Israel Strikes Qatar: ಕತಾರ್ ರಾಜಧಾನಿ ದೋಹಾದಲ್ಲಿ ಹಲವು ಸ್ಫೋಟಗಳು ನಡೆದಿದ್ದು, ಅದೇ ಸಮಯದಲ್ಲಿ ಹಮಾಸ್ ಸಂಘಟನೆಯ ನಾಯಕರನ್ನು ನಿರ್ಮೂಲನೆ ಮಾಡಲು ಗುರಿಯಾಗಿಸಿ ದೋಹಾ ಮೇಲೆ ಏರ್ಸ್ಟ್ರೈಕ್ ನಡೆಸಿರುವುದಾಗಿ ಇಸ್ರೇಲ್ ಸೇನೆ ಘೋಷಿಸಿದೆ. ಆದರೆ ಸ್ಥಳಗಳ ವಿವರಗಳನ್ನು ನೀಡಿಲ್ಲ ಎಂದು ಬುಧವಾರ(ಸೆ. 10) ವರದಿಯಾಗಿದೆ.
ದಾಳಿ ಬಗ್ಗೆ ಮಾಹಿತಿ ನೀಡಿರುವ ಇಸ್ರೇಲ್ ಸೇನೆ, ದೋಹಾದಲ್ಲಿರುವ ಹಮಾಸ್ ಭಯೋತ್ಪಾದಕ ಸಂಘಟನೆಯ ಹಿರಿಯ ನಾಯಕತ್ವವನ್ನು ಗುರಿಯಾಗಿಸಿಕೊಂಡು ಐಡಿಎಫ್ ಮತ್ತು ಐಎಸ್ಎ ನಿಖರವಾದ ದಾಳಿ ನಡೆಸಿವೆ. ಹಮಾಸ್‌ನ ಈ ಸದಸ್ಯರು ಭಯೋತ್ಪಾದಕ ಕಾರ್ಯಾಚರಣೆಗಳನ್ನು ವರ್ಷಗಳಿಂದ ಮುನ್ನಡೆಸಿದ್ದಾರೆ. 2023 ಅಕ್ಟೋಬರ್ 7ರಂದು ನಡೆದ ಕ್ರೂರ ಹತ್ಯಾಕಾಂಡಕ್ಕೆ ನೇರ ಹೊಣೆಗಾರರಾಗಿದ್ದಾರೆ. ಇಸ್ರೇಲ್ ವಿರುದ್ಧ ಯುದ್ಧವನ್ನು ಆಯೋಜಿಸುತ್ತಿದ್ದು, ಅದನ್ನು ನಿರ್ವಹಿಸುತ್ತಿದ್ದಾರೆ" ಎಂದು ಐಡಿಎಫ್ ಹೇಳಿದೆ.
ಇಸ್ರೇಲ್ ರಕ್ಷಣಾ ಪಡೆಗಳ ಜನರಲ್ ಸ್ಟಾಫ್ ಮುಖ್ಯಸ್ಥ ಇಯಾಲ್ ಜಮೀರ್ ವಿದೇಶದಲ್ಲಿರುವ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ ನಂತರ ಈ ದಾಳಿ ನಡೆದಿದೆ. ಹಮಾಸ್‌ನ ಹೆಚ್ಚಿನ ನಾಯಕತ್ವವು ವಿದೇಶದಲ್ಲಿದೆ, ಮತ್ತು ನಾವು ಅವರನ್ನೂ ತಲುಪುತ್ತೇವೆ ಎಂದು ಆಗಸ್ಟ್ 31 ರಂದು ಜಮೀರ್ ಹೇಳಿದ್ದರು.
ಇಸ್ರೇಲ್ ಸೇನೆ ದಾಳಿಗೆ ಕತಾರ್ ಖಂಡನೆ
ದೋಹಾದ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿರುವ ಕತಾರ್, ಹಮಾಸ್‌ನ ರಾಜಕೀಯ ಬ್ಯೂರೋದ ಹಲವು ಸದಸ್ಯರು ವಾಸಿಸುತ್ತಿದ್ದ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ನ ದಾಳಿ ಹೇಡಿತನದ ಕೃತ್ಯ ಎಂದು ಕರೆದಿದೆ. ಇದು ಎಲ್ಲಾ ಅಂತರಾಷ್ಟ್ರೀಯ ಕಾನೂನುಗಳ ಮತ್ತು ಮಾನದಂಡಗಳ ಸ್ಪಷ್ಟ ಉಲ್ಲಂಘನೆ. ಈ ದಾಳಿಯು ಕತಾರ್‌ಗಳು ಮತ್ತು ಕತಾರ್‌ನಲ್ಲಿರುವ ನಿವಾಸಿಗಳ ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಬೆದರಿಕೆ ಒಡ್ಡುತ್ತದೆ ಎಂದು ಕಿಡಿಕಾರಿದೆ.
ದೋಹಾ ಮೇಲಿನ ಐಡಿಎಫ್ ದಾಳಿಗೆ ಇಸ್ರೇಲ್ ಶ್ಲಾಘನೆ
ಕತಾರ್ನ ದೋಹಾ ಮೇಲಿನ ದಾಳಿಯನ್ನು ಇಸ್ರೇಲ್‌ನ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್, ಮಿಲಿಟರಿಯ ದಾಳಿಯನ್ನು ಶ್ಲಾಘಿಸಿದ್ದಾರೆ. ಭಯೋತ್ಪಾದಕರು ಜಗತ್ತಿನ ಯಾವುದೇ ಭಾಗದಲ್ಲಿ ಇಸ್ರೇಲ್‌ನಿಂದ ವಿನಾಯಿತಿ ಪಡೆಯುವುದಿಲ್ಲ ಎಂದಿದ್ದಾರೆ.
ಕತಾರ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದೇಕೆ?
ಕತಾರ್ ಹಮಾಸ್‌ನ ಗಡಿಪಾರು ಮಾಡಲಾದ ನಾಯಕರ ನೆಲೆಯಾಗಿದೆ. ಗಾಜಾದ ಮೇಲಿನ ಇತ್ತೀಚಿನ ದಾಳಿ ನಡೆಯುವ ಮೊದಲೇ ಪ್ಯಾಲೆಸ್ಟೀನಿಯನ್ ಗುಂಪು ಮತ್ತು ಇಸ್ರೇಲ್ ನಡುವಿನ ಮಾತುಕತೆಗಳಲ್ಲಿ ವರ್ಷಗಳ ಕಾಲ ಮಧ್ಯವರ್ತಿಯಾಗಿಯೂ ಸೇವೆ ಸಲ್ಲಿಸಿದೆ.(ಏಜೆನ್ಸೀಸ್)