ನ್ಯೂಸ್

ವಚನ ಸಾಹಿತ್ಯದ ಮೌಲ್ಯಗಳ ರಕ್ಷಣೆ ಅಗತ್ಯ

ಮೈಸೂರು: ವಿಶ್ವದ ಸಾಹಿತ್ಯ ಮತ್ತು ಧರ್ಮದಲ್ಲಿ ಕಾಣದ ವೈಜ್ಞಾನಿಕ, ಧಾರ್ಮಿಕ, ಸಾಮಾಜಿಕ ಮೌಲ್ಯಗಳು ವಚನ ಸಾಹಿತ್ಯದಲ್ಲಿವೆ. ನಾವು ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಅಗತ್ಯವಿದೆ ಎಂದು ನೆಹರು ಯುವಕ ಕೇಂದ್ರದ ನಿವೃತ್ತ ಉಪ ನಿರ್ದೇಶಕ ಎಸ್. ಸಿದ್ದರಾಮಪ್ಪ ತಿಳಿಸಿದರು.
ನಗರದ ಜೆ.ಪಿ.ನಗರದ ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ ಹಾಗೂ ಕದಳಿ ವೇದಿಕೆಯಿಂದ ಶನಿವಾರ ಏರ್ಪಡಿಸಿದ್ದ ಫ.ಗು.ಹಳಕಟ್ಟಿ ಜಯಂತಿ ಮತ್ತು ವಚನ ಸಾಹಿತ್ಯ ಸಂರಕ್ಷಣಾ ದಿನ ಉದ್ಘಾಟಿಸಿ ಮಾತನಾಡಿ, ಅವು ಇಲ್ಲದೇ ಹೋದರೆ ಸಮಾಜ ಅತ್ಯಂತ ಹೀನ ಸ್ಥಿತಿಗೆ ಹೋಗಬಲ್ಲದು. ಆದ್ದರಿಂದ ಇಂದಿನ ಯುವ ಪೀಳಿಗೆ ಅವಶ್ಯವಾಗಿ ವಚನವನ್ನು ಅಧ್ಯಯನ ಮಾಡುವುದರ ಜತೆಗೆ ಆಚರಣೆಗೆ ತರುವುದು ಅಗತ್ಯ ಎಂದು ಹೇಳಿದರು.
ಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಮತ್ತು ಕನ್ನಡ ಭಾಷೆ ಉಳಿಸಿಕೊಟ್ಟವರು. ಅವರು ಅಂದು ತಮ್ಮ ಸಂಪೂರ್ಣ ಜೀವಿತಾವಧಿಯನ್ನು ವಚನಗಳನ್ನು ಉಳಿಸುವುದರಲ್ಲಿ ತೊಡಗಿಸಿಕೊಳ್ಳದಿದ್ದರೆ ನಮಗೆ ವಿಶ್ವಮಾನ್ಯತೆ ಪಡೆದ ವಚನಗಳು ದೊರೆಯುತ್ತಿರಲಿಲ್ಲ ಎಂದರು.
ಹಳಕಟ್ಟಿ ಅವರು ಬಹುಮುಖ ಪ್ರತಿಭೆ ಉಳ್ಳವರು, ಮಹಾಸಾಧಕರು. ತಮ್ಮ ಸಂಪೂರ್ಣ ಆಸ್ತಿಯನ್ನು ಮಾರಿ ವಚನ ಸಾಹಿತ್ಯವನ್ನು ಮುದ್ರಿಸಿಕೊಟ್ಟರು. ಶಿಕ್ಷಣ ಸಂಸ್ಥೆಗಳನ್ನು ಸಹಕಾರ ಸಂಘಗಳನ್ನು ಕಟ್ಟಿದರು, ಮುದ್ರಣ ಘಟಕ ಸ್ಥಾಪಿಸಿದರು. ಇಂತಹ ಸಾತ್ವಿಕ ದಾರ್ಶನಿಕ ವಚನ ಪಿತಾಮಹ ಎನಿಸಿಕೊಂಡಿರುವ ಹಳಕಟ್ಟಿ ಅವರನ್ನು ನೆನೆಯುವುದು ನಮ್ಮ ಬದುಕಿಗೆ ಒಂದು ಬೆಳಕು ಎಂದು ಹೇಳಿದರು.
ಶಸಾಪ ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಮಾತನಾಡಿದರು. ವಚನ ಬರಹ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನಿರಂಜನ್ ವಿತರಿಸಿದರು.
ದತ್ತಿ ದಾಸೋಹಿಗಳಾದ ಮಂಗಳಾಮುದ್ದುಮಾದಪ್ಪ ,ಡಾ.ನಿರ್ಮಲಾ, ಕದಳಿ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಮಮತಾ, ಡಾ.ಎಚ್. ಮುದ್ದುಮಲ್ಲೇಶ್, ಮಂಜುಳಾ, ಲತಾ, ಸದಾಶಿವ, ಲೋಕೇಶಪ್ಪ, ನಂದೀಶ್, ಚಿನ್ನಸ್ವಾಮಿ, ಮೀನಾ, ವಿಜಯ, ಮಲ್ಲಿಕಾ, ಲಲಿತಾ ಪಾಟೀಲ್, ಚನ್ನಬಸಪ್ಪ ಚಿಕ್ಕಮಠ ಮತ್ತಿತರರು ಹಾಜರಿದ್ದರು.