ನ್ಯೂಸ್

ಇಟಲಿಯಲ್ಲಿ ಒಂದೇ ದಿನದಲ್ಲಿ 793 ಮಂದಿ ಕಿಲ್ಲರ್​ ಕರೊನಾ ವೈರಸ್​ಗೆ ಬಲಿ: ಸೋಂಕಿತರ ಸಂಖ್ಯೆ 13ರಷ್ಟು ಏರಿಕೆ

ರೋಮ್​: ಕಿಲ್ಲರ್​ ಕರೊನಾ ವೈರಸ್​ ಸೋಂಕಿಗೆ ಇಟಲಿಯಲ್ಲಿ ಶನಿವಾರ ಒಂದೇ ದಿನ 793 ಮಂದಿ ಸಾವಿಗಿಡಾಗಿದ್ದು, ಒಟ್ಟು ಮೃತರ ಸಂಖ್ಯೆ 4825 ಆಗಿದೆ. ಇಟಲಿಯಲ್ಲಿ ಸಾವಿನ ಸಂಖ್ಯೆ ಶೇ. 19.6ಕ್ಕೇರಿದೆ.

ಗುರುವಾರವಷ್ಟೇ ಕರೊನಾ ತವರು ಚೀನಾವನ್ನೇ ಇಟಲಿ ಮೀರಿಸಿತ್ತು. ಇದೀಗ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಹೀಗೆ ಮುಂದುವರಿದರೆ ಇಂದು 5000 ಗಡಿ ದಾಟುವ ಸಾಧ್ಯತೆ ಇದೆ. ಸದ್ಯ ಇಟಲಿಯಲ್ಲಿ ಸೋಂಕಿತರ ಸಂಖ್ಯೆ 53,578ಕ್ಕೇ ಏರಿದ್ದು, ಶೇ. 13.9 ರಷ್ಟು ಸೋಂಕಿತರ ಪ್ರಮಾಣ ಏರಿಕೆಯಾಗಿದೆ.

ಇಟಲಿಯ ದಕ್ಷಿಣ ವಲಯ ಲೊಂಬಾರ್ಡಿ ಅತ್ಯಂತ್ಯ ಭೀಕರ ಸ್ಥಿತಿಯನ್ನು ಎದುರಿಸುತ್ತಿದೆ. ಇಟಲಿಯ ಒಟ್ಟಾರೆ ಸಾವಿನ ಸಂಖ್ಯೆಯಲ್ಲಿ ಬಹುತೇಕ ಲೊಂಬಾರ್ಡಿಯಲ್ಲಿ ಅಂದರೆ 3095 ಮಂದಿ ಮೃತರಾಗಿದ್ದಾರೆ. ಸೋಂಕಿತರ 25,515ಕ್ಕೇರಿದ್ದು, ಇಟಲಿಯ ಅರ್ಧದಷ್ಟು ಸೋಂಕಿತರ ಸಂಖ್ಯೆ ಈ ವಲಯದಲ್ಲಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವ ನಡುವೆ ಗುಣಮುಖರಾಗುತ್ತಿರುವ ಸಂಖ್ಯೆ ಹೆಚ್ಚಾಗಿದೆ. ನಿನ್ನೆ 5,129 ಮಂದಿ ಚೇತರಿಸಿಕೊಂಡಿದ್ದರು. ಇಂದು 6072 ಮಂದಿ ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ. (ಏಜೆನ್ಸೀಸ್​)