ನ್ಯೂಸ್

ವಿದ್ಯಾರ್ಥಿಗಳು ತಮ್ಮದೇ ಐಡೆಂಟಿಟಿ ಸೃಷ್ಟಿಸಿ ಎಂದು ಹೇಳಿದ್ದು ಇದೇ ಕಾರಣಕ್ಕೆ: ಪ್ರೊ. ಜಗದೀಶ್‌ಕುಮಾರ್

ಬೆಂಗಳೂರು ದೇವರು ಪ್ರತಿಯೊಬ್ಬರಿಗೂ ಪ್ರತಿಭೆ ನೀಡಿದ್ದು, ಬೇರೆಯವರನ್ನು ಅನುಕರಿಸುವ ಬದಲಾಗಿ ತಮ್ಮದೇ ರೀತಿಯಲ್ಲಿ ಆಲೋಚನೆ ಮಾಡುವ ಮೂಲಕ ಹೊಸತನ ರೂಢಿಸಿಕೊಳ್ಳುವಂತೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ಅಧ್ಯಕ್ಷ ಪ್ರೊ.ಮಾಮಿದಾಳ ಜಗದೀಶ್ ಕುಮಾರ್ ಹೇಳಿದರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ನೃಪತುಂಗ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, 2050ರ ವೇಳೆಗೆ ಜಾಗತಿಕವಾಗಿ 9.7 ಬಿಲಿಯನ್ ಜನಸಂಖ್ಯೆಯಾಗಲಿದ್ದು, ಲಭ್ಯವಿರುವ ಸಂಪನ್ಮೂಲದಲ್ಲಿಯೇ ಭವಿಷ್ಯದ ಸವಾಲುಗಳನ್ನು ಎದುರಿಸಬೇಕಿದೆ. ಈ ಸವಾಲುಗಳಿಗೆ ಪರಿಹಾರ ಕಲ್ಪಿಸುವತ್ತ ಯುನ ಜನರು ಚಿಂತನೆ ನಡೆಸಬೇಕಿದೆ ಎಂದರು.

ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು ಮೊದಲಿಗೆ ರೇಡಿಯೋ ಕುರಿತು ಸಂಶೋಧನೆ ನಡೆಸಿದರು. ವೃತ್ತಿಯಿಂದ ನಿವೃತ್ತಿ ಹೊಂದಿದ ಬಳಿಕ ‘ಸಸ್ಯಕ್ಕೂ ಜೀವವಿದೆ’ ಎಂಬುದನ್ನು ಕಂಡುಹಿಡಿದರು. ಈ ರೀತಿ ಕಲಿಕೆ ಎಂಬುದು ನಿರಂತರ. ಆದ್ದರಿಂದ ಕಲಿಕೆಯನ್ನು ಮರೆಯಬೇಡಿ ಎಂದು ಎಂದು ಹೇಳಿದರು.

ಮೂವರಿಗೆ ಗೌರವ ಡಾಕ್ಟರೇಟ್:

ಸಮಾರಂಭದಲ್ಲಿ ಇಸ್ರೋ ವಿಜ್ಞಾನಿ ನಂದಿನಿ ಹರಿನಾಥ, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಡಾ.ರಾಮಸ್ವಾಮಿ ಬಾಲಸುಬ್ರಮಣಿಯನ್, ಇನ್ಫೋಸಿಸ್ ಸಹ ಸಂಸ್ಥಾಪಕ ಕೆ. ದಿನೇನ್ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

792 ವಿದ್ಯಾರ್ಥಿಗಳಿಗೆ ಪದವಿ:

16 ಚಿನ್ನದ ಪದಕ ಸೇರಿ ಒಟ್ಟು ಪದವಿ ಮತ್ತು ಸ್ನಾತಕೋತ್ತರ ಪದವಿಯ 792 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಿವಿ ಕುಲಪತಿ ಪ್ರೊ. ಶ್ರೀನಿವಾಸ ಬಳ್ಳಿ, ವಿವಿಯ ಕುಲಸಚಿವ ಶಿವಾನಂದ ಬ.ಕರಾಳೆ ಮತ್ತು ಮೌಲ್ಯಮಾಪನ ಕುಲಸಚಿವೆ ಪ್ರೊ. ಎ.ಸಿ. ಮಂಜುಳಾ ಭಾಗವಹಿಸಿದ್ದರು.