ವಿರಾಜಪೇಟೆ: ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಬೆಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ ಅಭಿಪ್ರಾಯಪಟ್ಟರು.
ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರ ಹೆಗ್ಗಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದು ಸ್ವಯಂ ಸೇವಾ ವಿದ್ಯಾರ್ಥಿಗಳಿಂದ ಶನಿವಾರ ಜರುಗಿದ ಗ್ರಾಮ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಚ್ಛತೆ ಎಂಬುವುದು ತನ್ನೊಡನೆ ಆರಂಭವಾಗಬೇಕು. ಪರಿಸರ ಸ್ವಚ್ಛವಾಗಿಟ್ಟರೆ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಎಲ್ಲರೂ ಪ್ಲಾಸ್ಟಿಕ್ ಮುಕ್ತ ಪರಿಸರದ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ಕೊಟ್ಟರು. ಸ್ವಚ್ಛತಾ ಜಾಗೃತಿಯಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಪಾತ್ರ ಶ್ಲಾಘನೀಯ ಎಂದು ಹೇಳಿದರು.
ಬೆಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಚ್ಚಪಂಡ ಬೋಪಣ್ಣ, ಸದಸ್ಯರಾದ ಅಮ್ಮಣ ಕುಟ್ಟಂಡ ವಸಂತ ಕಟ್ಟಿ, ಸುದೀಶ್, ರಜಾಕ್, ಲತಾ, ರಂಜಿತ್, ಎನ್‌ಎಸ್‌ಎಸ್ ಅಧಿಕಾರಿ ಶಾಂತಿಭೂಷಣ್, ಉಪನ್ಯಾಸಕಿ ವಿಲೀನ ಗೋನ್ಸಾಲ್ವೇಸ್, ಪಂಚಾಯಿತಿ ಸಿಬ್ಬಂದಿ ದಿನೇಶ್ ಸಾರ್ವಜನಿಕರು, ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಹೆಗ್ಗಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗದಿಂದ ಬೆಟೋಳಿ ಗ್ರಾಮ ಪಂಚಾಯಿತಿವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಪೇಪರ್ ಬಾಟಲಿಗಳನ್ನು ಆರಿಸಿ ಸ್ವಚ್ಛತಾ ಕಾರ್ಯ ನಡೆಸಿದರು. ಮಾತ್ರವಲ್ಲದೆ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದರು.