ರೋಮ್: ಚೀನಾದಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್ ವಿಶ್ವದಾದ್ಯಂತ ಹರಡಿದೆ. ಚೀನಾದ ನಂತರ ಇಟಲಿಯಲ್ಲಿ ಅತಿ ಹೆಚ್ಚು ಜನರಲ್ಲಿ ಕರೊನಾ ವೈರಸ್ ಪತ್ತೆಯಾಗಿದ್ದು, ಅಲ್ಲಿನ ಜನರು ಭಯಭೀತರಾಗಿದ್ದಾರೆ. ಕರೊನಾ ವೈರಸ್ನಿಂದ ತಪ್ಪಿಸಿಕೊಳ್ಳುವುದಕ್ಕೆಂದು ವೃದ್ಧನೊಬ್ಬ ಒಂದು ಉಪಾಯ ಮಾಡಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಭಾರೀ ಮೆಚ್ಚುಗೆ ಪಡೆದುಕೊಳ್ಳಲಾರಂಭಿಸಿದೆ.
ರೋಮ್ನ ಮರ್ಕಾಟೋ ಟೆಸ್ಟಾಸಿಯೊ ನಗರದಲ್ಲಿ ವೃದ್ಧನೊಬ್ಬ ತನ್ನ ಸುತ್ತ ವೃತ್ತಾಕಾರದ ಆಕೃತಿಯೊಂದನ್ನು ಧರಿಸಿಕೊಂಡಿದ್ದು ತನ್ನ ಸುತ್ತ ಮುತ್ತ ಒಂದು ಮೀಟರ್ ಅಂತರದಲ್ಲಿ ಯಾರೂ ಸುಳಿದಾಡದಂತೆ ರಕ್ಷಿಸಿಕೊಂಡಿದ್ದಾನೆ. ಇದರಿಂದಾಗಿ ವೈರಸ್ ಸೋಂಕಿತರು ಸೇರಿದಂತೆ ಯಾರೊಬ್ಬರೂ ತನ್ನ ಹತ್ತಿರ ಸುಳಿಯುವುದಕ್ಕೆ ಆಗುವುದಿಲ್ಲವಾದ್ದರಿಂದ ತಾನು ಕರೊನಾ ಇಂದ ಬಚಾವಾಗುತ್ತೇನೆ ಎನ್ನುವುದು ಆತನ ಉಪಾಯ.
ವೃದ್ಧನ ಈ ಉಪಾಯನ್ನು ವಿಡಿಯೋ ಮಾಡಲಾಗಿದ್ದು ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಳಿ ವಯಸ್ಸಿನಲ್ಲಿ ಆತ ತೋರಿರುವ ಚಾಣಾಕ್ಷತನದ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ.
ಇಟಲಿಯಲ್ಲಿ ಈವೆರಗೆ 15,113 ಜನರಲ್ಲಿ ಕರೊನಾ ವೈರಸ್ ಇರುವುದು ಪತ್ತೆಯಾಗಿದ್ದು, 1,016 ಜನರು ವೈರಸ್ನಿಂದಾಗಿ ಮೃತರಾಗಿರುವುದು ವರದಿಯಾಗಿದೆ.(ಏಜೆನ್ಸೀಸ್)