ರೊಮ್: ಚೀನಾದ ವುಹಾನ್ನಿಂದ ಜಗತ್ತಿನ 158 ದೇಶಗಳಿಗೆ ಪಸರಿಸಿರುವ ಮಾರಕ ಕರೊನಾವೈರಸ್ ದಿನೇ ದಿನೆ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದೆ. ಕರೊನಾ ತವರು ಚೀನಾಗಿಂತಲೂ ಇಟಲಿಯಲ್ಲಿ ಅದರ ಹಾವಳಿ ಹಿಡಿತಕ್ಕೂ ಸಿಗದ ರೀತಿ ಮುಂದುವರಿಯುತ್ತಿದೆ. ಚೀನಾಗಿಂತ ಸುಮಾರು 2 ಸಾವಿರದಷ್ಟು ಅಧಿಕ ಜನರು ಇಟಲಿಯಲ್ಲಿ ಸಾವನ್ನಪ್ಪಿದ್ದು, ಸೋಂಕಿತರ ಸಂಖ್ಯೆ ಕೂಡ ಚೀನಾವನ್ನು ಮೀರಿಸುವ ಲಕ್ಷಣ ಕಾಣುತ್ತಿದೆ. ಮುಂಜಾಗ್ರತೆ ತೆಗೆದುಕೊಳ್ಳದ್ದರಿಂದ ಈ ಪರಿಸ್ಥಿತಿ ಉಂಟಾಯಿತಾ? ಇದಕ್ಕೆ ಬೇರೆ ಕಾರಣ ಇದೆಯಾ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
ವಯೋವೃದ್ಧರ ಪ್ರಮಾಣ ಹೆಚ್ಚು: ಜಗತ್ತಿನಾದ್ಯಂತ ಕರೊನಾದಿಂದ ಮೃತಪಟ್ಟವರ ಸಂಖ್ಯೆಯಲ್ಲಿ ವಯಸ್ಸಾದವರ ಪ್ರಮಾಣವೇ ಹೆಚ್ಚು. ಇಟಲಿಯಲ್ಲೂ ಕೂಡ ಸಾವನ್ನಪ್ಪಿದವರಲ್ಲಿ ಶೇ.80ಕ್ಕಿಂತ ಹೆಚ್ಚು ಜನರು ವೃದ್ಧರು. ಇಟಲಿ ಆರೋಗ್ಯ ಸಚಿವರ ಸಲಹೆಗಾರ ಪೊ›ಫೆಸರ್ ವಾಲ್ಟರ್ ರಿಕಿಯಾರ್ಡಿ ನೀಡಿರುವ ಮಾಹಿತಿ ಪ್ರಕಾರ, ಇಟಲಿ ಜನರ ಸರಾಸರಿ ಜೀವಿತಾವಧಿ ಪ್ರಮಾಣ ಅಧಿಕವಾಗಿದ್ದು, ಯುರೋಪ್ನಲ್ಲಿ ಇಟಲಿಯೇ ಅತಿ ಹೆಚ್ಚು ವಯೋವೃದ್ಧರನ್ನು ಹೊಂದಿದೆ. ಇಲ್ಲಿ 60 ವರ್ಷ ಮೇಲ್ಪಟ್ಟವರ ಪ್ರಮಾಣ ಶೇ.23ಕ್ಕಿಂತ ಹೆಚ್ಚಿದೆ. ಜತೆಗೆ ವಿಶ್ವದಲ್ಲೇ ಇಟಲಿ ಹೆಚ್ಚು ವೃದ್ಧರನ್ನು ಹೊಂದಿರುವ ದೇಶಗಳ ಸಾಲಿನಲ್ಲಿ 2ನೇ ಸ್ಥಾನದಲ್ಲಿದೆ. ಕರೊನಾದಿಂದಾಗಿ ಚೀನಾದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಜನರ ಸರಾಸರಿ ವಯಸ್ಸು 46 ಆಗಿದ್ದರೆ ಇಟಲಿಯಲ್ಲಿ 67 ಇದೆ. ಇದರಿಂದಾಗಿ ಕರೊನಾಗೆ ಬಲಿಯಾದವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಸಾವಿಗೆ ಕರೊನಾ ಕಾರಣವಲ್ಲ!
ವೃದ್ಧರ ಸಾವಿನ ಪ್ರಮಾಣ ಹೆಚ್ಚಾಗಲು ಕರೊನಾ ಪ್ರಮುಖ ಕಾರಣವಲ್ಲ. ಆದರೆ ಮೃತರನ್ನು ಕರೊನಾ ಪ್ರಕರಣಗಳೆಂದು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಈ ಬಗ್ಗೆ ಮರುಮೌಲ್ಯಮಾಪನ ನಡೆಸಿದ್ದು, ಶೇ.12 ಜನರು ಕರೊನಾ ವೈರಸ್ನ ನೇರ ಕಾರಣದಿಂದ ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಉಳಿದ ಶೇ.88 ಜನರು ಈಗಾಗಲೇ ಒಂದೊಂದು ಖಾಯಿಲೆಗೆ ಒಳಗಾಗಿದ್ದು, ಇನ್ನೂ ಕೆಲವರು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ಕರೊನಾ ಜ್ವರಕ್ಕೆ ಒಳಗಾಗುತ್ತಿದ್ದಂತೆ ವೃದ್ಧರ ದೇಹದಲ್ಲಿ ಅದನ್ನು ಪ್ರತಿರೋಧಿಸುವ ಸಾಮರ್ಥ್ಯ ಕಡಿಮೆ ಇರುವುದರಿಂದ ಅವರೇ ಹೆಚ್ಚು ಸಾವಿಗೀಡಾಗಿದ್ದಾರೆ. ಉಸಿರಾಟದ ತೊಂದರೆ ಅನುಭವಿಸುತ್ತಿರುವವರೂ ಸಹ ಸಾವಿಗೀಡಾಗುವ ಪ್ರಮಾಣ ಹೆಚ್ಚಿದೆ.
ವೈದ್ಯಕೀಯ ವ್ಯವಸ್ಥೆ ದುರ್ಬಲ
ಸೋಂಕು ಪಸರಿಸಿದಂತೆ ರೋಗಿಗಳ ಪ್ರಮಾಣದಲ್ಲೂ ಭಾರಿ ಏರಿಕೆಯಾಯಿತು. ಆದರೆ ಇಟಲಿಯಲ್ಲಿ ಅಷ್ಟು ಪ್ರಮಾಣದ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಇಲ್ಲವಾದ್ದರಿಂದ ವೈದ್ಯರು ಹೆಣಗಾಡುತ್ತಿದ್ದಾರೆ. ಇದರ ಜತೆಗೆ ತಪಾಸಣೆಗೆ ಬೇಕಾದ ವೈದ್ಯಕೀಯ ಕಿಟ್ಗಳ ಕೊರತೆಯೂ ಪ್ರಮುಖ ಕಾರಣವಾಗಿದೆ. ಒಬ್ಬನೇ ವೈದ್ಯ ಹಲವು ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಇರುವುದರಿಂದ, ಈ ಒತ್ತಡದಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಸೋಂಕು ವೇಗವಾಗಿ ಪಸರಿಸಿದೆ.
ಮುಂಜಾಗ್ರತೆ ಕೊರತೆ
ಇಟಲಿಯಲ್ಲಿ ಕರೊನಾ ಸೋಂಕಿತರ ಪ್ರಮಾಣ ಆರಂಭ ಹಂತದಲ್ಲಿದ್ದಾಗ ಎಚ್ಚೆತ್ತು ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಸ್ಕ್ರೀನಿಂಗ್ ತಪಾಸಣೆಯನ್ನೂ ಸಹ ಗಂಭೀರವಾಗಿ ಪರಿಗಣಿಸಲಾಗಿರಲಿಲ್ಲ. ಜರ್ಮನಿ ಮತ್ತು ಅಮೆರಿಕಕ್ಕೂ 10 ದಿನಗಳ ಮುಂಚೆಯೇ ಇಟಲಿಯಲ್ಲಿ 12ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿದ್ದರೂ, ಇಟಲಿ ಎಚ್ಚೆತ್ತುಕೊಳ್ಳುವ ಮೊದಲೇ ಸೋಂಕಿತರ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು.
ಸಂಬಂಧಿಕರಿಂದಲೇ ಸೋಂಕು
ಇಟಲಿಯಲ್ಲಿ ಬಹುಪಾಲು ಯುವ ಜನರು ತಮ್ಮ ಪೋಷಕರು ಮತ್ತು ಅಜ್ಜ-ಅಜ್ಜಿ ಜತೆ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರಾದರೂ ಅವರೆಲ್ಲ ಉದ್ಯೋಗ ಹೊಂದಿರುವುದು ದೊಡ್ಡ ನಗರಗಳಲ್ಲಿ. ಹೀಗಾಗಿ ನಗರಗಳು ಹಾಗೂ ಹಳ್ಳಿಗಳ ಮಧ್ಯೆ ಜನರ ಪ್ರಯಾಣ ಹೆಚ್ಚಾಗುವುದರಿಂದ ಸೋಂಕು ಗ್ರಾಮೀಣ ಭಾಗದಲ್ಲಿರುವ ವೃದ್ಧರಿಗೆ ಸದ್ದಿಲ್ಲದಂತೆ ವೇಗವಾಗಿ ಪಸರಿಸಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಯುವ ಜನರಲ್ಲಿ ಸೋಂಕಿನ ಲಕ್ಷಣಗಳು ಬೇಗ ಕಂಡುಬರುವುದಿಲ್ಲವಾದ್ದರಿಂದ ಅವರಿಗೇ ಗೊತ್ತಿಲ್ಲದಂತೆ ಅವರು ತಮ್ಮ ಮನೆಯವರಿಗೆಲ್ಲ ಸೋಂಕು ಪಸರಿಸಿದ್ದಾರೆ.