕವಾಗಿ ಆಗಿದ್ದು ಎನ್ನಲಾಗಿದೆ.
ಅವರು ಐಟಿಬಿಪಿ 43ನೇ ಬೆಟಾಲಿಯನ್ನ ಮುಖ್ಯ ಗೇಟ್ ಬಳಿ ಗಾರ್ಡ್ ಆಗಿದ್ದರು. ಮುಂಜಾನೆ ಒಮ್ಮೆಲೆ ಗುಂಡಿನ ಶಬ್ದ ಕೇಳಿದ್ದರಿಂದ, ಅಲ್ಲಿಯೇ ಇದ್ದ ಬೇರೊಬ್ಬ ಪೊಲೀಸ್ ಬಂದು ನೋಡಿದರೆ ಸಚಿನ್ ಹೊಟ್ಟೆಗೆ ಎರಡು ಗುಂಡು ಹೊಕ್ಕಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಚಿಕಿತ್ಸೆಗಾಗಿ ಮಹಾತ್ಮಾ ಗಾಂಧಿ ವೈದ್ಯಕೀಯ ಸರ್ವೀಸ್ ಕಾಂಪ್ಲೆಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿನ್ಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಏನೂ ಇರಲಿಲ್ಲ. ಆಕಸ್ಮಿಕವಾಗಿ ಗುಂಡು ಹಾರಿದ್ದು, ತನಿಖೆಯ ವೇಳೆ ಗೊತ್ತಾಗಿದೆ ಎಂದು ಎಸ್ಪಿ ಅಭಿಮನ್ಯು ವರ್ಮಾ ತಿಳಿಸಿದ್ದಾರೆ. (ಏಜೆನ್ಸೀಸ್)