ಬೆಂಗಳೂರು: ದೇಶದಲ್ಲೇ ಅತ್ಯಂತ ಶ್ರೀಮಂತ ನಗರ ಬೆಂಗಳೂರು ಸಮಗ್ರ ಅಭಿವೃದ್ಧಿಯಾಗಿ ಜಾಗತಿಕ ಹೀರೋ ಆಗಬೇಕು ಎನ್ನುವುದಷ್ಟೇ ನಮ್ಮ ಬಯಕೆ ಎಂದು ಐಟಿ ಕ್ಷೇತ್ರದ ಉದ್ಯಮಿ ಟಿ.ವಿ.ಮೋಹನ್‌ದಾಸ್ ಪೈ ತಮ್ಮ ಅಭಿಲಾಷೆ ತೋಡಿಕೊಂಡರು.
ಬೆಂಗಳೂರಿನ ಸದಾಶಿವನಗರದ ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಮೋಹನ್‌ದಾಸ್ ಪೈ ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಸಮಸ್ಯೆ ಬಗ್ಗೆ ಪೈ ಟೀಕೆ, ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು, ರಾಜಕೀಯ ಬನ್ನಿ ಎಂಬ ಡಿಕೆಶಿ ಕುಟುಕಿನಿಂದ ಕಾವೇರಿತ್ತು.
ಇದರ ಬೆನ್ನಲ್ಲೇ ಡಿಕೆಶಿಗೆ ಪೈ ಖುದ್ದು ಭೇಟಿ ಗಮನಸೆಳೆಯಿತು. ಡಿಸಿಎಂ ಭೇಟಿ ಮತ್ತು ಮಾತುಕತೆ ಬಗ್ಗೆ ನಂತರ ಸುದ್ದಿಗಾರರಿಗೆ ಮೋಹನ್‌ದಾಸ್ ಪೈ ಪ್ರತಿಕ್ರಿಯಿಸಿ, ಬೆಂಗಳೂರು ಅಭಿವೃದ್ಧಿ ವಿಚಾರವೇ ಈ ಭೇಟಿ ಮುಖ್ಯ ಉದ್ದೇಶವಾಗಿತ್ತು ಎಂದರು.
ಡಿ.ಕೆ.ಶಿವಕುಮಾರ್‌ಗೆ ಅವರದ್ದೇ ಆದ ಪರಿಕಲ್ಪನೆ, ಕನಸುಗಳಿವೆ. ಬೆಂಗಳೂರು ನಿಮ್ಮದಷ್ಟೇ ಅಲ್ಲ, ನಮ್ಮದು ಎಂಬ ಹೆಮ್ಮೆಯಿದೆ. ‘ಬ್ರ್ಯಾಂಡ್ ಬೆಂಗಳೂರು’ ಕುರಿತು ಚರ್ಚಿಸಿದ್ದು, ಎಲ್ಲ ವಲಯಗಳಲ್ಲಿ ಬೆಂಗಳೂರು ತ್ವರಿತವಾಗಿ ಬೆಳೆಯುತ್ತಿದೆ.
ರಸ್ತೆ, ುಟ್‌ಪಾತ್, ಮೂಲಸವಲತ್ತು ಸುಧಾರಣೆ, ಮೆಟ್ರೋ ಜಾಲ ಪೂರ್ಣಗೊಳಿಸುವುದು ಸೇರಿ ಅಗತ್ಯವಿರುವ ಅಭಿವೃದ್ಧಿ ಕೆಲಸಗಳಾಗಿ ಬೆಂಗಳೂರು ಜಾಗತಿಕವಾಗಿ ಉತ್ತಮವಾಗಬೇಕು ಎಂದು ಹೇಳಿದ್ದೇವೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿ, ಏಳೆಂಟು ತಿಂಗಳಿನಲ್ಲಿ ಬೆಂಗಳೂರು ಅಭಿವೃದ್ಧಿಯಾಗಲಿದೆ ನೋಡುತ್ತಿರಿ ಎಂಬ ಖಚಿತ ವಿಶ್ವಾಸದ ಮಾತುಗಳನ್ನಾಡಿದ್ದಾರೆ ಎಂದು ಮೋಹನ್ ದಾಸ್ ಪೈ ಹೇಳಿದರು.
ಅಭಿವೃದ್ಧಿ ಕುರಿತು ಸಲಹೆ, ಸಮಸ್ಯೆಗಳನ್ನು ಎತ್ತಿ ತೋರಿಸಿದಾಗ ಕೆಲವರು ಪಾಸಿಟಿವ್ ಆಗಿ ಸ್ವೀಕರಿಸುತ್ತಾರೆ. ಇನ್ನೂ ಕೆಲವರು ಟೀಕಿಸುತ್ತಾರೆ ಇದೆಲ್ಲ ಸಹಜ. ನಾನು ಅಭಿಪ್ರಾಯ ವ್ಯಕ್ತಪಡಿಸುವುದು, ಮಾತನಾಡುವುದು ಇದೇ ಮೊದಲಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೇನೆ.
ಎಲ್ಲ ಸಿಎಂಗಳು ಕರೆದು ಬೆಂಗಳೂರು ಅಭಿವೃದ್ಧಿ ಬಗ್ಗೆ ನನ್ನ ಅಭಿಪ್ರಾಯ ಕೇಳಿದ್ದಾರೆ. ಬೆಂಗಳೂರು ನಮ್ಮ ನಗರ ನಾವು ಮಾತನಾಡುತ್ತೇವೆ. ಅಂತಾರಾಷ್ಟ್ರೀಯಮಟ್ಟದಲ್ಲಿ ಗಮನಸೆಳೆದಿದ್ದು, ಇಲ್ಲಿರುವ ಸಾಮರಸ್ಯ ಬೇರೆಲ್ಲಿಯೂ ಇಲ್ಲ.
ಭಾರತದ ಬೇರೆ ಯಾವುದೇ ಸಿಟಿ ಅಭಿವೃದ್ಧಿ ಕುರಿತು ಕೇಳುವುದಿಲ್ಲ. ನಮ್ಮ ನಗರ ಬೆಂಗಳೂರು ವಿಶ್ವ ಭೂಪಟದಲ್ಲಿ ಸದಾ ಮಿನುಗುತ್ತಿರಬೇಕು, ಅಭಿವೃದ್ಧಿ ವಿಚಾರದಲ್ಲಿ ಹೀರೋ ಆಗಿರಬೇಕು ಎನ್ನುವುದು ನಮ್ಮ ಬಯಕೆಯಾಗಿದೆ ಎಂದು ಟಿ.ವಿ.ಮೋಹನ್‌ದಾಸ್ ಪೈ ಹೇಳಿದರು.