ಬೆಟ್ಟದಪುರ: ಇಲ್ಲಿನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇತ್ತಿಚೆಗೆ ಆಯೋಜಿಸಿದ್ದ ಗಾಂಧಿ ಸ್ಮರಣೆ ಮತ್ತು ನವಜೀವನೋತ್ಸವ ಕಾರ್ಯಕ್ರಮದಲ್ಲಿ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ಸುಜ್ಞಾನ ನಿಧಿಯಲ್ಲಿ ನೀಡುವ ವಿದ್ಯಾರ್ಥಿ ವೇತನದ ಮಂಜೂರಾತಿ ಪತ್ರವನ್ನು ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ದೇಶವು ಪ್ರಗತಿಯಾಗಬೇಕಾದರೆ ಗ್ರಾಮಗಳ ಪ್ರಗತಿಯಾಗಬೇಕು ಎಂಬುದು ಮಹಾತ್ಮ ಗಾಂಧೀಜಿ ಅವರ ಕಲ್ಪನೆಯಾಗಿತ್ತು. ಅವರ ಆಶಯದಂತೆ ನಮ್ಮ ಖಾವಂದರು ಗ್ರಾಮೀಣ ಭಾಗದ ಜನರು ಸ್ವಾಭಿಮಾನಿಗಳಾಗಿ ಬದುಕಬೇಕು ಎಂದು ಹಲವು ಕಾರ್ಯಕ್ರಮಗಳ ಮೂಲಕ ಗ್ರಾಮ ಗ್ರಾಮಗಳಲ್ಲಿ ಪ್ರತಿಪಾದಿಸುತ್ತಿದ್ದಾರೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಆರ್ಥಿಕ ಸಹಾಯಧನ ನೀಡಲಾಗಿದೆ. ಸಂಘದ ಸದಸ್ಯರಿಗೆ ಸಂಪೂರ್ಣ ಸುರಕ್ಷಾ ಯೋಜನೆಯಡಿ ಹಣ ರೈತ ಚಿಕಿತ್ಸೆಯನ್ನು ನೀಡಿಸಲಾಗುತ್ತಿದೆ. ಗ್ರಾಮೀಣ ಭಾಗದ ದೇವಸ್ಥಾನಗಳ ಪುನರ್ ನಿರ್ಮಾಣಕ್ಕೆ ಧನಸಹಾಯ ಮಾಡಲಾಗುತ್ತಿದೆ ಎಂದರು.
ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷರಾದ ಲಕ್ಷ್ಮೀ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ನಿಕಟಪೂರ್ವ ರಾಜ್ಯಾಧ್ಯಕ್ಷ ಕೆ.ಸತೀಶ್ ಹೊನ್ನವಳ್ಳಿ, ಕೊಡಗು ಜಿಲ್ಲೆಯ ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಅಧ್ಯಕ್ಷ ಎ.ಟಿ. ರಂಗಸ್ವಾಮಿ, ಉಪಾಧ್ಯಕ್ಷ ಬಿ.ಜೆ.ದೇವರಾಜ್, ಯೋಜನೆಯ ನಿರ್ದೇಶಕಿ ಲೀಲಾವತಿ, ಸದಸ್ಯರಾದ ಎಚ್.ಡಿ.ರಾಜೇಂದ್ರ, ಚೌಡೇಗೌಡ, ಯೋಜನಾಧಿಕಾರಿ ಸಂತೋಷ್‌ಕುಮಾರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮಿತಾ, ಮೇಲ್ವಿಚಾರಕಿ ಕೀರ್ತಿ ಸೇರಿದಂತೆ ಸದಸ್ಯರು, ಸಂಸ್ಥೆಯ ಸಿಬ್ಬಂದಿ ಇದ್ದರು.