| ಎನ್.ಎಲ್. ಶಿವಮಾದು ಬೆಂಗಳೂರು
ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ನವೆಂಬರ್ ತಿಂಗಳಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)ಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯಾಗಲಿದೆ. 3ರಿಂದ 5 ವರ್ಷದ ಮಕ್ಕಳಿಗೆ ರಾಜ್ಯದ 20 ಸಾವಿರ ಅಂಗನವಾಡಿಗಳಲ್ಲಿ ಬಾಲ್ಯ ಪೂರ್ವ ಆರೈಕೆ ಮತ್ತು ಶಿಕ್ಷಣ (ಇಸಿಸಿಇ) ವನ್ನು ನವೆಂಬರ್ನಲ್ಲಿ ಜಾರಿ ಮಾಡುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಕಳೆದ ಆಗಸ್ಟ್ನಲ್ಲಿ ಪ್ರಕಟಿಸಿದ್ದರು. ಆದರೆ, ಎನ್ಇಪಿ ಜಾರಿ ಸಂಬಂಧ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್ಸಿಎಫ್) ಆಧರಿಸಿ ರಾಜ್ಯದಲ್ಲಿ ಎರಡು ವಾರಗಳ ಹಿಂದೆಯಷ್ಟೇ ಕರ್ನಾಟಕ ಪಠ್ಯಕ್ರಮ ಚೌಕಟ್ಟು (ಕೆಸಿಎಫ್) ರಚನೆ ಕಾರ್ಯ ಆರಂಭವಾಗಿದೆ.
ರಾಜ್ಯದಲ್ಲಿ ಅರಂಭಿಕ ಹಂತದ ಕೆಸಿಎಫ್ ರಚಿಸಲು ಡಿ.25ರ ಗಡುವು ನೀಡಲಾಗಿದೆ. ಆ ಬಳಿಕ ಕೆಸಿಎಫ್ ಆಧಾರದಲ್ಲಿ ಪಠ್ಯಪುಸ್ತಕ ರಚನೆ ಮಾಡುವುದು, ಅವುಗಳನ್ನು ಶಾಲೆಗೆ ತಲುಪಿಸುವುದು, ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುವುದು ಸೇರಿ ಹಲವು ಕೆಲಸಗಳು ಬಾಕಿ ಇವೆ. ಹೀಗಾಗಿ, ಸರ್ಕಾರ ಘೋಷಿಸಿದ್ದ ನಿಗದಿತ ಸಮಯದೊಳಗೆ ಎನ್ಇಪಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಮುಂದಿನ ವರ್ಷ ಜಾರಿ ಸಾಧ್ಯತೆ: ಕೆಸಿಎಫ್ ಕೆಲಸವನ್ನು ಡಿಸೆಂಬರ್ವಲ್ಲಿ ಪೂರ್ಣಗೊಳಿಸಿದರೆ ಮಾತ್ರ ಮುಂದಿನ ಶೈಕ್ಷಣಿಕ ವರ್ಷದಿಂದ (2023-24) ಶಾಲೆಗಳಲ್ಲಿ ಎನ್ಇಪಿ ಜಾರಿ ಮಾಡಲು ಸಾಧ್ಯವಾಗಲಿದೆ. ಇಲ್ಲವಾದಲ್ಲಿ ಆರಂಭ ಅಸಾಧ್ಯ. ಪಠ್ಯಪುಸ್ತಕ ಮುದ್ರಿಸಲು ಟೆಂಡರ್ ಮಾಡಿ, ಮುದ್ರಣಗೊಂಡು ಮಕ್ಕಳ ಕೈ ಸೇರುವಷ್ಟರಲ್ಲಿ ಸಾಕಷ್ಟು ಸಮಯ ಹಿಡಿಯುತ್ತದೆ.
ಕೆಲ ಅಂಗನವಾಡಿಗಳಲ್ಲಿ ಮಾತ್ರ ಜಾರಿ: ರಾಜ್ಯದಲ್ಲಿ ಈ ವರ್ಷವೇ ಎನ್ಇಪಿ ಜಾರಿಗೊಳಿಸಲು ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ನರ್ಸರಿ, ಯುಕೆಜಿ ಮತ್ತು ಎಲ್ಕೆಜಿ ತರಗತಿಗಳಲ್ಲಿ ಅನುಷ್ಠಾನವಾಗಲಿದೆ. 1 ಮತ್ತು 2ನೇ ತರಗತಿಗೂ ಇದೇ ವರ್ಷ ಸಾಧ್ಯವಾದರೆ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಮಕ್ಕಳಿಗೆ ಚಟುವಟಿಕೆ ಆಧಾರಿತ ಕಲಿಕೆಯನ್ನು ಕಲಿಸುವುದರಿಂದ ಜಾರಿ ಮಾಡಲು ಕಷ್ಟವಾಗುವುದಿಲ್ಲ. ಆದರೆ, ಈಗಾಗಲೆ ಘೋಷಿಸಿರುವಂತೆ 20 ಸಾವಿರ ಅಂಗನವಾಡಿಗಳಲ್ಲಿ ಜಾರಿಯಾಗದಿದ್ದರೂ, ಕೆಲವೆಡೆ ಜಾರಿ ಮಾಡುತ್ತೇವೆ ಎಂದು ಬಿ.ಸಿ. ನಾಗೇಶ್ ಪ್ರತಿಕ್ರಿಯಿಸಿದ್ದಾರೆ.
ಈಗಷ್ಟೇ ಪ್ರಕ್ರಿಯೆ ಆರಂಭ: ರಾಜ್ಯ ಸರ್ಕಾರ 3ರಿಂದ 8 ವರ್ಷದ ವಯಸ್ಸಿನ ಮಕ್ಕಳಿಗೆ ಎನ್ಇಪಿ ಜಾರಿ ಮಾಡುವ ಸಂಬಂಧ ಈಗಷ್ಟೇ ಪ್ರಕ್ರಿಯೆ ಆರಂಭಿಸಿದೆ. ಇನ್ನೂ ಸಾಕಷ್ಟು ಕೆಲಸ ನಡೆಯಬೇಕಿದೆ. ಇದೆಲ್ಲವನ್ನೂ ತರಾತುರಿಯಲ್ಲಿ ಮಾಡಿ ಮುಗಿಸಲು ಸಾಧ್ಯವಿಲ್ಲ. ನಾವು ಎಷ್ಟೇ ಬೇಗ ಮಾಡಿ ಮುಗಿಸಿದರೂ ಮುಂದಿನ ವರ್ಷದಿಂದ ಜಾರಿ ಮಾಡಬಹುದು ಅಷ್ಟೇ ಎಂದು ಶಿಕ್ಷಣ ಇಲಾಖೆ ಮೂಲಗಳು ದೃಢಪಡಿಸಿವೆ.
ಎನ್ಇಪಿ ಜಾರಿ ಮಾಡುವ ಕಾರ್ಯಕ್ಕೆ ಚುರುಕು ನೀಡಲಾಗಿದೆ. ನವೆಂಬರ್ನಲ್ಲಿ ಜಾರಿ ಸಾಧ್ಯವಾಗುವುದಿಲ್ಲ. ಡಿಸೆಂಬರ್ಗೆ ಕೆಸಿಎಫ್ ಸಿದ್ಧವಾಗಲಿದ್ದು, ಈ ವರ್ಷವೇ ಜಾರಿ ಮಾಡಲು ನಿರ್ಧರಿಸಿದ್ದೇವೆ. | ಬಿ.ಸಿ. ನಾಗೇಶ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ
ಬೆಂಗಳೂರು: ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಂತೆ ಬಾಲ್ಯಾವಸ್ಥೆ, ಶಾಲಾ ಹಂತದ ಶಿಕ್ಷಣದ ಪಠ್ಯಕ್ರಮ ಹಾಗೂ ಪಠ್ಯ ಪುಸ್ತಕಗಳು ಡಿ.25ರೊಳಗೆ ಸಿದ್ಧವಾಗಲಿವೆ ಎಂದು ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದರು. ಶಾಲಾ ಶಿಕ್ಷಣದಲ್ಲಿ ಹೊಸ ನೀತಿ ಜಾರಿಗೆ ತಯಾರಿ ಚುರುಕುಗೊಂಡಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆಯ್ದ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ಪ್ರಾರಂಭಿಸಲಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ಶಾಲಾ ಪೂರ್ವ ಶಿಕ್ಷಣದಲ್ಲಿ ಹೊಸ ನೀತಿ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ. ಚಟುವಟಿಕೆಗಳ ಮೂಲಕ ಪಾಠ ಕಲಿಸುವುದರಿಂದ ಶಾಲಾ ಪೂರ್ವ ಶಿಕ್ಷಣಕ್ಕೆ ಪಠ್ಯಪುಸ್ತಕಗಳ ಹೊರೆಯಿರುವುದಿಲ್ಲ. ಒಂದರಿಂದ 2ನೇ ತರಗತಿಗೆ ಅಕ್ಷರ ಮತ್ತು ಸಂಖ್ಯಾಜ್ಞಾನ ನೀಡಲಾಗುತ್ತದೆ. ಸಚಿತ್ರ ಬೋಧನೆ ಇರಲಿದ್ದು, ಅದೇ ರೀತಿ ಪಠ್ಯಕ್ರಮ ರೂಪುಗೊಳ್ಳಲಿದೆ. ಮಾತೃಭಾಷಾ ಶಿಕ್ಷಣಕ್ಕೆ ಹೊಸ ನೀತಿ ಆದ್ಯತೆ ನೀಡಿದ್ದು, ನೀತಿ ರೂಪಿಸುವಲ್ಲಿ ಭಾಗಿಯಾದವರು ಹಾಗೂ ತಜ್ಞರಿಂದ ಅಭಿಪ್ರಾಯ ಸಂಗ್ರಹವಾಗಿದೆ ಎಂದು ಹೇಳಿದರು.
ಬೈಸಿಕಲ್ ನಿರ್ಧಾರವಿಲ್ಲ: ಶಾಲಾ ಮಕ್ಕಳಿಗೆ ಬೈಸಿಕಲ್ಗಿಂತ ಗುಣಮಟ್ಟದ ಶಿಕ್ಷಣ ಮುಖ್ಯವಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಬೈಸಿಕಲ್ ವಿತರಣೆ ನಿರ್ಧಾರವಾಗಿಲ್ಲ ಎಂದ ಸಚಿವರು, ಈ ಬಾರಿ ಬೈಸಿಕಲ್ ಇಲ್ಲವೆನ್ನಲಾಗದು. ಟೆಂಡರ್ ಕರೆದ ತಕ್ಷಣ ಬೈಸಿಕಲ್ ತಯಾರಕರು ತ್ವರಿತವಾಗಿ ಸ್ಪಂದಿಸಿದ ನಿದರ್ಶನವಿದೆ. ವಿತರಣೆಗೆ ಹೆಚ್ಚೇನು ಕಾಲಾವಕಾಶ ಹಿಡಿಯದು ಎಂದರು.
ರಾಜ್ಯದ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಲು ವಿಧಿಸಿದ್ದ 6 ವರ್ಷಗಳ ಕಡ್ಡಾಯ ವಯೋಮಿತಿ ಅದೇಶವನ್ನು ಹಿಂಪಡೆದಿರುವ ಸರ್ಕಾರ, ಮುಂದಿನ 2 ವರ್ಷಗಳಿಗೆ ಅನ್ವಯವಾಗುವಂತೆ ಮುಂದೂಡಿದೆ. 2022-23ನೇ ಸಾಲಿನಿಂದ ಅನ್ವಯವಾಗಬೇಕಿದ್ದ ನಿಯಮ 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗಲಿದೆ ಎಂದು ಸೂಚಿಸಿದೆ.
3 ಸಾವಿರ ಎಕರೆ ತೆರವು: ಸರ್ಕಾರಿ ಶಾಲೆಗಳ ಜಮೀನು ಸಂರಕ್ಷಣೆಗಾಗಿ ದಾಖಲೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಈವರೆಗೆ ಪತ್ತೆಯಾದ ಮೂರು ಸಾವಿರ ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಬಿ.ಸಿ.ನಾಗೇಶ್ ತಿಳಿಸಿದರು. ರಿಯಲ್ ಎಸ್ಟೇಟ್, ಜಮೀನಿಗೆ ಹೆಚ್ಚು ಬೆಲೆ ಕಾರಣಕ್ಕೆ ಒತ್ತುವರಿ ಕಂಡು ಬಂದಿವೆ ಎಂದರು. ಮಲೆನಾಡು, ಕರಾವಳಿಯಲ್ಲಿ ಅರಣ್ಯಪ್ರದೇಶ, ದಾನಪತ್ರ, ರಾಶಿ ಕಣ, ಮನೆ ಮುಂತಾದಡೆ ದಾಖಲೆ ಪ್ರಕ್ರಿಯೆ ಕ್ಲಿಷ್ಟವಾಗಿದ್ದು, ಇಂತಹ 18 ಸಾವಿರ ಪ್ರಕರಣಗಳಿವೆ ಎಂದು ಹೇಳಿದರು.
ಕೇಸರಿಗೆ ರಾಜಕೀಯ ಬಣ್ಣ: ಶಾಲಾ ಕಟ್ಟಡಗಳಿಗೆ ಕೇಸರಿ ಬಣ್ಣ ವಿಚಾರದಲ್ಲಿ ಕಾಂಗ್ರೆಸ್ನವರು ಚುನಾವಣೆ ಕಾರಣಕ್ಕೆ ಒಂದು ವರ್ಗದವರ ಓಲೈಕೆಗೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ ಎಂದು ಬಿ.ಸಿ.ನಾಗೇಶ್ ಟೀಕಿಸಿದರು. ಶಾಲೆ ಕಟ್ಟಡಗಳಿಗೆ ಇಂತಹದ್ದೇ ಬಣ್ಣ ಎಂದು ಸುತ್ತೋಲೆ ಹೊರಡಿಸಿಲ್ಲ. ಅಲ್ಲಿನ ವಾತಾವರಣಕ್ಕೆ ತಕ್ಕಂತೆ ನಿರ್ಧರಿಸಿ ಎಂದಿದ್ದೇವೆ. ಆದರೆ ಜ್ಞಾನದ ಸಂಕೇತವಾದ ಸ್ವಾಮಿ ವಿವೇಕಾನಂದರನ್ನು ಬ್ರಾ್ಯಂಡ್ ಮಾಡಲು ಸೂಚಿಸಿದ್ದೇವೆ ಎಂದರು.