ವಿಶ್ವೇಶ್ವರಯ್ಯನವರು ಬದುಕಿದ್ದಾಗಲೇ ದಂತಕಥೆಯಾದವರು. ಭಾರತೀಯರ ಯಾವ ಪ್ರತಿಭೆಯೂ ನಗಣ್ಯವಾಗಿದ್ದ ಆ ಕಾಲದಲ್ಲಿ ಬ್ರಿಟಿಷರಿಂದಲೇ ತಮ್ಮ ಸೇವಾಹಿರಿತನಕ್ಕೂ ಮೀರಿದ ಮುಂಬಡ್ತಿಯನ್ನು ಪಡೆದವರು. ವಿದ್ಯಾರ್ಥಿದೆಸೆಯಿಂದಲೇ ಆದರ್ಶಗಳಿಗೆ ಆಶ್ರಯವಾಗಿದ್ದವರು. ಮನೋರಂಜನೆಯೇ ಪ್ರಧಾನವಾದ ಸಿನಿಮಾ ಹಾಡುಗಳಲ್ಲಿಯೂ ಪೂಜ್ಯತೆಗೆ ಭಾಜನರಾದವರು. ಆಸ್ತಿಕ ನಾಸ್ತಿಕರೆನ್ನದೆ ಎಲ್ಲರಿಂದಲೂ ನರಕಗಳನ್ನು ಸ್ವರ್ಗವಾಗಿಸುವ, ಸಮಸ್ಯೆಗಳನ್ನು ಸೌಂದರ್ಯದಾಣಗಳನ್ನಾಗಿಸಬಲ್ಲ ಮಾಂತ್ರಿಕಹಸ್ತರೆಂದು ಶ್ಲಾಘಿಸಲ್ಪಟ್ಟವರು. ರಾಜರ್ಷಿಯಾಗಿದ್ದ ಅವರನ್ನು ನಿರ್ಭೀತ, ನಿಷ್ಪಕ್ಷ ವಿಮರ್ಶಕ, ನಾಡಕವಿ ಕುವೆಂಪು ‘ಯಂರ್ತÅ - ಯಂತ್ರ ಲೋಕದ ಋಷಿ’ ಎಂದು ಕರೆದರು. ತಮ್ಮ ಕುಲ, ಜಾತಿ, ಊರು ಇದೇ ಬೇರೆಲ್ಲಕ್ಕಿಂತ ಮಿಗಿಲಾದ ಅರ್ಹತೆ (ಮೆರಿಟ್) ಎಂದು ಪರಿಗಣಿಸಲ್ಪಟ್ಟಿರುವ ಇಂದಿನ ಜಾತ್ಯತೀತ (?) ಭಾರತದ ತತ್ವಗಳ ವಿರುದ್ಧವಾಗಿ ಜಾತಿ, ಕುಲ, ಗೋತ್ರಗಳನ್ನು ದೂರವಿಟ್ಟವರು. ಆಷಾಢಭೂತಿತನ, ಅಪ್ರಾಮಾಣಿಕತೆ, ತತ್ವವಿಹೀನತೆಗಳಿಂದ ಮುಕ್ತರಾಗದಿದ್ದಲ್ಲಿ ಯಾವ ಸಂವಿಧಾನಗಳಿಂದಲೂ, ಸ್ವಾತಂತ್ರ್ಯಗಳಿಂದಲೂ ಏನೂ ಪ್ರಯೋಜನವಿಲ್ಲ ಎಂದು ತೋರಿಸಿಕೊಟ್ಟವರು. ಬಡವರ ಬಂಧುಗಳ, ಮಣ್ಣಿನಮಕ್ಕಳ ಸಂಕುಚಿತ, ಅಪ್ರಬುದ್ಧ ದೃಷ್ಟಿಕೋನಗಳಿಂದ ಅಭಿವೃದ್ಧಿಶೀಲ ಹಣೆಪಟ್ಟಿಯಲ್ಲೇ ಸಾರ್ಥಕತೆಯನ್ನು ಕಾಣುತ್ತಿರುವ ಕನ್ನಡಾಂಬೆ ಒಂದು ಶತಮಾನಕ್ಕೂ ಹಿಂದೆಯೇ ಆರ್ಥಿಕತೆ, ಕೈಗಾರಿಕೋದ್ಯಮ, ಬ್ಯಾಂಕಿಂಗ್, ವಿಶ್ವವಿದ್ಯಾಲಯ, ತಾಂತ್ರಿಕತೆ, ಮನೋರಂಜನೆ, ಸಾಹಿತ್ಯ ಇತ್ಯಾದಿ ಕ್ಷೇತ್ರಗಳು ಹೇಗೆ ನಲಿನಲಿದು ತಲೆಯೆತ್ತಿದ್ದವು ಎಂಬುದನ್ನು ಕಂಡು ಖಿನ್ನಮನಸ್ಕಳಾಗಿ ನಲಗುತ್ತಿದ್ದರೆ ಆಶ್ಚರ್ಯವಿಲ್ಲ. ಸರ್ ಎಂ.ವಿ. ಇವೆಲ್ಲಕ್ಕೂ ಜನ್ಮ ಕೊಟ್ಟರಷ್ಟೇ ಅಲ್ಲ, ಸುಭದ್ರ ತಳಹದಿಯ ಮೇಲೆ ನಿಲ್ಲಿಸಿ ಅಂದಿನ ಇಡೀ ಭಾರತವರ್ಷ ಈ ಮಹಾ ಶಿಲ್ಪಿಯನ್ನೂ, ಅವರ ಸಾಧನೆಗಳನ್ನೂ ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದ ಮಾಂತ್ರಿಕರವರು. ಅಂದಿನ ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಆರ್ಥಿಕತೆ, ಅಭಿವೃದ್ಧಿ, ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಅವರು ಮೊದಲು ಸಹಾಯಕ್ಕಾಗಿ ಧಾವಿಸುತ್ತಿದ್ದುದು ವಿಶ್ವೇಶ್ವರಯ್ಯನವರ ಬಳಿ. ಅಂದಿನ ಜಾಗತಿಕ, ಧಾರ್ವಿುಕ ಕ್ಷೇತ್ರದಲ್ಲಿ ವಿವೇಕಾನಂದರು ಹೇಗೋ, ಅಭಿವೃದ್ಧಿ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯನವರು ಹಾಗೇ ಎಂದು ಸಂಶಯಕ್ಕೆಡೆಯಿಲ್ಲದಂತೆ ಹೇಳಬಹುದು. ಯಾವ ಸ್ಥಾನಗಳನ್ನಲಂಕರಿಸುವುದು ಅಭೂತಪೂರ್ವ ಸಾಧನೆ ಎಂದು ಅಂದಿನ ಸುಶಿಕ್ಷಿತ ಭಾರತ (ಎಜುಕೇಟೆಡ್ ಇಂಡಿಯಾ) ಬಿಡಿ, ಸ್ವಯಂ ಇಂಗ್ಲೆಂಡಿನವರೂ ಭಾವಿಸಿದ್ದರೋ ಆ ಸ್ಥಾನಗಳು ತಾವೇ ಅವರ ತೆಕ್ಕೆಗೆ ಬಿದ್ದರೂ ಅವುಗಳಿಂದ ಭಾರತಕ್ಕೆ ಪ್ರಯೋಜನವಾಗದಿದ್ದಲ್ಲಿ ನಿರ್ಭಿಡೆಯಿಂದ ಅವುಗಳನ್ನು ತಿರಸ್ಕರಿಸಿದ ಧೀರ, ಮಹಾನ್ ರಾಷ್ಟ್ರಪ್ರೇಮಿ ಸರ್ ಎಂ.ವಿ.; ಕೃಷ್ಣರಾಜ ಒಡೆಯರ್ ಅವರ ಆಡಳಿತ ಭದ್ರತೆ ಅಥವಾ ಸ್ಥಾನಭದ್ರತೆ ಇನ್ನೂ ಅಸ್ಥಿರ ಸ್ಥಿತಿಯಲ್ಲೇ ಉಳಿದಿದ್ದಾಗ ಅದಕ್ಕೆ ಸ್ಥಾನಭದ್ರತೆ ಹಾಗೂ ಸ್ಥಿರತೆಯನ್ನು ಒದಗಿಸಿಕೊಟ್ಟವರು ಸರ್ ಎಂ.ವಿ.; ಬ್ರಿಟಿಷರೊಡನೆ ತಮಗಿದ್ದ ಪ್ರಭಾವವನ್ನು ಬಳಸಿಕೊಂಡು ಈ ವಿಚಾರವನ್ನು ಯಾವ ಬಿಗುಮಾನವೂ ಇಲ್ಲದೆ ಸ್ವಯಂ ಕೃಷ್ಣರಾಜ ಒಡೆಯರ್ ಒಂದು ಸಭೆಯಲ್ಲಿ ತಮ್ಮ ಮುಕ್ತಕಂಠ ಕೃತಜ್ಞತೆಯ ಮೂಲಕ ವ್ಯಕ್ತಪಡಿಸಿರುವ ಇಂಗ್ಲೀಷ್ ಉಪನ್ಯಾಸ ನನ್ನ ಗಮನಕ್ಕೆ ಬಂದಿದೆ. ಇದೊಂದು ಅಧಿಕೃತ ಮೂಲದ್ದು. ಕಲ್ಪಿತ ಮಹಿಮೆಯಲ್ಲ. ನಾನೇ ಸ್ವಯಂ ಒಂದು ಪುಸ್ತಕದಲ್ಲಿ ಓದಿದ್ದೇನೆ. ಇವರೀರ್ವರ ನಡುವಿನ ಸಂಬಂಧ ಒಂದು ರೀತಿಯಲ್ಲಿ ವಿದ್ಯಾರಣ್ಯ ಮತ್ತು ಹಕ್ಕ ಬುಕ್ಕರ ಸಂಬಂಧದಂತೆ. ಚಾಣಕ್ಯ ಚಂದ್ರಗುಪ್ತರ ಸಂಬಂಧದಂತೆ. ಇದು ಭಾರತೀಯ ಪರಂಪರೆ ಜಗತ್ತಿಗೆ ಕೊಟ್ಟ ಮಹಾ ಪಾಠಗಳಲ್ಲಿ ಒಂದು. ಕ್ಷಾತ್ರವೀರ್ಯ ಬ್ರಹ್ಮತೇಜಗಳು ತಮ್ಮ ಪ್ರವೃತ್ತಿ, ನಿವೃತ್ತಿಗಳ ಸಂಯೋಜನೆಯಿಂದ ಹೇಗೆ ಅದ್ಭುತವಾದ ಅಭ್ಯುದಯ ಸಾಧಿಸಬಲ್ಲವು ಎಂಬುದೇ ಈ ಪರಂಪರೆಯ ರಾಜಧರ್ಮ. ವಿಜ್ಞಾನ, ತಂತ್ರಜ್ಞಾನಗಳು ಬುದ್ಧಿಗೆ ಸೇರಿದ್ದು. ಅವುಗಳ ಸರಿಯಾದ ಉಪಯೋಗ ಮತ್ತು ಅಳವಡಿಕೆ ಪ್ರಭುತ್ವಕ್ಕೆ ಸಂಬಂಧಿಸಿದ್ದು. ಎರಡೂ ಸೇರಿದರೆ ಮಾತ್ರ ಪ್ರಗತಿ. ಕೇವಲ ಪ್ರಭುತ್ವ ಏನು ಮಾಡೀತು? ಇದನ್ನು ಅರ್ಥ ಮಾಡಿಕೊಳ್ಳದ ಕೆಲವು ಬುದ್ಧಿಹೀನ, ವಿವೇಕಹೀನ ತಲೆಗಳು ಕೆಲವೊಮ್ಮೆ ಖಾಲಿಪಾತ್ರೆಗಳಂತೆ ಶಬ್ದಮಾಲಿನ್ಯವನ್ನು ಸೃಷ್ಟಿಸುತ್ತವೆ. ‘ಅಣುಬಾಂಬನ್ನು ಕಂಡುಹಿಡಿದಿದ್ದು ಅಮೆರಿಕನ್ ಸರ್ಕಾರ; ವಿಜ್ಞಾನಿ ರಾಬರ್ಟ್ ಓಪನ್ಹೀಮರ್ ಅಲ್ಲ; ಚಲನೆಯ ನಿಯಮಗಳು ಇಂಗ್ಲಿಷ್ ಸರ್ಕಾರದ್ದು, ನ್ಯೂಟನ್ನನದಲ್ಲ’ ಎನ್ನುವಷ್ಟೇ ಬಾಲಿಶ ಇದು. ಭವಿಷ್ಯ ಭಾರತಕ್ಕೆ ಏನೇನು ಬೇಕೋ ಅವೆಲ್ಲಕ್ಕೂ ನಾಂದಿ ಹಾಡಿದ್ದು ಅಂದಿನ ಮೈಸೂರು. ಐಐಎಸ್ಸಿ, ಇಸ್ರೋ, ಎಚ್ಎಎಲ್ ಇತ್ಯಾದಿಗಳನ್ನೊಳಗೊಂಡ ಒಂದು ಬೃಹತ್ ಅಭಿವೃದ್ಧಿ ಪರ್ವ ತಮ್ಮ ಸಾರ್ಥಕತೆಯ ನುಡಿನಮನವನ್ನು ವಿಶ್ವೇಶ್ವರಯ್ಯನವರಿಗೆ ಮೌನ ಆದರೆ ಸ್ಪಷ್ಟ ಭಾಷೆಯಲ್ಲಿ ಸಲ್ಲಿಸುತ್ತಿವೆ. ಐಛ್ಠಠಠ್ಟಿಜಿಚ್ಝಜ್ಢಿಛಿ ಟ್ಟ ಕಛ್ಟಿಜಿಠಜ ಎನ್ನುವ ಜಾಗತಿಕ ಉದ್ಯೋಗ ಸೂತ್ರ ಅವರದ್ದೇ. ಉಪನಿಷತ್ಕಾಲದ ಋಷಿಯಂತೆ ಶತಾಯುಷ್ಯದ ತುಂಬು ಜೀವನ ನಡೆಸಿ ಸಕಲ ರಾಜಮರ್ಯಾದೆಗಳೊಂದಿಗೆ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದವರು ಸರ್ ಎಂ.ವಿ.; ನಾವೆಲ್ಲಾ ವಿದ್ಯಾರ್ಥಿಗಳಾಗಿದ್ದಾಗ ಪ್ರತಿನಿತ್ಯವೆಂಬಂತೆ ತಮ್ಮ ತರಗತಿಗಳಲ್ಲಿ ಶಿಕ್ಷಕರು ಮುಕ್ತಕಂಠದಿಂದ ಪ್ರಶಂಸಿಸಿ ನಮ್ಮ ಮುಂದೆ ಆದರ್ಶಗಳನ್ನಿಡುತ್ತಿದ್ದುದೇ ವಿವೇಕಾನಂದರು, ವಿಶ್ವೇಶ್ವರಯ್ಯ ಮತ್ತು ರಾಷ್ಟ್ರಕವಿ ಕುವೆಂಪು ಅವರ ಕುರಿತು.
ಇನ್ನು ಸೆ. 11ರ ಮಹತ್ವವನ್ನು ಮನಗಾಣುವ ದಿನ ಆಡಳಿತ ಯಂತ್ರದ ಗಮನಕ್ಕೇನೂ ಬಂದಂತೆ ಕಾಣುತ್ತಿಲ್ಲ. ಸರ್ಕಾರಗಳಿಗೆ ಯಾವ ದೇವರ ಕೃಪೆ ಆಗಿದೆಯೋ ಬಿಟ್ಟಿದೆಯೋ ಗೊತ್ತಿಲ್ಲ, ಮಹಿಷನ ಕೃಪೆ ಧಾರಾಳವಾಗಿಯೇ ಆಗಿದೆ. ಭಯೋತ್ಪಾದನೆ, ರಾಷ್ಟ್ರ ರಾಷ್ಟ್ರಗಳ ನಡುವಿನ ವೈಷಮ್ಯ, ಶಕುನಿ ತಂತ್ರಗಳ ಅಟ್ಟಹಾಸ, ಸೇವಾ ಸಂಘಗಳ ಹೆಸರಿನಲ್ಲಿ ಮತಾಂತರ ಮತ್ತು ಗೂಢಚರ್ಯು ಇವುಗಳಿಂದ ತತ್ತರಿಸುತ್ತಿರುವ ಸದ್ಯದ ಜಗತ್ತಿಗೆ ಅತ್ಯಂತ ಅನಿವಾರ್ಯವಾಗಿ ಬೇಕಾಗಿರುವುದು ಸಮ್ಯಕ್ ಮಾರ್ಗದರ್ಶನ. ಇತಿಹಾಸದಿಂದ ಯಾವ ಪಾಠವನ್ನೂ ಕಲಿಯುವುದಿಲ್ಲ ಎನ್ನುವುದೇ ಇತಿಹಾಸದಿಂದ ನಾವು ಕಲಿಯುವ ಪಾಠ ಎಂದು ಪಾಶ್ಚಾತ್ಯ ಚಿಂತಕನೊಬ್ಬ ನುಡಿಯುತ್ತಾನೆ. ಈ ಸಂದಿಗ್ಧ ಸ್ಥಿತಿಗೆ ಕಾರಣ ಮೌಲ್ಯರಹಿತ ರಾಜಕಾರಣ. ಉಛಠ jಠಠಿಜ್ಛಿಢ ಞಛಿಚ್ಞಠ ಗುರಿ ಮುಖ್ಯ ದಾರಿ ಅಲ್ಲ- ಎನ್ನುವ ಮೆಕ್ಯಾವಿಲಿ ಮಂತ್ರ ಇಂಥ ಆತ್ಮಹತ್ಯಾಕಾರಕ ತತ್ವದೆಡೆಗೆ ರಾಷ್ಟ್ರಗಳು ವಾಲುತ್ತಿರುವುದು ಸಲ್ಲಕ್ಷಣವಲ್ಲ. ‘ಆರ್ಥಿಕವಾಗಿ ನಾವು ಸದೃಢಗೊಂಡು ಬೇರಾರೂ ನಮ್ಮಷ್ಟು ಬೆಳೆಯದಂತೆ ನೋಡಿಕೊಂಡರೆ ನಾಯಕತ್ವ ಶಾಶ್ವತವಾಗಿ ನಮ್ಮಲ್ಲೇ ಉಳಿಯುವುದು. ಸದಾ ಮುಂಚೂಣಿಯಲ್ಲಿ ನಾವೇ ಇರುತ್ತೇವೆ’ ಎನ್ನುವ ಭ್ರಮೆ. ನಾನು ಬೆಳೆಯುವುದು ಎಷ್ಟು ಮುಖ್ಯವೋ ಬೇರೆಯವರು ಬೆಳೆಯದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ ಎಂಬ ಧೂರ್ತ ತತ್ವ. ರಾವಣನಿಂದ ಹಿಡಿದು ಔರಂಗಜೇಬನವರೆಗೆ, ಗ್ರೀಕರಿಂದ ಹಿಡಿದು ಇಂಗ್ಲೆಂಡಿನವರೆಗೆ ಅಪ್ರಬುದ್ಧ ರಾಜಕಾರಣ ಅನುಸರಿಸಿದ್ದು ಇದನ್ನೇ. ಆರ್ಯಸಂಸ್ಕೃತಿ, ಭಾರತವರ್ಷ ಎಂದೂ ಈ ನೀತಿಯನ್ನು ಅನುಸರಿಸಲಿಲ್ಲ. ಮೇಲೆ ಹೆಸರಿಸಿದವರೆಲ್ಲ ಭಾರತವನ್ನು ಹಿಂಸಿಸಿದವರೇ. ಆದರೆ ಅವರೆಲ್ಲ ನೀರ ಮೇಲಣ ಗುಳ್ಳೆಯಾದರು. ದೋಚಿದ ಇಂಗ್ಲೆಂಡನ್ನು ದೋಚಲ್ಪಟ್ಟ ಭಾರತ ಆರ್ಥಿಕವಾಗಿ ಮೂಲೆಗೆ ತಳ್ಳಿ ಬಹುದಿನಗಳೇ ಆಯಿತು, ಅಸಮರ್ಥ ಆಡಳಿತದ ನಡುವೆಯೂ. ಇದಕ್ಕೆ ಕಾರಣ ಭಾರತದ ಮೂಲ ತತ್ವ ವಸುಧೈವ ಕುಟುಂಬಕಂ ಮತ್ತು ಕೃಣ್ವಂತೋ ವಿಶ್ವಂ ಆರ್ಯಂ ಎನ್ನುವ ಋಗ್ವೇದದ ಕರೆ; ಅರ್ಥಾತ್ ವಿಶ್ವವನ್ನೇ ಆರ್ಯರನ್ನಾಗಿಸೋಣ ಎನ್ನುವ ತತ್ವ. ಭಾರತ ಇದಕ್ಕಾಗಿ ಅನುಸರಿಸಿದ್ದು ಎಲ್ಲಾ ಮನುಷ್ಯರಲ್ಲಿರುವ ಸಾಮಾನ್ಯ ಲಕ್ಷಣಗಳು, ಸಾಮಾನ್ಯ ದೌರ್ಬಲ್ಯಗಳು, ಸ್ವಾಭಾವಿಕ ಶಕ್ತಿಗಳನ್ನು ಅಧ್ಯಯನ ಮಾಡಿ ಆ ಶಕ್ತಿಗಳನ್ನು ವೃದ್ಧಿಸುವ ಮತ್ತು ದೌರ್ಬಲ್ಯಗಳನ್ನು ಕುಗ್ಗಿಸುವ ಉಪಾಯಗಳನ್ನು ಕಂಡುಹಿಡಿದು ಇದರ ವಿವರಣೆಗಳನ್ನು ಎಲ್ಲೆಡೆ ವಿಸõತವಾಗಿ ಹರಡಿ ಅದರ ಅನುಯಾಯಿಗಳಲ್ಲಿ ವೈಶಾಲ್ಯ, ಆತ್ಮಭಾವ, ಸ್ವಾರ್ಥತ್ಯಾಗ ಮತ್ತು ದೈವೀಲಕ್ಷಣಗಳನ್ನು ಜಾಗೃತಗೊಳಿಸಿ, ತಾನು ಜಗತ್ತಿನ ರಾಜನಾಗಲು ಬಯಸದೇ ಜಗತ್ತಿನ ಗುರುವಾಗಬಯಸಿದ್ದು. ಇದರ ತಳಹದಿಯೇ ಸಹೋದರತೆ ಮತ್ತು ಪರಿಪೂರ್ಣ ಜ್ಞಾನದಿಂದ ಉದಯಿಸಿದ ಏಕತ್ವಭಾವ! ಈ ಮಹಾ ಮಂತ್ರಗಳೇ ಉದ್ಧಾರವಾಗಲು ಏಕಮೇವ ಮಾರ್ಗ. ಸೆ. 11ರಂದಿನ ವಿವೇಕಾನಂದರ ಜೈತ್ರ ಯಾತ್ರೆ ಪ್ರಾರಂಭಗೊಂಡಿದ್ದೇ ‘ಅಮೆರಿಕದ ಸೋದರ ಸೋದರಿಯರೇ’ ಎಂಬ ವಿಶ್ವಾತ್ಮ ಭಾವದೊಂದಿಗೆ. ಎರಡು ಮಹಾಯುದ್ಧಗಳ ನಂತರ ಸುಟ್ಟು ಬೂದಿಯಾಗುವ ಯುರೋಪ್ ತಲೆಯೆತ್ತಿ ನಿಲ್ಲಬೇಕಾದರೆ ಅದು ಉಪನಿಷತ್ ಚಿಂತನೆಯನ್ನೇ ಅನುಸರಿಸಬೇಕಾಗಿದೆ ಎಂಬ ವಿವೇಕವಾಣಿಯ ಅಸ್ಪಷ್ಟ (್ಠಜಿಞಛ್ಞಿಠಿಚ್ಟಢ) ರೂಪವೇ ಇಂದಿನ ಯೂರೋಪಿಯನ್ ಯೂನಿಯನ್. ಇದು ಒಂದು ರೀತಿಯಲ್ಲಿ ಭಾರತದ ‘ವೈವಿಧ್ಯತೆಯಲ್ಲಿ ಏಕತೆ’ ಎಂಬುದರ ಮತ್ತೊಂದು ಅನಾವರಣ. ಈ ತತ್ವಗಳೆಲ್ಲ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಆಡಳಿತ ಯಂತ್ರಗಳ ದಿಕ್ಸೂಚಿಗಳಾಗಬೇಕು. ಸೆ. 11ಕ್ಕೆ ನಾವು ಭಾವಿಸಿರುವುದಕ್ಕಿಂತ ಸಹಸ್ರಪಾಲು ಹೆಚ್ಚಿನ ಮಹತ್ವವಿದೆ. ಈ ತತ್ವಗಳ ವ್ಯವಸ್ಥಿತ ಮತ್ತು ವಿಸõತ ಅಧ್ಯಯನ, ಶಾಂತಿ, ಸಹನೆ, ಸೋದರಭಾವದ ಮೇಲೆ ನಿಂತ ಅಭಿವೃದ್ಧಿಯ ರಾಜಮಾರ್ಗವಾಗಬಲ್ಲದು, ಮೂಲಮಂತ್ರವಾಗಬಲ್ಲದು. ಸರ್ವಾಂಗೀಣ ಅಭಿವೃದ್ಧಿ ಕೇವಲ ಶಾಂತಿಕಾಲದಲ್ಲಿ ಮಾತ್ರ ಉದಯಿಸಬಲ್ಲದು. ಯಾವ ಪ್ರಕ್ಷುಬ್ಧತೆಯೂ ಅಭಿವೃದ್ಧಿಗೆ ಮಾರಕವೇ. ಪ್ರಜ್ಞಾವಂತ ದೇಶಗಳು ಇದನ್ನು ಅರಿಯಬೇಕು; ಅರಿತು ನಡೆಯಬೇಕು.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)