ನ್ಯೂಸ್

2024-25ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ಪಟ್ಟಿ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು: 2024-25ನೇ ಸಾಲಿನ ವಿವಿಧ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ಪಟ್ಟಿಯನ್ನು ರಾಜ್ಯ ಸರ್ಕಾರ ಇಂದು ಬಿಡುಗಡೆ ಮಾಡಿದೆ. ಧಾರವಾಡದ ಡಾ. ಎಸ್​. ಆರ್​. ಗುಂಜಾಳ ಅವರು ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾದರೆ, ವಿಜಯನಗರದ ಕೆ. ನಾಗರತ್ನಮ್ಮ ಅವರಿಗೆ ಡಾ. ಗುಬ್ಬಿವೀರಣ್ಣ ಪ್ರಶಸ್ತಿ ಲಭಿಸಿದೆ. ಯಾರೆಲ್ಲಾ ಈ ಸಾಧಕರ ಪಟ್ಟಿಯಲ್ಲಿದ್ದಾರೆ ಎಂಬುದರ ವಿವರ ಈ ಕೆಳಕಂಡಂತಿದೆ.

1. ಬಸವ ರಾಷ್ಟ್ರೀಯ ಪುರಸ್ಕಾರ: ಡಾ. ಎಸ್‌. ಆರ್‌. ಗುಂಜಾಳ

ಡಾ.ಎಸ್.‌ ಆರ್.‌ ಗುಂಜಾಳ ಅವರು ಧಾರವಾಡ ಜಿಲ್ಲೆ ಕೋಳಿವಾಡ ಗ್ರಾಮದಲ್ಲಿ 1932ರಲ್ಲಿ ಜನಿಸಿದರು. ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ವಿವಿಧ ಹಂತಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿರುವರಲ್ಲದೆ ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಶರಣ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ರಚನೆ ಮಾಡಿರುತ್ತಾರೆ.

ಬಸವ ಸಾಹಿತ್ಯ ದರ್ಪಣ, ಬಸವ ಚಿಂತನ, ವಚನಕಾರರು ಮತ್ತು ವಚನಾಂಕಿತರು, ಸಮೃದ್ಧ ವಚನ ಸಾಹಿತ್ಯ, ವಚನಗಳ ಶುದ್ಧೀಕರಣ ಬಸವಣ್ಣನವರ ವಚನ ಪದಪ್ರಯೋಗ ಕೋಶ, ಹೀಗೆ ವಚನಕಾರರು ಮತ್ತು ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಶರಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಸೇರಿ ಹತ್ತಾರು ಗೌರವಗಳಿಂದ ಭೂಷಿತರು.

2. ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ: ಪಂಡಿತ ರತ್ನ ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್‌, ಬೆಂಗಳೂರು

1988ರಲ್ಲಿ ಸ್ಥಾಪಿತವಾದ ಈ ಸಂಸ್ಥೆಯು 9ನೇ ಶತಮಾನದ ಮೇರುಕೃತಿ ʻಮಹಾಪುರಾಣ; ಸೇರಿದಂತೆ 82 ಗ್ರಂಥಗಳನ್ನು ಪರಿಶೀಲಿಸಿ, ಪರಿಷ್ಕರಿಸಿ ಪ್ರಕಟಿಸಿದೆ. ತ್ಯಾಗ ಸಂದೇಶ, ಅಹಿಂಸೆ, ಶಾಂತಿಶ್ರೀ, ವೃಷಭಶ್ರೀ, ಭವನಶ್ರೀ ಇತ್ಯಾದಿ 32ಕ್ಕೂ ಹೆಚ್ಚು ಸ್ಮರಣ ಸಂಚಿಕೆಗಳ ಸಂಪಾದನೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಔಷಧದಾನ, ದಾಸೋಹ ಇತ್ಯಾದಿ ಸೇವೆ, ಕನ್ನಡದಲ್ಲಿ ಅಂತರ್ಜಲ ಹಾಗೂ ಡ್ರಿಲ್ಲಿಂಗ್‌ ವಿಷಯವಾಗಿ ಹಲವು ವೈಜ್ಞಾನಿಕ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆ, ವಿಕಲಾಂಗ/ಬುದ್ಧಿಮಾಂದ್ಯ ಹೆಣ್ಣುಮಕ್ಕಳಿಗೆ ಸಹಾಯಧನ ಮತ್ತು ಆದರ್ಶ ಜೈನ ಮಹಿಳಾ ರತ್ನ ಯೋಜನೆಯ ಅನುಷ್ಠಾನ ಇತ್ಯಾದಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುತ್ತಿದೆ. ಹಲವಾರು ಸಂಘ-ಸಂಸ್ಥೆಗಳ ಪ್ರಶಸ್ತಿ-ಗೌರವಗಳಿಗೆ ಭಾಜನವಾಗಿದೆ.

3. ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ: ಶ್ರೀ ಬಸಪ್ಪ ಎಚ್‌. ಭಜಂತ್ರಿ

ನಾಡಿನ ಖ್ಯಾತ ಹಿಂದೂಸ್ತಾನಿ ಕ್ಲಾರಿಯೋನೆಟ್‌, ಶಹನಾಯಿ ಮತ್ತು ಸ್ಯಾಕ್ಸಫೋನ್‌ ಕಲಾವಿದರಾದ ‍ಶ್ರೀ ಬಸಪ್ಪ ಎಚ್.‌ ಭಜಂತ್ರಿಯವರು ಕಳೆದ 65 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು. ನಾಡಿನ ಹಲವಾರು ಪ್ರತಿಷ್ಠಿತ ನಾಟಕ ಕಂಪನಿಗಳಿಗೆ ಸುಮಾರು 25 ವರ್ಷಗಳ ಕಾಲ ವಿವಿಧ ವಾದ್ಯಗಳ ವಾದಕರಾಗಿ ಸೇವೆ ಸಲ್ಲಿಸಿದ್ದಾರೆ. ದೇಶದ ಹಲವಾರು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ, ಬಿಸ್ಮಿಲ್ಲಾಖಾನ್‌ ಪ್ರಶಸ್ತಿ, ಇತ್ಯಾದಿ ಪ್ರಶಸ್ತಿಗಳಿಗೆ ಭಾಜನರು.

4. ಗಾನಯೋಗಿ ಪಂಡಿತ್‌ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ: ಶ್ರೀಮತಿ ಬೇಗಂ ಪರ್ವೀನ್‌ ಸುಲ್ತಾನಾ

ಶ್ರೀಮತಿ ಬೇಗಂ ಪರ್ವಿನ್‌ ಸುಲ್ತಾನಾ ಅವರು ಅಸ್ಸಾಂ ಮೂಲದ ಖ್ಯಾತ ಹಿಂದೂಸ್ತಾನಿ ಗಾಯಕರು. ಪಟಿಯಾಲ ಘರಾಣದ ಶಾಸ್ತ್ರೀಯ ಹಿಂದೂಸ್ತಾನಿ ಗಾಯಕಿ. 1962ರಿಂದಲೂ ಸಂಗೀತ ಕಛೇರಿಗಳನ್ನು ನೀಡುತ್ತಿದ್ದು, 1965ರಿಂದಲೇ ಧ್ವನಿಮುದ್ರಣ ಮಾಡಲು ಆರಂಭಿಸಿದ ಇವರು ಅನೇಕ ಹಿಂದಿ ಚಲನಚಿತ್ರಗಳಲ್ಲಿ ಕೂಡಾ ಹಾಡಿದ್ದಾರೆ. ದೇಶವಿದೇಶಗಳಲ್ಲಿ ತಮ್ಮ ಸಂಗೀತ ಕಛೇರಿಯನ್ನು ನೀಡಿದ್ದಾರೆ ಹಾಗೂ ಮುಂಬೈಯಲ್ಲಿ ʼಘನ್‌ ರಂಗ ಸಂಗೀತ ಸಭಾʼ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇವರು ಪದ್ಮಶ್ರೀ ಪ್ರಶಸ್ತಿ, ಮಿಯಾನ್‌ ತಾನ್ಸೇನ್‌ ಪ್ರಶಸ್ತಿ, ಅಸ್ಸಾಂ ಸರ್ಕಾರದ ಸಂಗೀತ ಸಾಮ್ರಾಜ್ಞಿ ಪ್ರಶಸ್ತಿ, ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳಿಗೆ ಭಾಜನರು.

5. ಸಂಗೊಳ್ಳಿ ರಾಯಣ್ಣ ಪ್ರಶಸ್ತಿ: ಶ್ರೀ ಕೆ. ರಾಜಕುಮಾರ್‌

ಶ್ರೀ ಕೆ. ರಾಜಕುಮಾರ್‌ ರವರು ಕಳೆದ 45 ವರ್ಷಗಳಿಂದ ನಾಡು-ನುಡಿ, ನೆಲ-ಜಲ-ಸಂಸ್ಕೃತಿಯ ಕುರಿತು ನಿರಂತರವಾಗಿ ಸೇವೆ ಸಲ್ಲಿಸುತ್ತಾ, ಅವುಗಳ ಸಂರಕ್ಷಣೆಗಾಗಿ ಹಲವಾರು ಹೋರಾಟಗಳಲ್ಲಿ ಹಾಗೂ ವಿವಿಧ ಚಳವಳಿಗಳಲ್ಲಿ ಭಾಗಿಯಾಗಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ಭಾಷಾಭಾರತಿ ಪ್ರಾಧಿಕಾರಗಳಲ್ಲಿ ಪ್ರಶಸ್ತಿಗಳ ಆಯ್ಕೆ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಕನ್ನಡ ಅನುಷ್ಠಾನದ ಕುರಿತಾದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಆಡಳಿತ ಕನ್ನಡ ಕಾರ್ಯಶಿಬಿರಗಳ ನಿರ್ದೇಶಕರಾಗಿ, ಕನ್ನಡ ಬಾರದವರಿಗೆ ಕನ್ನಡ ಬೋಧನೆ ತರಗತಿಗಳನ್ನು ನಡೆಸಿದ್ದಾರೆ. ಇಂದಿಗೂ ಕನ್ನಡ ಭಾಷೆಯ ಕುರಿತಂತೆ ಕರೆಮಾಡಿ ಮಾಹಿತಿ ಕೋರುವವರಿಗೆ ಉಚಿತ ಮಾರ್ಗದರ್ಶನ ನೀಡುತ್ತಿದಾರೆ. ಇವರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಡಾ|| ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಪ್ರಕಾಶಕರ ಸಂಘದಿಂದ ಶ್ರೇಷ್ಠ ಸಾಹಿತ್ಯ ಪರಿಚಾರಕ ಪ್ರಶಸ್ತಿ ಇತ್ಯಾದಿ ಗೌರವಗಳು ಲಭಿಸಿವೆ.

6. ಅಕ್ಕಮಹಾದೇವಿ ಪ್ರಶಸ್ತಿ: ಡಾ. ಹೇಮಾ ಪಟ್ಟಣಶೆಟ್ಟಿ, ಧಾರವಾಡ

ಡಾ. ಹೇಮಾ ಪಟ್ಟಣಶೆಟ್ಟಿಯವರು ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಂತ ಲೇಖಕಿಯಾಗಿ, ಅನುವಾದಕಿಯಾಗಿ, ರಂಗನಟಿಯಾಗಿ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಪ್ರಸಿದ್ಧರಾಗಿದ್ದಾರೆ. 1979ರಲ್ಲಿ ಅನನ್ಯ ಪ್ರಕಾಶನವನ್ನು ಸ್ಥಾಪಿಸಿ ಕನ್ನಡದ ಖ್ಯಾತ ಲೇಖಕರ 85 ಕೃತಿಗಳನ್ನು ಪ್ರಕಟಿಸಿದ್ದಾರೆ. ನೊಂದ ಮಹಿಳೆಯರಿಗಾಗಿ ʼಸಾಂತ್ವನʼ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅನೇಕ ಮಹಿಳಾಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ʼವೇಶ್ಯೆಯರು, ಬಾಲವೇಶ್ಯೆಯರು ಮತ್ತು ವೇಶ್ಯಾಮಕ್ಕಳ ಅಧ್ಯಯನʼ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಕರ್ನಾಟಕದ ಸರ್ಕಾರದ ʼಜಲಸಂವರ್ಧನೆ ಯೋಜನಾ ಕೇಂದ್ರʼದ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಹಲವಾರು ಕೃತಿಗಳು ಹಿಂದಿ, ತೆಲುಗು, ಉರ್ದು, ಇಂಗ್ಲಿಷ್‌ ಮತ್ತು ಗುಜರಾತಿ ಭಾಷೆಗಳಿಗೆ ಅನುವಾದವಾಗಿವೆ.

7. ಪಂಪ ಪ್ರಶಸ್ತಿ: ಡಾ. ಬಿ.ಎ. ವಿವೇಕ ರೈ, ದಕ್ಷಿಣ ಕನ್ನಡ

ಕನ್ನಡದ ಖ್ಯಾತ ಸಂಶೋಧಕರಾದ ಡಾ. ಬಿ.ಎ. ವಿವೇಕ ರೈ ಅವರು ಸಂಸ್ಕೃತಿ ಚಿಂತಕರು, ವಿಮರ್ಶಕರು, ಅನುವಾದಕರು ಹಾಗೂ ಜಾನಪದ ವಿದ್ವಾಂಸರಾಗಿದ್ದಾರೆ. ಕಳೆದ 54 ವರ್ಷಗಳಿಂದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ-ತುಳು ಭಾಷೆಯ ಭಾಷಾ ಅಧ್ಯಯನದ ಮಾದರಿಗಳನ್ನು ರೂಪಿಸುವ ಮೂಲಕ ಆ ಭಾಷೆಗಳ ಆಂತರಿಕ ಶಕ್ತಿ-ಸಂಪತ್ತನ್ನು ಸಂವರ್ಧಿಸಿದ ವಿದ್ವಾಂಸರು. 12ಕ್ಕೂ ಹೆಚ್ಚು ಮಹತ್ವದ ಕೃತಿಗಳು, ಕಾದಂಬರಿಗಳು, ಹಲವಾರು ಕೃತಿಗಳ ಸಂಪಾದನೆ, ತುಳು ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಸಾಹಿತ್ಯ ರಚನೆ, ಕನ್ನಡ ಸಾಹಿತ್ಯದ ಜರ್ಮನ್‌ ಅನುವಾದ ಹೀಗೆ ವಿಪುಲವಾಗಿ ಸಾಹಿತ್ಯ ಸೇವೆ ಮಾಡಿದ್ದಾರೆ. ಜರ್ಮನಿಯ ವ್ಯೂತ್‌ಬರ್ಗ್‌ ವಿಶ್ವವಿದ್ಯಾಲಯದ ಅತಿಥಿ ಪ್ರಾಧ್ಯಾಪಕರಾಗಿದ್ದಾರೆ. ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿ, ಸಮ್ಮಾನಗಳು ಲಭಿಸಿವೆ.

8. ಪ್ರೊ.ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಶ್ರೀ ಸ. ರಘುನಾಥ, ಕೋಲಾರ

ವಿಶ್ರಾಂತ ಶಾಲಾಶಿಕ್ಷಕರಾದ ಶ್ರೀ ಸ. ರಘುನಾಥರವರು ಬಹುಮುಖ ಪ್ರತಿಭೆ, ಬಹುಸ್ತರಗಳ ಸಾಧಕ. ಅಧ್ಯಯನ, ಅಧ್ಯಾಪನಗಳ ಜೊತೆಗೆ ಸಾಹಿತ್ಯಕೃಷಿಯನ್ನೂ ಮೈಗೂಡಿಸಿಕೊಂಡವರು. ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜನಪದ ಸಾಹಿತ್ಯ ಸಂಗ್ರಹ, ಗ್ರಂಥ ಸಂಪಾದನೆ, ಶಿಶುಸಾಹಿತ್ಯ ಮತ್ತು ನಿಘಂಟು ರಚನೆಗಳಲ್ಲಿ ತೊಡಗಿಕೊಂಡಿದ್ದಾರೆ. ಸಮಾಜಸೇವಕರು, ಪರಿಸರ ಪ್ರೇಮಿಗಳು, ಕಲಾಸಂಘಟಕರೂ ಹೌದು. ಮುದ್ದಣ ಕಾವ್ಯ ಪ್ರಶಸ್ತಿ, ಅನುವಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳಿಗೆ ಭಾಜನರು.

9. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಡಾ. ವೈ.ಸಿ. ಭಾನುಮತಿ, ಹಾಸನ

ಡಾ. ವೈ.ಸಿ. ಭಾನುಮತಿಯವರು ಪ್ರಾಚೀನ ಸಾಹಿತ್ಯ ಮತ್ತು ಜಾನಪದ ಗ್ರಂಥ ಸಂಪಾದನೆ ಜೊತೆಗೆ ಸಂಶೋಧನಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಜಾನಪದ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಹಲವಾರು ಗೌರವ-ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಇತ್ಯಾದಿ ಪ್ರಶಸ್ತಿಗಳು ಇವರಿಗೆ ಸಂದಿವೆ.

10. ಬಿ.ವಿ. ಕಾರಂತ ಪ್ರಶಸ್ತಿ: ಶ್ರೀ ಜೆ. ಲೋಕೇಶ್‌, ಬೆಂಗಳೂರು

ಶ್ರೀ ಜೆ. ಲೋಕೇಶ್‌ರವರು ರಂಗ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿ 1972 ರಲ್ಲಿ ʼರಂಗಸಂಪದʼ ನಾಟಕ ಸಂಸ್ಥೆಯನ್ನು ಕಟ್ಟಿಬೆಳೆಸಿದವರಲ್ಲಿ ಒಬ್ಬರು. ಶಕಶೈಲೂಷರು ಶಿಬಿರಾರ್ಥಿಗಳ ತಂಡ ಕಟ್ಟಿ ಹಲವಾರು ರಂಗನಾಟಕಗಳ ಯಶಸ್ವೀ ರಂಗಪ್ರಯೋಗ ಮಾಡಿದ್ದಾರೆ. ರಾಜ್ಯಾದ್ಯಂತ ನಾಟಕೋತ್ಸವಗಳನ್ನು ಏರ್ಪಡಿಸಿ ಪ್ರದರ್ಶಿಸಿದ ಕೀರ್ತಿ ಇವರದು. ನಾಟಕದ ಸಾಹಿತ್ಯ ರಚನೆ, ಪ್ರಕಟಣೆ, ಪ್ರಯೋಗ, ಸಂಕಿರಣ, ಪ್ರದರ್ಶನ ಸಮ್ಮೇಳನ ಚಳವಳಿಗಳ ರೂವಾರಿಗಳು. ಕೆನಡಾದಲ್ಲಿ ನಡೆದ 21ನೇ ಅಂತಾರಾಷ್ಟ್ರೀಯ ರಂಗಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ ಹಾಗೂ ಮತ್ತಿತರ ಪ್ರಶಸ್ತಿಗಳಿಗೆ ಭಾಜನರು.

11. ಡಾ. ಗುಬ್ಬಿವೀರಣ್ಣ ಪ್ರಶಸ್ತಿ: ಶ್ರೀಮತಿ ಕೆ. ನಾಗರತ್ನಮ್ಮ, ಮರಿಯಮ್ಮನಹಳ್ಳಿ, ವಿಜಯನಗರ

ಶ್ರೀಮತಿ ಕೆ. ನಾಗರತ್ನಮ್ಮನವರು ಗ್ರಾಮೀಣ ರಂಗಭೂಮಿಯ ಅಪ್ಪಟ ಪ್ರತಿಭಾವಂತ ನಟಿ. ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಕಳೆದ 35 ವರ್ಷಗಳಿಂದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಲಲಿತಕಲಾ ರಂಗ ಹಾಗೂ ಮಹಿಳಾ ವೃತ್ತಿ ರಂಗ ಕಲಾವಿದರ ಸಂಘದ ಸ್ಥಾಪಕ ಸದಸ್ಯರಾಗಿದ್ದಾರೆ. ಇವರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ಭಾರ್ಗವ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ-ಗೌರವಗಳಿಗೆ ಭಾಜನರು.

12. ಡಾ. ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ: ಡಾ. ಎಲ್. ಹನುಮಂತಯ್ಯ, ಬೆಂಗಳೂರು

ಡಾ. ಎಲ್‌. ಹನುಮಂತಯ್ಯನವರು ರಾಜಕಾರಣಿಯಾಗಿರುವಂತೆಯೇ ಪ್ರಸಿದ್ಧ ಕವಿಗಳು, ಸೃಜನಶೀಲ ಸಾಹಿತಿ, ವಾಗ್ಮಿ ಹಾಗೂ ವಿಮರ್ಶಕರೂ ಆಗಿದ್ದಾರೆ. ಜನಪರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಇವರು ಸುಮಾರು 15ಕ್ಕೂ ಹೆಚ್ಚಿನ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕೃತಿಗಳನ್ನು ರಚಿಸಿದ್ದು, ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ಇವರು ಸಾಹಿತ್ಯ ಪರಿಷತ್‌ ದತ್ತಿ ಪ್ರಶಸ್ತಿ, ಅಂಬೇಡ್ಕರ್‌ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪುಸ್ತಕ ಬಹುಮಾನ ಹಾಗೂ ಗೌರವ ಪ್ರಶಸ್ತಿ, ಕುವೆಂಪು ಪ್ರಶಸ್ತಿ ಮತ್ತಿತರೆ ಪ್ರಶಸ್ತಿಗಳಿಗೆ ಭಾಜನರು.

13. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ:  ಶ್ರೀಮತಿ ಎಂ.ಜೆ. ಕಮಲಾಕ್ಷಿ, ಬೆಂಗಳೂರು

ಪ್ರೊ. ಎಂ.ಜೆ. ಕಮಲಾಕ್ಷಿಯವರು ಕರ್ನಾಟಕದಾದ್ಯಂತ ಸಾಂಪ್ರದಾಯಿಕ ಮತ್ತು ಚರ್ಮದ ಬೊಂಬೆಯಾಟದ ವರ್ಣಚಿತ್ರಗಳನ್ನು ವ್ಯಾಪಕವಾಗಿ ಸಂಗ್ರಹಿಸಿ, ಸಮೀಕ್ಷೆ ಮಾಡಿದ್ದಾರೆ. ನವದೆಹಲಿಯಲ್ಲಿ ನಡೆದ ಅನೇಕ ಕಲಾಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಗಾಗಿ ಶ್ರವಣಬೆಳಗೊಳದಲ್ಲಿನ ಭಿತ್ತಿಚಿತ್ರಗಳನ್ನು ನಕಲು ಮಾಡಿದ್ದಾರೆ.

14. ಜಕಣಚಾರಿ ಪ್ರಶಸ್ತಿ: ಶ್ರೀ ಎಂ. ರಾಮಮೂರ್ತಿ, ಬೆಂಗಳೂರು

ಶ್ರೀ ಎಂ. ರಾಮಮೂರ್ತಿಯವರು ಕಳೆದ ನಾಲ್ಕು ದಶಕಗಳಿಂದ ಶಿಲ್ಪಶಾಸ್ತ್ರದಲ್ಲಿ ಅನುಭವ ಗಳಿಸಿಕೊಂಡವರು.

ಮರಕೆತ್ತನೆಯ ಜೊತೆಗೆ ಕಲ್ಲು ಹಾಗೂ ಮಣ್ಣಿನ ಕರಕುಶಲ ವಸ್ತುಗಳ ತಯಾರಿಸುವಿಕೆಯಲ್ಲೂ ನೈಪುಣ್ಯತೆ ಗಳಿಸಿದ್ದಾರೆ. ಅನೇಕ ದೇಶಗಳಿಗೆ ಅಧ್ಯಯನ ಪ್ರವಾಸ ಮಾಡಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ 18ನೇ ವಾರ್ಷಿಕ ಕಲಾ ಪ್ರದರ್ಶನದ ಬಹುಮಾನ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ವಿಶ್ವಕರ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

15. ಜಾನಪದ ಶ್ರೀ ಪ್ರಶಸ್ತಿ (2)ಶ್ರೀ ನಿಂಗಪ್ಪ ಭಜಂತ್ರಿ, ಕಲಬುರಗಿ (ವಾದನ)

ಶ್ರೀ ನಿಂಗಪ್ಪ ರಾಮಚಂದ್ರಪ್ಪ ಭಜಂತ್ರಿಯವರು ತಮ್ಮ ಮನೆತನದ ಕುಲಕಸುಬಾದ ಶಹನಾಯಿ ವಾದ್ಯದ ವಾದನದಲ್ಲಿ ನಿಷ್ಣಾತರಾಗಿದ್ದಾರೆ. ಸುಮಾರು 60 ವರ್ಷಗಳಿಂದ ಶಹನಾಯಿ ವಾದನ ಮಾಡುತ್ತಿದ್ದು ಪ್ರತಿವರ್ಷ ಚಂದ್ರಲಾಪರಮೇಶ್ವರಿ ಸನ್ನತಿ ದೇವಾಲಯದಲ್ಲಿ ವರ್ಷಕ್ಕೆ ಎರಡು ಬಾರಿ 10 ದಿನಗಳ ಕಾಲ ಪೂಜಾ ಸಂದರ್ಭದಲ್ಲಿ ಶಹನಾಯಿ ವಾದ್ಯ ನುಡಿಸುತ್ತಾರೆ. ರಾಜ್ಯ, ಹೊರರಾಜ್ಯಗಳಲ್ಲಿಯೂ ಶಹನಾಯಿ ವಾದನ ಸೇವೆ ಸಲ್ಲಿಸುತ್ತಾರೆ.

16. ಶ್ರೀ ದೊಡ್ಡ ಗವಿಬಸಪ್ಪ, : ಚಾಮರಾಜನಗರ (ಗಾಯನ)

ಶ್ರೀ ದೊಡ್ಡ ಗವಿಬಸಪ್ಪನವರು ನೀಲಗಾರರ ಪದಗಳ ಮೂಲಕ ಹಾಡು ಮತ್ತು ನರ್ತನಗಳನ್ನು ಮಾಡುತ್ತಾ ಜನಪದ ಕತೆಗಳನ್ನು ಹಾಡುವ ವಿಶಿಷ್ಟ ವೃತ್ತಿನಿರತ ಜನಪದ ಗಾಯಕರು. ಇವರು ಗುಂಪುಗಳಾಗಿ ಊರೂರು ಸುತ್ತುತ್ತಾ, ನೀಲಗಾರರ ತಂಬೂರಿ ಶೈಲಿಯ ಜನಪದ ಕಾವ್ಯಗಳನ್ನು ಹಾಡುತ್ತಾ, ಭಿಕ್ಷಾಟನೆ ಮಾಡುತ್ತಾರೆ. 1995ರಿಂದ ನಿರಂತರವಾಗಿ ಕಂಸಾಳೆಯೊಂದಿಗೆ, ನೀಲಗಾರರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.

17. ಶ್ರೀ ನಿಜಗುಣ-ಪುರಂದರ ಪ್ರಶಸ್ತಿ: ಶ್ರೀ ಅನಂತ ತೇರದಾಳ, ಬೆಳಗಾವಿ (ಹಿಂದೂಸ್ಥಾನಿ ಗಾಯನ)

ಶ್ರೀ ಅನಂತ ತೇರದಾಳ ಅವರು ನಾಡಿನ ಪ್ರಖ್ಯಾತ ಹಿಂದೂಸ್ಥಾನಿ ಗಾಯಕರಾಗಿದ್ದು, ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ ಮಂಡಲದ ಸಂಗೀತ ವಿಶಾರದ ಪದವಿ ಗಳಿಸಿದ್ದಾರೆ. ದೇಶಾದ್ಯಂತ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ ಹಾಗೂ ಪ್ರಖ್ಯಾತ ಕಲಾವಿದರಿಂದ ಪ್ರಶಂಸೆ ಪಡೆದಿದ್ದಾರೆ.= ಶ್ರೀಯುತರು ಕೇವಲ ಶಾಸ್ತ್ರೀಯ ಗಾಯನವಲ್ಲದೆ ಠುಮ್ರಿ, ನಾಟ್ಯಗೀತೆ, ಭಕ್ತಿಗೀತೆ, ದೇವರನಾಮಗಳನ್ನೂ ಹಾಡುವುದರಲ್ಲಿ ಪ್ರಸಿದ್ಧರು. ಇವರಿಗೆ ಮುಂಬೈನ ಸುರಸಿಂಗಾರ್‌ ಸಂಸದ್‌ನ ʼಸೂರಮಣಿʼ ಪ್ರಶಸ್ತಿ ಲಭಿಸಿದೆ.

18. ಕುಮಾರವ್ಯಾಸ ಪ್ರಶಸ್ತಿ: ಡಾ. ಎ.ವಿ. ಪ್ರಸನ್ನ, ಹಾಸನ (ಗಮಕ ವ್ಯಾಖ್ಯಾನ)

ಶಾಸ್ತ್ರೀಯ ಸಂಗೀತ ಮತ್ತು ಸಾಹಿತ್ಯಗಳ ಕುರಿತು ಆಸಕ್ತಿ ಹೊಂದಿರುವ ಶ್ರೀ ಪ್ರಸನ್ನರವರು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಹಳೆಗನ್ನಡದ ಹಲವು ಮೌಲಿಕ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಮ್ಮೇಳನಗಳಲ್ಲಿ, ಆಕಾಶವಾಣಿ-ದೂರದರ್ಶನಗಳಲ್ಲಿ ನಮ್ಮ ಕನ್ನಡದ ಪ್ರಾಚೀನ ಕವಿಗಳ ಕಾವ್ಯಗಳ ವ್ಯಾಖ್ಯಾನಗಳನ್ನು ನೀಡಿದ್ದಾರೆ. ತಿಮ್ಮಣ್ಣಕವಿ ಮತ್ತು ಕುಮಾರವ್ಯಾಸರ ಭಾರತಗಳನ್ನು ಪರಿಷ್ಕರಿಸಿ ʼಕನ್ನಡ ಭಾರತʼ ಎಂಬ ಶೀರ್ಷಿಕೆಯಲ್ಲಿ ಸಂಪಾದಿಸಿದ್ದಾರೆ. ಚಂದನ ವಾಹಿನಿಯ ಗಮಕ ಸೌರಭ ಹೆಸರಿನಲ್ಲಿ ಹಳೆಗನ್ನಡ-ನಡುಗನ್ನಡ ಕಾವ್ಯಗಳಿಗೆ ತಲಸ್ಪರ್ಷಿ ವ್ಯಾಖ್ಯಾನ ನೀಡುತ್ತಿದ್ದಾರೆ. ಶ್ರೀಯುತರು ಗಮಕಕಲಾ ಪರಿಷತ್ತಿನ ಪ್ರಶಸ್ತಿ, 2015-16ನೇ ಸಾಲಿನ ಕರ್ನಾಟಕ ಸಂಗೀತ-ನೃತ್ಯ ಅಕಾಡೆಮಿಯ ʼಕರ್ನಾಟಕ ಕಲಾಶ್ರೀʼ ಪ್ರಶಸ್ತಿ ಇತ್ಯಾದಿ ಗೌರವಗಳಿಗೆ ಭಾಜನರಾಗಿದ್ದಾರೆ.

19. ಶಾಂತಲಾ ನಾಟ್ಯ ಪ್ರಶಸ್ತಿ: ಶ್ರೀಮತಿ ಪದ್ಮಿನಿ ರವಿ, ಬೆಂಗಳೂರು (ಭರತನಾಟ್ಯ)

ನಾಡಿನ ಖ್ಯಾತ ನೃತ್ಯಪಟು ಶ್ರೀಮತಿ ಪದ್ಮಿನಿ ರವಿಯವರು ದೇಶವಿದೇಶಗಳಲ್ಲಿ ಅನೇಕ ಪ್ರತಿಭಾನ್ವಿತ ಶಿಷ್ಯರನ್ನು ಹೊಂದಿದ್ದಾರೆ. ನಾಡಿನ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ, ಅಮೆರಿಕಾ ಮತ್ತು ಯುರೋಪಿನ ಹಲವೆಡೆಗಳಲ್ಲಿಯೂ ನೃತ್ಯಪ್ರದರ್ಶನ ನೀಡಿದ್ದಾರೆ. ಸಾರ್ಕ್‌ ಸಮ್ಮೇಳನ, ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರದ ಉತ್ಸವ, ಅಮೆರಿಕದ ಹಿಂದೂ ಅಸೋಸಿಯೇಷನ್‌ನ ಆಶ್ರಯದಲ್ಲಿ ರಾಜ್ಯ ಅಕಾಡೆಮಿಯ, ಮದರಾಸ್‌ ಉತ್ಸವ ಮತ್ತು ನೃತ್ಯಗ್ರಾಮದ ವಸಂತ ಹಬ್ಬಗಳಲ್ಲಿ ತಮ್ಮ ನೃತ್ಯಪ್ರದರ್ಶನ ನೀಡಿದ್ದಾರೆ.

20. ಸಂತ ಶಿಶುನಾಳ ಷರೀಫ ಪ್ರಶಸ್ತಿ: ಪ್ರೊ. ಎಸ್‌. ಮಲ್ಲಣ್ಣ, ಚಾಮರಾಜನಗರ (ಸುಗಮ ಸಂಗೀತ)

ಪ್ರೊ. ಎಸ್.‌ ಮಲ್ಲಣ್ಣನವರು ನಾಡಿನ ಖ್ಯಾತ ಸುಗಮ ಸಂಗೀತ ಗಾಯಕರಾಗಿದ್ದಾರೆ. 1965ರಿಂದಲೂ ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರತಿವರ್ಷ ಪಿ. ಕಾಳಿಂಗರಾಯರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ನಡೆಸುತ್ತಾರೆ.

ವಚನ ಸಂಗೀತ, ಶಿಶುನಾಳ ತತ್ವಪದಗಳು, ದಾಸಶ್ರೇಷ್ಠರುಗಳ ಕುರಿತು ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ.

ಇವರು ದೇಶವಿದೇಶಗಳಲ್ಲಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.