ನ್ಯೂಸ್

ಇರಾನ್​-ಇಸ್ರೇಲ್ ಸಂಘರ್ಷ; 1,000 ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ವಾಯುಪ್ರದೇಶ ಮುಕ್ತಗೊಳಿಸಿದ ಇರಾನ್|iran-israel

ಇರಾನ್ ಭಾರತಕ್ಕೆ ಮಾತ್ರ ತನ್ನ ಮುಚ್ಚಿದ ವಾಯುಪ್ರದೇಶವನ್ನು ಮುಕ್ತಗೊಳಿಸಿದೆ. ಇರಾನ್​ನ ವಿವಿಧ ನಗರಗಳಲ್ಲಿ ಸಿಲುಕಿರುವ ಕನಿಷ್ಠ 1,000 ಭಾರತೀಯ ವಿದ್ಯಾರ್ಥಿಗಳು ಸರ್ಕಾರದ ತುರ್ತು ಸ್ಥಳಾಂತರಿಸುವ ಕಾರ್ಯಕ್ರಮವಾದ ಆಪರೇಷನ್ ಸಿಂಧು ಭಾಗವಾಗಿ ಮುಂದಿನ ಎರಡು ದಿನಗಳಲ್ಲಿ ದೆಹಲಿಗೆ ಬಂದಿಳಿಯುವ ನಿರೀಕ್ಷೆಯಿದೆ.

ಟೆಹ್ರಾನ್: ಇಸ್ರೇಲ್ ಜೊತೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಮಹತ್ವದ ಬೆಳವಣಿಗೆಯೊಂದರಲ್ಲಿ ಸುಮಾರು 1,000 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಅನುಕೂಲವಾಗುವಂತೆ ಇರಾನ್ ಇಂದು (20) ಭಾರತಕ್ಕೆ ತನ್ನ ವಾಯುಪ್ರದೇಶವನ್ನು ತೆರೆದಿದೆ.

ಶುಕ್ರವಾರ ದೆಹಲಿಗೆ ಬಂದಿಳಿಯುವ ನಿರೀಕ್ಷೆ

ಇರಾನ್‌ನಲ್ಲಿ 4,000 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ವಾಸಿಸುತ್ತಿದ್ದಾರೆ ಮತ್ತು ಅವರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ಇದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇಸ್ರೇಲ್ ಮತ್ತು ಇರಾನ್​ ಪಡೆಗಳ ನಡುವೆ ನಡೆಯುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಮಧ್ಯೆ ಇರಾನಿನ ವಾಯುಪ್ರದೇಶವು ಹೆಚ್ಚಿನ ಅಂತರರಾಷ್ಟ್ರೀಯ ವಿಮಾನಗಳಿಗೆ ಮುಚ್ಚಲ್ಪಟ್ಟಿದೆ.ಈ ಮಧ್ಯೆ ಯುದ್ಧಪೀಡಿತ ದೇಶದಿಂದ ತನ್ನ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಭಾರತಕ್ಕೆ ವಿಶೇಷ ಕಾರಿಡಾರ್ ಅನ್ನು ನೀಡಲಾಗಿದೆ.

ಮೊದಲ ವಿಮಾನವು ಶುಕ್ರವಾರ ರಾತ್ರಿ 11:00 ಗಂಟೆಗೆ ದೆಹಲಿಯಲ್ಲಿ ಇಳಿಯುವ ನಿರೀಕ್ಷೆಯಿದ್ದು, ಎರಡನೇ ಮತ್ತು ಮೂರನೇ ವಿಮಾನಗಳು ಶನಿವಾರ ಬರುವ ನಿರೀಕ್ಷೆ ಇದೆ.

(ಏಜೆನ್ಸೀಸ್)

ಇರಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ಭಾರತ 'ಆಪರೇಷನ್ ಸಿಂಧು' ಆರಂಭಿಸಿದೆ. ಇಸ್ರೇಲ್ ಜೊತೆಗಿನ ಪರ್ಷಿಯನ್ ಕೊಲ್ಲಿ ರಾಷ್ಟ್ರದ ಸಂಘರ್ಷ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣದ ಕಾರಣ, ಇರಾನ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಬುಧವಾರ 'ಆಪರೇಷನ್ ಸಿಂಧು' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದಲ್ಲದೆ ಕೆಲವು ವಿದ್ಯಾರ್ಥಿಗಳು ಗಾಯಗೊಂಡ ಬಳಿಕ ಇರಾನ್ ವಿದೇಶಾಂಗ ಸಚಿವಾಲಯವು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.