ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನಿರ್ಧಾರಗಳ ವಿರುದ್ಧ ವಿಧಾನಸಭೆ ಮಂಡಲದ ಅಧಿವೇಶನದಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟ ಮಾಡಿದ್ದೆವು. ಆದರೆ ಸದನದ ಹೊರಗಿನ ಹೋರಾಟಕ್ಕೆ ಜೆಡಿಎಸ್ ಪಕ್ಷವನ್ನು ಬಿಜೆಪಿಯವರು ಕಡೆಗಣಿಸಿದ್ದು ಸರಿಯಲ್ಲವೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೆಳವಣಿಗೆ ಬಗ್ಗೆ ಪಕ್ಷದ ರಾಷ್ಟ್ರೀಯ, ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದು, ಆದಷ್ಟು ಬೇಗ ಸಮನ್ವಯದ ಕೊರತೆಯನ್ನು ಸರಿಪಡಿಸಲು ಕೋರಿದ್ದೇವೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಒಂದಾಗಿ ಹೋರಾಟ ಮಾಡಿದರೆ ಬಲ ಹೆಚ್ಚಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿದೆ. ಪ್ರತ್ಯೇಕ ಹೋರಾಟದಿಂದ ಮೈತ್ರಿ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಹಾಗೆಯೇ ಒಡಕಿನ ಲಾಭ ಕಾಂಗ್ರೆಸ್ ಪಕ್ಷ ಪಡೆದುಕೊಳ್ಳಲಿದೆ ಎಂಬುದು ನಮ್ಮ ಕಳವಳದ ಮೂಲ ಕಾರಣ ಎಂದರು.
ಬಿಜೆಪಿ ರಾಜ್ಯ ನಾಯಕರ ಮನಸ್ಥಿತಿ ಏನಿದೆಯೋ ಗೊತ್ತಿಲ್ಲ. ಆದರೆ ಉಭಯ ಪಕ್ಷಗಳ ನಡುವೆ ಸಮನ್ವಯಕ್ಕೆ ಪ್ರತಿಬಾರಿ ವರಿಷ್ಠರ ಮಧ್ಯೆ ಪ್ರವೇಶ ಸರಿಕಾಣದು. ರಾಜ್ಯ, ಜಿಲ್ಲಾಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನು ಮಾಡಿದರೆ ಒಂದಾಗಿ ಹೋರಾಟ, ಕಾರ್ಯತಂತ್ರ ರೂಪಿಸುವುದಕ್ಕೆ ಅನುಕೂಲವಾಗುತ್ತದೆ ಎಂದು ಸಿ.ಬಿ.ಸುರೇಶ್ ಬಾಬು ಹೇಳಿದರು.