ನ್ಯೂಸ್

ಇಸ್ರೇಲ್-ಹಮಾಸ್ ಸಂಘರ್ಷ; ಶಾಂತಿ ಒಪ್ಪಂದಕ್ಕೆ ಹಮಾಸ್ ಒಪ್ಪಿಗೆ; ಟ್ರಂಪ್​ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ| PM Modi

PM Modi: ಎರಡು ವರ್ಷಗಳ ಹಮಾಸ್​-ಇಸ್ರೇಲ್ ಯುದ್ಧ ಕೊನೆಗೊಳ್ಳುವ ಅಂತ ತಲುಪಿದ್ದು, 20 ಅಂಶಗಳ ಗಾಜಾ ಶಾಂತಿ ಒಪ್ಪಂದಕ್ಕೆ ಹಮಾಸ್ ಉಗ್ರ ಸಂಘಟನೆ ಒಪ್ಪಿಕೊಂಡಿದೆ. ಈ ಹಿನ್ನೆಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ(ಅ. 04) ಅಭಿನಂದನೆ ಸಲ್ಲಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಗಾಜಾದಲ್ಲಿ ಶಾಂತಿ ಪ್ರಯತ್ನಗಳು ನಿರ್ಣಾಯಕ ಪ್ರಗತಿ ಸಾಧಿಸುತ್ತಿರುವುದರಿಂದ ಅಧ್ಯಕ್ಷ ಟ್ರಂಪ್ ಅವರ ನಾಯಕತ್ವವನ್ನು ಸ್ವಾಗತಿಸುತ್ತೇವೆ. ಒತ್ತೆಯಾಳುಗಳ ಬಿಡುಗಡೆಯ ಸೂಚನೆಗಳು ಮಹತ್ವದ ಹೆಜ್ಜೆಯಾಗಿದೆ. ಶಾಶ್ವತ ಮತ್ತು ನ್ಯಾಯಯುತ ಶಾಂತಿಗಾಗಿ ಎಲ್ಲಾ ಪ್ರಯತ್ನಗಳಿಗೆ ಬೆಂಬಲಿಸುವುದನ್ನು ಭಾರತ ಮುಂದುವರಿಸುತ್ತದೆ ಎಂದು ಹೇಳಿದ್ದಾರೆ.

ಟ್ರಂಪ್ ಅವರ 20 ಅಂಶಗಳ ಗಾಜಾ ಶಾಂತಿ ಒಪ್ಪಂದದ ಮೊದಲನೆಯದಾಗಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಸಂಘಟನೆ ಒಪ್ಪಿಕೊಂಡಿದೆ. ಎರಡು ಕಡೆಯವರು ಯುದ್ಧವನ್ನು ನಿಲ್ಲಿಸುವುದು, ಇಸ್ರೇಲ್ ವಶಪಡಿಸಿಕೊಂಡ ಪ್ರದೇಶದಿಂದ ಹಿಂದೆ ಸರಿಯುವುದು. ಪ್ಯಾಲೆಸ್ಟೈನ್ ಪ್ರಜೆಗಳನ್ನು ಇಸ್ರೇಲ್ ಬಿಡುಗಡೆ ಮಾಡುವುದು, ನೆರವು, ಪ್ಯಾಲೆಸ್ಟೈನ್ ಪುನರ್ ನಿರ್ಮಾಣ ಸೇರಿದಂತೆ ಹಲವು ಅಂಶಗಳು ಸೇರಿವೆ.

ಈ ಎಲ್ಲಾ ಅಂಶಗಳ ಒಪ್ಪಂದಕ್ಕೆ ಇತ್ತೀಚೆಗೆ ಅಮೆರಿಕಾಕ್ಕೆ ಭೇಟಿ ನೀಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೊದಲು ಒಪ್ಪಿಕೊಂಡಿದ್ದರು. ಅದನ್ನು ಸ್ವಾಗತಿಸಿದ್ದ ಟ್ರಂಪ್, ಭಾನುವಾರದೊಳಗೆ ಹಮಾಸ್ ಸಂಘಟನೆ ಶಾಂತಿ ಒಪ್ಪಂದವನ್ನು ಒಪ್ಪಿಕೊಳ್ಳಬೇಕು ಎಂದು ಸೂಚಿಸಿದ್ದರು. ಇಲ್ಲದಿದ್ದೆರೆ ಅದನ್ನು ನಾಶ ಮಾಡಲು ಇಸ್ರೇಲ್​ಗೆ ಅಮೆರಿಕಾ ಸಂಪೂರ್ಣ ಸಹಕಾರ ನೀಡಲಿದೆ ಎಂದು ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆ ಶುಕ್ರವಾರವೇ ಹೇಳಿಕೆ ಬಿಡುಗಡೆ ಮಾಡಿರುವ ಹಮಾಸ್, ಸಂಘಟನೆಯ ಹಿಡಿತದಲ್ಲಿರುವ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಒಪ್ಪಿಕೊಂಡಿದ್ದು, ಹಾಗೆಯೇ ಅಧಿಕಾರವನ್ನು ಪ್ಯಾಲೆಸ್ಟೈನ್​ಗೆ ಹಸ್ತಾಂತರಿಸಲು ಸಿದ್ಧವಾಗಿದೆ. ಆದರೆ ಕೆಲವು ಮಾತುಕತೆಗಳು ನಡೆಯಬೇಕು ಎಂದು ಹೇಳಿದೆ. (ಏಜೆನ್ಸೀಸ್)