ನವದೆಹಲಿ: ಭಾರತವು ಮುಂದಿನ ದಶಕದಲ್ಲಿ ಬಾಹ್ಯಾಕಾಶ ಆರ್ಥಿಕತೆಗೆ ಜಾಗತಿಕ ಕೊಡುಗೆಯನ್ನು ಕನಿಷ್ಠ ಶೇ.10 ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಇದಕ್ಕೆ ಸಂಬಂಧಿಸಿದ ಇಸ್ರೋ(ISRO) ಯೋಜನೆಗಳನ್ನು ಬಹಿರಂಗಪಡಿಸಲಾಗಿದೆ.
ಪ್ರಸ್ತುತ ಶೇಕಡಾ 2 ರಷ್ಟಿದ್ದು, ಚಂದ್ರಯಾನ 4 ಮತ್ತು 5ರ ಕಾರ್ಯಾಚರಣೆಗಳಲ್ಲಿ ಬಾಹ್ಯಾಕಾಶ ಆರ್ಥಿಕತೆ ಹೆಚ್ಚಿಸುವ ಉದ್ದೇಶವಿದೆ ಎಂದು ಆಕಾಶವಾಣಿಯಲ್ಲಿ ಸರ್ದಾರ್ ಪಟೇಲ್ ಸ್ಮಾರಕ ಉಪನ್ಯಾಸ ನೀಡುವಾಗ ಇಸ್ರೋ ಮುಖ್ಯಸ್ಥ ಸೋಮನಾಥ್ ಹೀಗೆ ಹೇಳಿದರು.
ಬಾಹ್ಯಾಕಾಶಕ್ಕೆ ದೇಶದ ಮೊದಲ ಮಾನವಸಹಿತ ಮಿಷನ್ ಗಗನ ಯಾನವನ್ನು 2026 ರಲ್ಲಿ ಕೈಗೆತ್ತಿಕೊಳ್ಳಲಾಗುವುದು. ಸ್ಯಾಂಪಲ್ ರಿಟರ್ನ್ ಮಿಷನ್ ಚಂದ್ರಯಾನ್-4 ಅನ್ನು 2028 ರಲ್ಲಿ ಪ್ರಾರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ಭಾರತ-ಯುಎಸ್ ಜಂಟಿಯಾಗಿ ಎನ್ಐಎಸ್ಆರ್ ಮಿಷನ್ ಕೈಗೆತ್ತಿಕೊಂಡಿದ್ದು, ಇದು ಮುಂದಿನ ವರ್ಷ ಪ್ರಾರಂಭವಾಗುವ ಸಾಧ್ಯತೆಯಿದೆ. ಇದರ ಹೊರತಾಗಿ ಚಂದ್ರಯಾನ-5 ಮಿಷನ್ ನಡೆಯಲಿದೆ. ಇದು ಜಪಾನ್ ಬಾಹ್ಯಾಕಾಶ ಸಂಸ್ಥೆ(ಜೆಎಎಕ್ಸ್ಎ)ಯೊಂದಿಗೆ ನಡೆಸುವ ಜಂಟಿ ಚಂದ್ರಯಾನ ಮಿಷನ್ ಆಗಿರುತ್ತದೆ. ಇದಕ್ಕೆ ಲೂಪೆಕ್ಸ್ ಅಥವಾ ಚಂದ್ರನ ಧ್ರುವ ಪರಿಶೋಧನೆ ಎಂದು ಹೆಸರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಭಾರತದ ಲ್ಯಾಂಡರ್, ಜಪಾನ್ನ ರೋವರ್ ಸೇರಿಕೊಳ್ಳುತ್ತವೆ. ಅತ್ಯಂತ ಭಾರವಾದ ಕಾರ್ಯಾಚರಣೆ ಇದಾಗಿದೆ. ಚಂದ್ರಯಾನ-3 ರ ರೋವರ್ ಕೇವಲ 27 ಕೆಜಿ ತೂಕವಿತ್ತು. ಆದರೆ ಈ ಮಿಷನ್ 350 ಕೆಜಿ ರೋವರ್ ಅನ್ನು ಹೊತ್ತೊಯ್ಯುತ್ತದೆ. ಇದು ವಿಜ್ಞಾನಜಗತ್ತಿನ ಭಾರಿ ಮಿಷನ್ ಆಗಿದ್ದು, ಇದು ಚಂದ್ರನ ಮೇಲೆ ಮನುಷ್ಯರನ್ನು ಇಳಿಸಲು ನಮ್ಮನ್ನು ಒಂದು ಹೆಜ್ಜೆ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ವಿವರಿಸಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗಳನ್ನು ಬೆಂಬಲಿಸಿದ ಸೋಮನಾಥ್, ಹೊಸ ನೀತಿಗಳನ್ನು ಸಕ್ರಿಯಗೊಳಿಸುವುದರೊಂದಿಗೆ ವಲಯವನ್ನು ತೆರೆಯುವುದು ಮತ್ತು ಯುವ ಉದ್ಯಮಿಗಳು ತೋರಿದ ಉತ್ಸಾಹವು ಭಾರತದಲ್ಲಿ ರೋಮಾಂಚಕ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಿದೆ ಎಂದು ಹೇಳಿದರು.