ಶಿವಮೊಗ್ಗ: ಭಗವಂತನಿಗೆ ರೂಪ ಕೊಟ್ಟಿದ್ದೇ ವಿಶ್ವಕರ್ಮ ಸಮಾಜದ ಶಿಲ್ಪಿಗಳು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು.
ನಗರದಲ್ಲಿ ಶಿವಮೊಗ್ಗ ವಿಶ್ವಕರ್ಮ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದು ಸಹ ವಿಶ್ವಕರ್ಮ ಸಮಾಜದ ಅರುಣ್ ಯೋಗಿರಾಜ್. ಅವರು ಕನ್ನಡಿಗರಾಗಿರುವುದು ಹೆಮ್ಮೆಯ ವಿಚಾರ ಎಂದರು.
ಹಳೆಬೀಡು, ಬೇಲೂರು, ಹಂಪಿ, ಐಹೊಳೆ, ಪಟ್ಟದಕಲ್ಲು, ಬಾದಾಮಿ ಇನ್ನಿತರೆಡೆ ಮಾತ್ರವಲ್ಲದೆ ದೇಶದ ಎಲ್ಲೆಡೆ ಕೆತ್ತಿರುವ ಶಿಲಾಕೆತ್ತನೆಗಳು ವಿಶ್ವಕರ್ಮರಿಂದ ಮೂಡಿದ ಸುಂದರ ಕಲಾಕೃತಿಗಳಾಗಿ ವಿಶ್ವವಿಖ್ಯಾತಿ ಗಳಿಸಿರುವುದು ದೇಶಕ್ಕೆ ಹೆಮ್ಮೆ ತರುವ ಸಂಗತಿ ಎಂದರು.
ಶಿವಮೊಗ್ಗದ ವಾಜಪೇಯಿ ಬಡಾವಣೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿಶ್ವಕರ್ಮ ಕರಕುಶಲ ಕೌಶಲ ಕೇಂದ್ರಕ್ಕೆ 20 ಲಕ್ಷ ರೂ. ಅನುದಾನ ಒದಗಿಸುವ ಭರವಸೆ ನೀಡಿದರು.
ಪ್ರತಿಭಾ ಪುರಸ್ಕಾರ ವಿತರಿಸಿ ಮಾತನಾಡಿದ ಎಂಎಲ್‌ಸಿ ಡಿ.ಎಸ್.ಅರುಣ್, ವಿಶ್ವಕರ್ಮರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಪಾರ ಅಭಿಮಾನ ಹೊಂದಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಶಲಕರ್ಮಿಗಳ ಅಭಿವೃದ್ಧಿಗಾಗಿ ವಿಶ್ವಕರ್ಮ ಯೋಜನೆ ಜಾರಿಗೆ ತರುವ ಮೂಲಕ ಅವರ ಉನ್ನತಿಗಾಗಿ ಶ್ರಮಿಸುತ್ತಿರುವ ಪ್ರಧಾನಿ ಎಂಬ ಹಿರಿಮೆ ಹೊಂದಿದ್ದಾರೆ ಎಂದರು.
ವಿಶ್ವಕರ್ಮ ಕರಕುಶಲ ಕೌಶಲ ಕೇಂದ್ರಕ್ಕೆ ಆರಂಭಿಕ ಹಂತದಲ್ಲಿ 5 ಲಕ್ಷ ರೂ. ಅನುದಾನ ಒದಗಿಸುವ ಆಶ್ವಾಸನೆ ನೀಡಿದರು.
ಸಹಕಾರಿ ಅಧ್ಯಕ್ಷ ಎಸ್.ಚಂದ್ರಕಾಂತ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಿವಕುಮಾರಾಚಾರ್, ನಿರ್ದೇಶಕರಾದ ಕೆ.ಈಶ್ವರಾಚಾರ್, ಪಿ.ಶ್ರೀನಿವಾಸ್, ಬಿ.ಸುರೇಶ್, ಶಶಿ ಎಸ್. ಮಂಗಳಾಗಾರ್, ಸುರೇಶ್‌ಬಾಬು, ಅನಿಲ್‌ಕುಮಾರ್, ಎಚ್.ಎಸ್.ನಾಗರಾಜ್, ಗುರುದೀಪ್, ಲೋಲಾಕ್ಷಿ ಜಕಣಾಚಾರ್, ಇಂದಿರಾ, ಸಿಇಒ ರೂಪಾ ಉಪಸ್ಥಿತರಿದ್ದರು.