ಜೆರುಸಲೇಂ: ಲೆಬನಾನಿನ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾಗೆ ಮತ್ತೊಂದು ಅನಿರೀಕ್ಷಿತ ಹೊಡೆತ ಬಿದ್ದಿದೆ. ಭಾನುವಾರ(ಸೆ.29) ಇಸ್ರೇಲ್(Israel) ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಪ್ರಮುಖ ನಾಯಕ ನಬಿಲ್ ಕೌಕ್ ಹತ್ಯೆಯಾಗಿದ್ದಾನೆ.
ಹಿಜ್ಬುಲ್ಲಾದ ಉಪ ಮುಖ್ಯಸ್ಥ ನಬಿಲ್ ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಸೇನೆ ಬಹಿರಂಗಪಡಿಸಿದೆ. ಆದರೆ, ಈ ಬಗ್ಗೆ ಹಿಜ್ಬುಲ್ಲಾದಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.
ಕಳೆದ ಕೆಲವು ವಾರಗಳಿಂದ ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸುತ್ತಿದ್ದು, ಹಿಜ್ಬುಲ್ಲಾದ ಹಲವಾರು ಹಿರಿಯ ಕಮಾಂಡರ್‌ಗಳು ಕೊಲ್ಲಲ್ಪಟ್ಟಿದ್ದಾರೆ. ಶುಕ್ರವಾರ(ಸೆ.27)ದ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ (64) ಹತ್ಯೆಯಾಗಿದ್ದರು.
ಇನ್ನು ನಬಿಲ್ 1995 ರಿಂದ 2010 ರವರೆಗೆ ದಕ್ಷಿಣ ಲೆಬನಾನ್‌ನಲ್ಲಿ ಸಂಘಟನೆ ಬಲಪಡಿಸಿದ್ದು, ಇತ್ತೀಚೆಗೆ ಲೆಬೆನಾನ್ನ ಮಿಲಿಟರಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ. 2020 ರಲ್ಲಿ ಅಮೆರಿಕಾ ಈತನ ಮೇಲೆ ನಿರ್ಬಂಧ ವಿಧಿಸಿತ್ತು. ಹಿಜ್ಬುಲ್ಲಾ ಇನ್ನೊಬ್ಬ ಪ್ರಮುಖ ನಾಯಕನನ್ನು ಕಳೆದುಕೊಂಡಿರುವುದು ಗಮನಾರ್ಹವಾಗಿದೆ.