ಚಿಕ್ಕಮಗಳೂರಿನಲ್ಲಿ ಏರ್ಪಡಿಸಿದ್ದ ಸ್ವ ಸಹಾಯ ಸಂಘಗಳ ಸಮಾವೇಶದಲ್ಲಿ ಮಹಿಳಾ ಸಂಘಗಳ ಸದಸ್ಯರಿಗೆ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಹಾಯಧನದ ಚೆಕ್ ವಿತರಿಸಿದರು. ಎಚ್.ಡಿ.ತಮ್ಮಯ್ಯ, ಬೋಜೇಗೌಡ, ಎಂ.ಸಿ.ಶಿವಾನಂದಸ್ವಾಮಿ, ರವೀಶ್ ಬಸಪ್ಪ, ಓಂಕಾರಸ್ವಾಮಿ ಇತರರಿದ್ದರು. 
ನ್ಯೂಸ್

ಕಲ್ಯಾಣ ರಾಜ್ಯದಲ್ಲಿ ಸರ್ಕಾರ ಜಾತಿ ಆಧಾರದ ಯೋಜನೆ ರೂಪಿಸುವುದು ಸರಿಯಲ್ಲ

ಚಿಕ್ಕಮಗಳೂರು: ಕಲ್ಯಾಣ ರಾಜ್ಯದಲ್ಲಿ ಜಾತಿ ಆಧಾರದ ಮೇಲೆ ಸರ್ಕಾರ ಯೋಜನೆ ಜಾರಿ ಮಾಡುವುದನ್ನು ಬಿಡಬೇಕು. ಎಲ್ಲ ರೈತರಿಗೂ ಸಮಾನವಾಗಿ ಯೋಜನೆಯ ಪ್ರಯೋಜನ ಸಿಗುವಂತಾಗಬೇಕು ಎಂದು ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀಗುರು ಸಿದ್ದರಾಮೇಶ್ವರ ವಿದ್ಯಾಸಂಸ್ಥೆ, ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಸ್ವಸಹಾಯ ಸಂಘಗಳ ಸಮಾವೇಶ ಹಾಗೂ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಒಂದು ಎಕರೆ, 30 ಎಕರೆ ಜಮೀನು ಹೊಂದಿರುವ ರೈತರೂ ಇದ್ದಾರೆ. ಅವರಿಗೆ ಸಬ್ಸಿಡಿ ನೀಡುವ ವಿಚಾರದಲ್ಲಿ ತಾರತಮ್ಯ, ಜಾತಿ ಆಧಾರದ ಮೇಲೆ ನಡೆಯುತ್ತಿದೆ. ಇದನ್ನು ತಡೆಯಲು ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಬೇಕಾಗಿದೆ ಎಂದರು.
ಒಂದು ಎಕರೆ ಜಮೀನು ಹೊಂದಿರುವವರಿಗೆ ಶೇ.90ರಷ್ಟು ಸಬ್ಸಿಡಿ, 30 ಎಕರೆ ಇರುವ ರೈತರಿಗೆ ಶೇ.50ರಷ್ಟು ಸಬ್ಸಿಡಿ ನೀಡುತ್ತಾರೆ. ಜನಪ್ರತಿನಿಧಿಗಳು ಈ ಬಗ್ಗೆ ಸರ್ಕಾರದ ಜತೆ ಚರ್ಚಿಸಬೇಕು. ಜಾತಿ ಆಧಾರದ ಮೇಲೆ ಯೋಜನೆ ಘೋಷಣೆ ಮಾಡುವುದನ್ನು ಕೈಬಿಡಲು ಒತ್ತಾಯ ಮಾಡಬೇಕು ಎಂದು ಹೇಳಿದರು.
ದೇಶ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಮಾಡಲು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳುಹಿಸಲಾಗಿದೆ. ಆದರೆ ಅವರು ಅಲ್ಲಿ ಗದ್ದಲ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ರಾಜಕಾರಣಿಗಳು ವಿಧಾನಸೌಧದಲ್ಲಿ ಕೈಕೈ ಮಿಲಾಯಿಸುವ ರೀತಿ ಮಾತಿನ ಚಕಮಕಿ ಹಂತಕ್ಕೆ ತಲುಪುತ್ತಾರೆ. ನಂತರ ಜತೆಯಲ್ಲಿ ಕೂತು ಊಟ ಮಾಡುತ್ತಾರೆ ಎಂದು ಟೀಕಿಸಿದರು.
ಕಾರ್ಯಕ್ರಮಕ್ಕೆ ಮಾಜಿ ಶಾಸಕ ಸಿ.ಟಿ.ರವಿ ಅವರನ್ನೂ ಆಹ್ವಾನಿಸಲಾಗಿತ್ತು. ಆದರೆ ಅವರು ಬರಲಿಲ್ಲ, ಸಮಯಕ್ಕೆ ತಕ್ಕಂತೆ ಮಾತು ಆಡಿರುತ್ತಾರೆ. ಅವನ್ನೆಲ್ಲ ಮರೆತು ಎಲ್ಲರೂ ಒಂದಾಗಬೇಕು. ಸೌಹಾರ್ದ ಉಂಟು ಮಾಡಲು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹುಟ್ಟು ಹಾಕಲಾಗಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಆರ್ಥಿಕವಾಗಿ ಸಬಲವಾದರೆ ಇಡೀ ಕುಟುಂಬ ನಿರ್ವಹಣೆ ಮಾಡುತ್ತಾರೆ. ಅವರಿಗೆ ಶಕ್ತಿತುಂಬವ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಅಷ್ಟೇ ಪ್ರಾಮಾಣಿಕವಾಗಿ ಮರುಪಾವತಿ ಮಾಡಬೇಕು ಎಂದು ಸಲಹೆ ನೀಡಿದರು.
ಸ್ವ ಸಹಾಯ ಸಂಘದ ಸದಸ್ಯರಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಓಂಕಾರಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಬಾಲಚಂದ್ರ, ಪ್ರಮುಖರಾದ ಎಂ.ಸಿ.ಶಿವಾನಂದ ಸ್ವಾಮಿ, ರವೀಶ್ ಬಸಪ್ಪ, ಚಂದ್ರಶೇಖರ್, ಶಶಿ ಗಂಧರ್ವ, ಚಂದ್ರಪ್ಪ, ಲೋಹಿತ್‌ಕುಮಾರ್, ಚನ್ನಪ್ಪ ಕತ್ತಿಗೆ ಇತರರಿದ್ದರು.