ಎಚ್.ಡಿ.ಕೋಟೆ: ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಡಿಪಿ ಸಭೆ ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರವಾಗಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ಕೃಷ್ಣಂರಾಜ್ ತಿಳಿಸಿದರು.
ತಾಲೂಕಿನ ಅಣ್ಣೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಪಂಚಾಯಿತಿ ಮಟ್ಟದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಇದೆಯೋ ಅಲ್ಲಿ ನೂರಕ್ಕೆ ನೂರರಷ್ಟು ಅಭಿವೃದ್ಧಿ ಆಗುತ್ತದೆ ಎಂಬುದಕ್ಕೆ ಅಣ್ಣೂರು ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ ಎಂದರು.
ಅಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ನರೇಗಾ, ವಸತಿ, ಸ್ವಚ್ಛತಾ ಮತ್ತು ಮತ್ತಿತರ ಕಾಮಗಾರಿಗಳು ನೂರರಷ್ಟು ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಣ್ಣೂರು ಗ್ರಾಮ ಪಂಚಾಯಿ ಉಪಾಧ್ಯಕ್ಷ ಎಡತೊರೆ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಆದೇಶವಿದ್ದರೂ ಪಂಚಾಯಿತಿಗಳಲ್ಲಿ ಕೆಡಿಪಿ ಸಭೆಗಳನ್ನು ಮಾಡುತ್ತಿಲ್ಲ. ಅಧಿಕಾರಿಗಳಿಗೆ ಮಾಹಿತಿ ಕೊರತೆ ಇದೆ. ಹಾಗಾಗಿ ಪಂಚಾಯಿತಿ ಸದಸ್ಯರು ಪಂಚಾಯಿತಿ ಕಾಯ್ದೆ ತಿಳಿದುಕೊಂಡು ಅದರನ್ವಯ ಕೆಲಸ ಮಾಡಬೇಕಾಗಿದೆ ಎಂದರು.
ಪಿಎಂವೈ, ಅಂಬೇಡ್ಕರ್, ಬಸವ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು. ಅಧ್ಯಕ್ಷೆ ಜಯಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್,ಮಹೇಶ್, ಇಒ ಧರಣೇಶ್, ನರೇಗಾ ಅಧಿಕಾರಿ ಅಶಿಷ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸಂತೋಷ ನಾಗ್, ಕಾರ್ಯದರ್ಶಿ ಮೋಹನ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ್, ಸದಸ್ಯರಾದ ಸ್ವಾಮಿ, ಜಯಮ್ಮ, ಸರಸ್ವತಿ, ಸಿದ್ದಮ್ಮ, ರಾಜೇಶ್, ಶಿವಮ್ಮ, ಶಶಿಕುಮಾರ್, ಜಯಲಕ್ಷ್ಮೀ, ರಾಜು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ ಮುಖ್ಯಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.