ಬೆಂಗಳೂರು: ದೇವಾಲಯಗಳ ಹಣವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಚರ್ಚ್, ಮಸೀದಿಗೆ ನೀಡುತ್ತಿದೆ ಎನ್ನುವ ಆರೋಪವನ್ನು ಬಿಜೆಪಿ ಮಾಡುತ್ತಿದೆ. ಈ ಬಗ್ಗೆ ದೇವಾಲಯಗಳ ಅರ್ಚಕರ ಸಂಘ ಸ್ಪಷ್ಟನೆ ನೀಡಿದೆ.
ರಾಜ್ಯದ ದೇವಾಲಯಗಳ ಹುಂಡಿ ಹಣವನ್ನು ರಾಜ್ಯ ಸರ್ಕಾರ ಒಳ್ಳೆಯ ಕಾರ್ಯಗಳಿಗೆ ಬಳಸುತ್ತಿದೆಯೇ ಹೊರತು ಯಾವುದೇ ರೀತಿಯಲ್ಲೂ ದುರುಪಯೋಗವಾಗುತ್ತಿಲ್ಲ. ಬಿಜೆಪಿ ನಾಯಕರು ಈ ವಿಚಾರದಲ್ಲಿ ಸುಳ್ಳು ಆರೋಪ, ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ರಾಜ್ಯ ಅರ್ಚಕರ ಸಂಘ ಹೇಳಿದೆ.
ಅಖಿಲ ಕರ್ನಾಟಕ ಧಾರ್ಮಿಕ ದೇವಾಲಯಗಳ ಅರ್ಚಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎಸ್. ದೀಕ್ಷಿತ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಿಧಾನ ಪರಿಷತ್ತಿನಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ವಿಧೇಯಕವನ್ನು ಅಂಗೀಕಾರಕ್ಕೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅರ್ಚಕರ ಸಂಘದವರು ವಿಧೇಯಕ ಪರವಾಗಿ ಬೆಂಬಲಿಸಿದರು.
ಅಪಪ್ರಚಾರ ಮಾಡದಂತೆ ಮನವಿ ಮಾಡುತ್ತೇವೆ:
ರಾಜ್ಯದ ಎ ದರ್ಜೆಯ ದೇವಸ್ಥಾನಗಳ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಈ ದೇವಸ್ಥಾನಗಳಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಹಿಂದೂ ದೇವಾಲಯಗಳ ಹುಂಡಿ ಹಣ ಮಸೀದಿ ಮತ್ತು ಚರ್ಚ್‌ಗಳಿಗೆ ಹೋಗುತ್ತಿದೆ ಎಂಬ ಆರೋಪವನ್ನು ಅಲ್ಲಗಳೆಯುತ್ತೇವೆ. ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಬಿಜೆಪಿಯವರ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವು. ರಾಜ್ಯದ ಎ, ಬಿ, ಸಿ ದರ್ಜೆಯ ದೇವಾಲಯಗಳ ಹುಂಡಿ ಹಣ ಯಾವುದೇ ಕಾರಣಕ್ಕೂ ದುರುಪಯೋಗ ಆಗುತ್ತಿಲ್ಲ. ದೇವಾಲಯಗಳ ಹಣವನ್ನು ರಾಜ್ಯ ಸರ್ಕಾರ ಒಳ್ಳೆಯ ಕೆಲಸಕ್ಕೆ ಉಪಯೋಗಿಸುತ್ತದೆ. ದೇವಾಲಯಗಳಲ್ಲಿ ನಿತ್ಯ ಕೋಟ್ಯಂತರ ಹಣ ಸಂಗ್ರಹ ಆಗುತ್ತಿದ್ದು, ಇದನ್ನು ಬಿಜೆಪಿ ಸಹಿಸುತ್ತಿಲ್ಲ ಎನಿಸುತ್ತಿದೆ. ಈ ಬಗ್ಗೆ ಅಪಪ್ರಚಾರ ಮಾಡದಂತೆ ಬಿಜೆಪಿಯ ನಾಯಕರಿಗೂ ಮನವಿ ಮಾಡುತ್ತೇವೆ. ಈ ಹಿಂದಿನ ಸರ್ಕಾರ ನಮಗೆ ತಸ್ತಿಕ್ ಕೊಟ್ಟಿರಲಿಲ್ಲ. ಆದರೆ ಹೊಸ ಸರ್ಕಾರ ಬಂದ ತಕ್ಷಣ ಸಚಿವ ರಾಮಲಿಂಗಾರೆಡ್ಡಿ ಅವರು ನಮ್ಮ ಬೇಡಿಕೆ ಈಡೇರಿಸಿದ್ದಾರೆ. ಈ ವಿಚಾರದಲ್ಲಿ ಯಾರ ವಿರುದ್ಧವೂ ಪ್ರತಿಭಟನೆ ಮಾಡುವುದಿಲ್ಲ. ಆದರೆ, ಪ್ರತಿಯೊಬ್ಬ ಬಿಜೆಪಿ ನಾಯಕರ ಮನೆಗೂ ಹೋಗಿ ವಸ್ತು ಸ್ಥಿತಿ ತಿಳಿಸಿ ನಿಮ್ಮ ವಿರೋಧ ಸರಿಯಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತೇವೆ. ಬಿಜೆಪಿಯವರೇ ದಯವಿಟ್ಟು ಅಪಪ್ರಚಾರ ಮಾಡುವುದನ್ನು ಬಿಡಿ ಎಂದು ಮನವಿ ಮಾಡಿದರು.