ನ್ಯೂಸ್

'ನಾನೀಗ ಹೊರಡುವ ಸಮಯ ಬಂದಿದೆ' ಎಂದು ಹೇಳಿದ ಜ್ಯೋತಿರಾದಿತ್ಯ ಸಿಂಧ್ಯಾ ತಮ್ಮ ರಾಜೀನಾಮೆ ಪತ್ರದಲ್ಲಿ ಬಿಚ್ಚಿಟ್ಟ ಸತ್ಯ ಇದು...

ನವದೆಹಲಿ: ರಾಹುಲ್ ಗಾಂಧಿಯವರ ಆಪ್ತರಲ್ಲಿ ಓರ್ವರಾಗಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಬಿಜೆಪಿ ಸೇರುವ ನಿರ್ಧಾರ ಮಧ್ಯಪ್ರದೇಶದ ಕಮಲನಾಥ್​ ಸರ್ಕಾರಕ್ಕೆ ಕುತ್ತು ತಂದಿದೆ.

ಸುಮಾರು ಒಂದು ವಾರದಿಂದಲೂ ಮಧ್ಯಪ್ರದೇಶ ರಾಜಕಾರಣದಲ್ಲಿ ಹೈಡ್ರಾಮಾ ನಡೆಯುತ್ತಲೇ ಇದ್ದು, ಇಂದು ಜ್ಯೋತಿರಾದಿತ್ಯ ಸಿಂಧ್ಯಾ ಅವರು ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ಪಕ್ಷದಿಂದ ಉಚ್ಚಾಟಿತರಾಗಿದ್ದಾರೆ.

ಅಷ್ಟಕ್ಕೂ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಹೀಗೆ ಪಕ್ಷ ತೊರೆಯುವ ನಿರ್ಧಾರ ಮಾಡಲು ಕಾರಣವೇನು ಎಂಬುದು ದೊಡ್ಡ ಕುತೂಹಲ. ಸೋನಿಯಾ ಗಾಂಧಿಯವರಿಗೆ ರವಾನೆ ಮಾಡಿದ ರಾಜೀನಾಮೆ ಪತ್ರದಲ್ಲಿ ಸಿಂಧ್ಯಾ ಕೆಲವು ಕಾರಣಗಳನ್ನು ವಿವರಿಸಿದ್ದು, ಅದು ಹೀಗಿದೆ...

ಕಳೆದ 18 ವರ್ಷಗಳಿಂದ ನಾನು ಕಾಂಗ್ರೆಸ್​ನಲ್ಲಿದ್ದೆ. ನನಗೀಗ ಇಲ್ಲಿಂದ ಹೊರಡುವ ಸಮಯ ಬಂದಿದೆ. ಕಳೆದ ವರ್ಷ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದಂತೆ ಇದೀಗ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೇ ರಾಜೀನಾಮ ಸಲ್ಲಿಸುತ್ತಿದ್ದೇನೆ.

ನಾನು ನನ್ನ ದೇಶ ಮತ್ತು ರಾಜ್ಯದ ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಯಾವ ಉದ್ದೇಶ, ಗುರಿಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸೇರಿದ್ದೆನೋ ಅದೆಲ್ಲವೂ ಈಗಲೂ ಹಾಗೇ ಉಳಿದುಕೊಂಡಿದೆ. ಈ ಪಕ್ಷದಲ್ಲಿದ್ದರೆ ನಾನಂದುಕೊಂಡಿದ್ದನ್ನು ಮಾಡಲು ಸಾಧ್ಯವೇ ಇಲ್ಲ, ನನ್ನ ಗುರಿ ಮುಟ್ಟಲು ಆಗುವುದಿಲ್ಲ ಎಂಬ ಸತ್ಯ ಅರ್ಥವಾಗಿದೆ. ನನ್ನ ಬೆಂಬಲಿಗರು, ಕಾರ್ಯಕರ್ತರು, ಮತ ಹಾಕಿ ಗೆಲ್ಲಿಸಿದ ಜನರ ಆಶೋತ್ತರಗಳನ್ನು ಈಡೇರಿಸಬೇಕೆಂದರೆ ನನಗೆ ಒಂದು ಹೊಸ ಪ್ರಾರಂಭ ಬೇಕು ಎಂದು ನಿರ್ಧರಿಸಿದ್ದೇನೆ.

ಇನ್ನುಳಿದಂತೆ ಇಷ್ಟುದಿನ ನನಗೆ ಅವಕಾಶ ನೀಡಿದ ನಿಮಗೆ ಹಾಗೂ ಕಾಂಗ್ರೆಸ್​ನ ಎಲ್ಲ ಸಹೋದ್ಯೋಗಿಗಳಿಗೂ ಧನ್ಯವಾದಗಳು ಎಂದು ಸೋನಿಯಾ ಗಾಂಧಿಯವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಸಿಂಧ್ಯಾ ತಿಳಿಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ ಜ್ಯೋತಿರಾದಿತ್ಯ ಸಿಂಧ್ಯಾ ತಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇವರು ಪಶ್ಚಿಮ ಉತ್ತರ ಪ್ರದೇಶ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದರು. (ಏಜೆನ್ಸೀಸ್)