ಶಿವಮೊಗ್ಗ: ಕ್ರಿಯಾಶೀಲ ವ್ಯಕ್ತಿಯಾಗಿ ಶಿಕ್ಷಣ ಸಂಸ್ಥೆಯನ್ನು ಸದಾ ಪ್ರೀತಿಸುವ ಗುಣ ಹೊಂದಿರುವುದು ಅವಶ್ಯಕ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತ್‌ಮೂರ್ತಿ ಹೇಳಿದರು.
ಗುರುವಾರ ಸೇವೆಯಿಂದ ನಿವೃತ್ತರಾದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಸೈಯದ್ ಸನಾವುಲ್ಲಾ ಅವರನ್ನು ಸನ್ಮಾನಿಸಿ ಮಾತನಾಡಿ, ಇವರೊಬ್ಬ ಒಳ್ಳೆಯ ಆಡಳಿತಗಾರ. ಸರಳ ವ್ಯಕ್ತಿತ್ವದ ಮನುಷ್ಯ.ಅವರ ಕಾರ್ಯಗಳು ಸದಾ ನೆನಪಿನಲ್ಲಿರುತ್ತವೆ ಎಂದರು.
ಅಧ್ಯಾಪಕರ ಸಂಘದ ಅಧ್ಯಕ್ಷ ಎಂ.ಎಚ್.ಪ್ರಹ್ಲಾದಪ್ಪ ಮಾತನಾಡಿ, ನಿವೃತ್ತಿ ಎನ್ನುವುದು ಎಲ್ಲರಿಗೂ ಅನಿವಾರ್ಯ. ನಿವೃತ್ತಿ ನಂತರವೂ ಕ್ರಿಯಾಶೀಲರಾಗಿ ಇರುವುದೇ ಬದುಕು. ವಿಶಾಲ ದೃಷ್ಟಿಕೋನ, ಆರೋಗ್ಯ ರಕ್ಷಣೆ, ಭಾವಾನಾತ್ಮಕ ಅನುಭವಗಳ ಜತೆಗೆ ಜೀವಿಸುವುದು ನಿವೃತ್ತಿ ಜೀವನದ ಭಾಗ ಎಂದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್ ಮಾತನಾಡಿ, ಸೈಯದ್ ಸನಾವುಲ್ಲಾ ಪ್ರಾಚಾರ್ಯರಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ವಿಚಾರ ಸಂಕಿರಣ ಏರ್ಪಡಿಸಿದ್ದಾರೆ. ಆ ಮೂಲಕ ಜ್ಞಾನದ ಅರಿವನ್ನು ವಿಸ್ತರಿಸಿದ್ದಾರೆ ಎಂದು ತಿಳಿಸಿದರು.
ಡಾ. ಸೈಯದ್ ಸನಾವುಲ್ಲಾ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರಾಧ್ಯಾಪಕರಾದ ಡಾ. ಪ್ರಸನ್ನಕುಮಾರ್, ಕೆ.ಕುಂದನ್ ಬಸವರಾಜ್, ಪ್ರಭಾರ ಪ್ರಾಚಾರ್ಯ ಡಾ. ಸಿರಾಜ್ ಅಹ್ಮದ್, ಡಾ. ಕೆ.ಚಂದ್ರಪ್ಪ, ರಮೇಶ್, ಮಹಾದೇವಸ್ವಾಮಿ, ಶಂಭುಲಿಂಗಮೂರ್ತಿ, ಕೃಪಾಲಿನಿ, ಡಾ. ಹಾಲಮ್ಮ ಮತ್ತಿತರರಿದ್ದರು.