ನ್ಯೂಸ್

ಮಕ್ಕಳು, ಪತ್ನಿಯನ್ನು ಕಣಕ್ಕಿಳಿಸುವುದು ನನ್ನ ಗುರಿಯಲ್ಲ; DK ಶಿವಕುಮಾರ್

ಬೆಂಗಳೂರು: ಸಧ್ಯದಲ್ಲೇ ಮಹಿಳಾ ಮೀಸಲಾತಿ ಜಾರಿಯಾಗಲಿದೆ. ಆಗ ಮುಂದಿನ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಿಗೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಹಾಗೆಂದು ನನ್ನ ಮಕ್ಕಳು, ಪತ್ನಿಯನ್ನು ಕಣಕ್ಕಿಳಿಸುವುದು ನನ್ನ ಗುರಿಯಲ್ಲ. ನೀವು ಕಾರ್ಯಕರ್ತರು ಟಿಕೆಟ್ ಪಡೆಯಲು ಶಕ್ತಿಶಾಲಿಗಳಾಗಬೇಕು ಎಂದು ಡಿಸಿಎಂ DK ಶಿವಕುಮಾರ್​ ತಿಳಿಸಿದರು. ​

ಅರಮನೆ ಮೈದಾನದಲ್ಲಿ ಸೋಮವಾರ ನಡೆದ “ಯುವ ಸಂಕಲ್ಪ” ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು “ಸಾಧನೆ ಮಾಡಲು ಹೋರಾಡುವವನಿಗೆ ದಾರಿಯಲ್ಲಿ ನೂರಾರು ಅಡೆತಡೆಗಳು ಇರುತ್ತವೆ. ನಾವು ಶಕ್ತಿಶಾಲಿಯಾಗಿದ್ದಷ್ಟು ಶತ್ರುಗಳು ಜಾಸ್ತಿ, ಕಡಿಮೆ ಶಕ್ತಿಶಾಲಿಗಳಾದರೆ ಕಡಿಮೆ ಶತ್ರುಗಳು, ಶಕ್ತಿಶಾಲಿಗಳೇ ಅಲ್ಲದಿದ್ದರೆ ಶತ್ರುಗಳೇ ಇರುವುದಿಲ್ಲ. ಯುವಕರ ನಡೆ ಹಳ್ಳಿ, ಬೂತ್ ಕಡೆ, ನಿಮ್ಮ ನಡೆ ಗ್ಯಾರಂಟಿ ಕಡೆ ಇರಬೇಕು. ಆ ಮೂಲಕ 2028ರಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ಗಮನ ಇರಬೇಕು'' ಎಂದರು.

ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ದೇವರು ನಿಮಗೆ ಕೊಟಟಿರುವ ನಾಯಕತ್ವದ ಅವಕಾಶವನ್ನು ಬಳಸಿಕೊಂಡು ದೊಡ್ಡ ಭವಿಷ್ಯ ರೂಪಿಸಿಕೊಳ್ಳಬೇಕು. ನಿಮ್ಮ ಆಲೋಚನೆಗಳು ನಿಮ್ಮ ನಾಯಕತ್ವ ರೂಪಿಸುತ್ತದೆ. ಗೆದ್ದವರು, ಸೋತವರನ್ನು, ಸೋತವವರು ಗೆದ್ದವರನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದರೆ ನಿಮಗೆ ಈ ಡಿ.ಕೆ. ಶಿವಕುಮಾರ್ ಮತ್ತೆ ಯಾವುದೇ ಅವಕಾಶ ನೀಡುವುದಿಲ್ಲ. ನಿಮ್ಮ ವೈಯಕ್ತಿಕ ವಿಚಾರ ಬಿಟ್ಟು ಪಕ್ಷದ ಕೆಲಸ ಮಾಡುತ್ತೀರೋ ಅಂತಹವರಿಗೆ ಪಕ್ಷ ಗೌರವ ನೀಡಲಿದೆ ಎಂದು ಸಂದೇಶ ರವಾನಿಸಿದರು.

“ಪಕ್ಷ ಇದ್ದರೆ, ಸರ್ಕಾರ, ನೀವುಗಳಿದ್ದರೆ ನಾವು. ಪಕ್ಷವೇ ಮೊದಲು ಎಂಬ ಕಾರಣಕ್ಕೆ ನಾನು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನನಗೆ ವಿಶ್ವಾಸವಿದೆ 2028ರಲ್ಲಿ ರಾಜ್ಯದಲ್ಲಿ ಹಾಗೂ 2029ರಲ್ಲಿ ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್ ಬಾವುಟ ಹಾರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.